ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತದ ಹಾಕಿ ತಂಡಗಳು ವಿಶ್ವ ರ್‍ಯಾಂಕಿಂಗ್‌ನಲ್ಲಿ ಉತ್ತಮ ಪ್ರಗತಿ ಸಾಧಿಸಿವೆ.
ಪುರುಷರ ತಂಡ 3ನೇ, ವನಿತಾ ತಂಡ 8ನೇ ರ್‍ಯಾಂಕಿಂಗ್ ಗಳಿಸಿದೆ. ಇವು ಎರಡೂ ತಂಡಗಳ ಈ ವರೆಗಿನ ಸರ್ವಶ್ರೇಷ್ಠ ರ್‍ಯಾಂಕಿಂಗ್ ಆಗಿರುವುದು ವಿಶೇಷ.
41 ವರ್ಷಗಳ ಬಳಿಕ ಒಲಿಂಪಿಕ್ಸ್ ಪದಕವೊಂದನ್ನು ಜಯಿಸಿದ ಸಾಧನೆಯಿಂದ ಪುರುಷರ ತಂಡದ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಕಂಡುಬಂತು. ಹಾಗೆಯೇ ವನಿಯರೂ ಒಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯುತ್ತಮ ಸಾಧನೆಗೈದರು.
ಕಳೆದ ಮಾರ್ಚ್‌ನಲ್ಲಿ 4ನೇ ಸ್ಥಾನದಲ್ಲಿದ್ದುದು ಭಾರತೀಯ ಪುರುಷರ ಈ ವರೆಗಿನ ಅತ್ಯುತ್ತಮ ರ್‍ಯಾಂಕಿಂಗ್ ಆಗಿತ್ತು.
ವನಿತೆಯರ ಅತ್ಯುತ್ತಮ ರ್‍ಯಾಂಕಿಂಗ್ ಸ್ಥಾನವೆಂದರೆ 9. ಲಂಡನ್ ವಿಶ್ವಕಪ್‌ನಲ್ಲಿ (2018) ಕ್ವಾರ್ಟರ್ ಫೈನಲ್ ತಲುಪಿದಾಗ ಈ ಎತ್ತರ ತಲುಪಿದ್ದರು. ಇದೀಗ ಟೋಕಿಯೊ ಸಾಧನೆಯಿಂದ ಇನ್ನೂ ಒಂದು ಸ್ಥಾನ ಮೇಲೇರಿದ್ದಾರೆ.
ಪುರುಷರ ವಿಭಾಗದಲ್ಲಿ ಬೆಲ್ಜಿಯಂ ಅಗ್ರಸ್ಥಾನಿಯಾಗಿದೆ (2,716). ಆಸ್ಟ್ರೇಲಿಯ ದ್ವಿತೀಯ ಸ್ಥಾನದಲ್ಲಿದೆ (2642). ಭಾರತದ ಅಂಕ 2,362.