ಮುಂಬೈ: ಯಾವುದೇ ಕ್ರೀಡಾ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ವ್ಯಕ್ತಿಯ ಆಟದ ಕೌಶಲ್ಯ, ಫಾರ್ಮ್ ಮುಂತಾದ ಅಂಶಗಳನ್ನು ಪರಿಗಣಿಸಲಾಗುತ್ತದೆ. ಆದರೆ ಭಾರತದ ರಾಷ್ಟ್ರೀಯ ಫುಟ್ಬಾಲ್ ಆಟಗಾರರ ಆಯ್ಕೆ ಹಿಂದೆ ಜ್ಯೋತಿಷಿಯೊಬ್ಬರ ಪ್ರಭಾವವಿದೆ ಎಂದು ವರದಿಯಾಗಿದೆ.
ಜ್ಯೋತಿಷಿಯ ಸಲಹೆಯ ಆಧಾರದ ಮೇಲೆ ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಕ್ ರಾಷ್ಟ್ರೀಯ ಫುಟ್ಬಾಲ್ ತಂಡದ ತಂಡವನ್ನು ಆಯ್ಕೆ ಮಾಡಿದ್ದಾರೆ ಎಂದು ವರದಿಯೊಂದು ಹೇಳಿದೆ.
ಸ್ಟಿಮ್ಯಾಕ್ ಆಟಗಾರರ ಡೇಟಾವನ್ನು ಜ್ಯೋತಿಷಿಯೊಂದಿಗೆ ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ನಿರ್ದಿಷ್ಟ ದಿನದಂದು ಆಡಬಹುದಾದ ಆಟಗಾರರು ಮತ್ತು ಆಡಬಾರದ ಆಟಗಾರರ ಹೆಸರನ್ನು ಜ್ಯೋತಿಷಿಯು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಅವರ ಮೂಲಕ ಮುಖ್ಯ ಕೋಚ್ ಸ್ಟಿಮ್ಯಾಕ್ ಅವರು ಜ್ಯೋತಿಷಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದರು ಎಂದು ವರದಿ ಹೇಳಿದೆ.
ಇದನ್ನೂ ಓದಿ:Shimoga; ಸಿದ್ದರಾಮಯ್ಯ ಓರ್ವ ಅವಕಾಶವಾದಿ ರಾಜಕಾರಣಿ..: ಈಶ್ವರಪ್ಪ ವಾಗ್ದಾಳಿ
ಭಾರತ ತಂಡವು ಏಷ್ಯನ್ ಕಪ್ ಗೆ ಅರ್ಹತೆ ಪಡೆಯುತ್ತದೆಯೇ ಎಂಬ ಆತಂಕದಲ್ಲಿ, ದಾಸ್ ಜ್ಯೋತಿಷಿಯ ಸಹಾಯವನ್ನು ಕೋರಿದರು. ಜ್ಯೋತಿಷಿಯು ಸ್ಟಿಮ್ಯಾಕ್ ಹೆಸರುಗಳ ಮುಂದೆ, “ಗುಡ್”, “ತುಂಬಾ ಚೆನ್ನಾಗಿ ಆಡಬಹುದು”, “ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸುವ ಅಗತ್ಯವಿದೆ”; “ದಿನ ಚೆನ್ನಾಗಿಲ್ಲ”, “ಅವನಿಗೆ ಬಹಳ ಒಳ್ಳೆಯ ದಿನ ಆದರೆ ಆಕ್ರಮಣಕಾರಿಯಾಗಿ ಆಡಬಹುದು”, “ಈ ದಿನಕ್ಕೆ ಈತನನ್ನು ಶಿಫಾರಸು ಮಾಡಲಾದು” ಎಂದು ಬರೆದಿದ್ದರು ಎಂದುಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕಳೆದ ವರ್ಷದ ಮೇ ಮತ್ತು ಜೂನ್ ನಡುವೆ ಸ್ಟಿಮ್ಯಾಕ್ ಮತ್ತು ಜ್ಯೋತಿಷಿಯ ನಡುವೆ ಸುಮಾರು 100 ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ವರದಿ ಹೇಳುತ್ತದೆ. ಈ ಅವಧಿಯಲ್ಲಿ, ಭಾರತವು ಜೋರ್ಡಾನ್ ಮತ್ತು ಮೂರು ಏಷ್ಯನ್ ಕಪ್ ಅರ್ಹತಾ ಪಂದ್ಯಗಳಲ್ಲಿ ಕಾಂಬೋಡಿಯಾ, ಅಫ್ಘಾನಿಸ್ತಾನ್ ಮತ್ತು ಹಾಂಗ್ ಕಾಂಗ್ ವಿರುದ್ಧ ಪಂದ್ಯಗಳನ್ನು ಆಡಿದೆ.
ಈ ಮೆಸೇಜ್ ಗಳು ಕೇವಲ ತಂಡದಲ್ಲಿನ ಆಯ್ಕೆ ವಿಷಯಗಳ ಕುರಿತು ಮಾತ್ರವಲ್ಲ, ಆಟಗಾರರ ಗಾಯ ಮತ್ತು ಪರ್ಯಾಯ ತಂತ್ರಗಳನ್ನು ಚರ್ಚಿಸಲಾಗಿದೆ ಎಂದು ವರದಿ ಹೇಳಿದೆ.
ಎರಡು ತಿಂಗಳ ಕಾಲ ಜ್ಯೋತಿಷಿಯ ಸೇವೆಗಾಗಿ 12ರಿಂದ 15 ಲಕ್ಷ ರೂ ಪಾವತಿಸಲಾಗಿದೆ ಎಂದು ವರದಿಯಾಗಿದೆ.