ದುಬೈ:ದುಬೈನಲ್ಲಿ ನೆಲೆಸಿದ್ದ 33 ವರ್ಷದ ಭಾರತೀಯ ವ್ಯಕ್ತಿಯೊಬ್ಬರ ಮೇಲೆ ಮೂವರು ಮುಸುಧಾರಿ ಪಾಕಿಸ್ತಾನಿ ದರೋಡೆಕೋರರು ದಾಳಿ ನಡೆಸಿ, ಲ್ಯಾಪ್ ಟಾಪ್, ಮೊಬೈಲ್ ಫೋನ್ ಹಾಗೂ ನಗದು ಹಣದೊಂದಿಗೆ ಪರಾರಿಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಭಾನುವಾರ ದುಬೈ ನ್ಯಾಯಾಲದಲ್ಲಿ ವಿಚಾರಣೆ ನಡೆದ ಸಂದರ್ಭದಲ್ಲಿ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್ ತಿಂಗಳಿನಲ್ಲಿ ತಾನು ದುಬೈನ ಬುರ್ ಪ್ರದೇಶದಲ್ಲಿನ ಮನೆಯಲ್ಲಿ ಮಲಗಿದ್ದ ವೇಳೆ ಮೂವರು ಪಾಕಿಸ್ತಾನಿಯರು ಬಾಗಿಲು ಮುರಿದು ಒಳ ನುಗ್ಗಿ ಈ ಕೃತ್ಯ ಎಸಗಿರುವುದಾಗಿ ಭಾರತೀಯ ವ್ಯಕ್ತಿ ತಿಳಿಸಿದ್ದಾರೆ.
ಕಬ್ಬಿಣದ ಸಲಾಕೆಯಿಂದ ಭಾರತೀಯ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಲ್ಯಾಪ್ ಟಾಪ್, ಹಣ, ವಸ್ತುಗಳನ್ನು ದೋಚಿಕೊಂಡು ಹೋಗಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ. ದರೋಡೆಕೋರರು ತನ್ನ ಮುಖವನ್ನು ಪ್ಲಾಸ್ಟಿಕ್ ಬ್ಯಾಗ್ ನಿಂದ್ ಮುಚ್ಚಿ ಬಾಯಿಗೆ ಗಮ್ ಟೇಪ್ ಹಾಕಿರುವುದಾಗಿ ವಿವರಿಸಿದ್ದಾರೆ.
ನನ್ನ ಮುಖಕ್ಕೆ ಪ್ಲಾಸ್ಟಿಕ್ ನಿಂದ ಬಿಗಿಯುವ ವೇಳೆ ನಾನು ತೀವ್ರವಾಗಿ ಪ್ರತಿರೋಧಿಸಿದ್ದೆ. ಈ ಸಂದರ್ಭದಲ್ಲಿ ಒಬ್ಬ ದರೋಡೆಕೋರನ ಮಾಸ್ಕ್ ಅನ್ನು ಹಿಡಿದು ಎಳೆದ ಪರಿಣಾಮ ನಾನು ಆತನ ಮುಖ ಗಮನಿಸಿದ್ದೆ ಎಂದು ಭಾರತೀಯ ವ್ಯಕ್ತಿ ಕೋರ್ಟ್ ವಿಚಾರಣೆ ವೇಳೆ ತಿಳಿಸಿದ್ದಾರೆ.
ಕೊನೆಗೆ ಪ್ಲಾಸ್ಟಿಕ್ ಬ್ಯಾಗ್ ಮತ್ತು ಬಾಯಿಗೆ ಅಂಟಿಸಿದ್ದ ಗಮ್ ಟೇಪ್ ತೆಗೆದು, ಕೋಣೆಯಿಂದ ಹೊರಗೆ ಬಂದು, ನಾನು ನನ್ನ ರೂಂಮೇಟ್ ಹತ್ತಿರ ಹೋಗಿ ಮೂವರನ್ನು ಹಿಡಿಯಲು ಬೆನ್ನಟ್ಟಿ ಹೋಗಿದ್ದೇವು. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಒಬ್ಬಾತ ಸಿಕ್ಕಿಬಿದ್ದಿದ್ದು, ಇನ್ನುಳಿದ ಇಬ್ಬರು ಪರಾರಿಯಾಗಿರುವುದಾಗಿ ವರದಿ ತಿಳಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 9ಕ್ಕೆ ನಡೆಯಲಿದೆ ಎಂದು ವರದಿ ಹೇಳಿದೆ.