ದುಬೈ: ಈದ್ ಅಲ್ ಅಧಾ ಸಂದರ್ಭದಲ್ಲಿ ಭಾರತೀಯ ಮೂಲದ 24 ವರ್ಷದ ಇಂಜಿನಿಯರ್ ಆರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಯುಎಇನ ಶಾರ್ಜಾದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಮೃತಪಟ್ಟ ಸುಮೇಶ್ ಇಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದು, ಮೂಲತಃ ಕೇರಳದವರು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಸುಮೇಶ್ ಶಾರ್ಜಾದ ಅಲ್ ಧಾಯ್ಡ್ ನ ಬಹುಮಹಡಿ ಕಟ್ಟಡದಲ್ಲಿ ವಾಸವಾಗಿದ್ದರು.
ಆರನೇ ಮಹಡಿಯಲ್ಲಿ ನಿಂತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಸುಮೇಶ್ ಈ ದುರಂತ ನಡೆಯುವ ಮೊದಲು ಮೊಬೈಲ್ ಎಸೆದಿರುವುದಾಗಿ ವರದಿ ಹೇಳಿದೆ. ವರ್ಷದ ಹಿಂದಷ್ಟೇ ಯುಎಇಗೆ ಬಂದಿದ್ದ ಸುಮೇಶ್ ಶಾರ್ಜಾದಲ್ಲಿ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿ ಹೇಳಿದೆ.
ಸುಮೇಶ್ ಗೆ ವೈಯಕ್ತಿಕ ಸಮಸ್ಯೆ ಇದ್ದಿರಬೇಕು ಎಂದು ಆತನ ರೂಂಮೇಟ್ ತಿಳಿಸಿರುವುದಾಗಿ ವರದಿ ವಿವರಿಸಿದೆ. ಅಂದು ಈದ್ ಅಲ್ ಅಧಾ ಇದ್ದಿದ್ದರಿಂದ ನಮ್ಮ ಅಡುಗೆಯವ ಬಿರಿಯಾನಿ ಮಾಡಿದ್ದರು. ನಾವೆಲ್ಲರೂ ಒಟ್ಟು ಸೇರಿ ತಮಾಷೆ ಮಾಡಿಕೊಂಡಿದ್ದೇವು. ಸುಮೇಶ್ ಕೂಡಾ ನಮ್ಮೊಂದಿಗೆ ನಗುತ್ತಾ ಜತೆಗಿದ್ದ. ಆದರೆ ನಾವು ಯಾರು ಈ ಘಟನೆ ನಿರೀಕ್ಷಿಸಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸುಮೇಶ್ ಏನೋ ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದ ಎಂದು ನಮಗೆ ಕೆಲವೊಮ್ಮೆ ಗೊತ್ತಾಗುತ್ತಿತ್ತು. ಆ ಬಗ್ಗೆ ವಿಚಾರಿಸಿದರೆ ಆತ ಏನೋ ಸಮಜಾಯಿಷಿ ನೀಡಿ ವಿಚಾರವನ್ನು ಮುಚ್ಚಿಡುತ್ತಿದ್ದ ಎಂದು ರೂಂ ಮೇಟ್ ದಿಲೀಪ್ ಕುಮಾರ್ ತಿಳಿಸಿರುವುದಾಗಿ ವರದಿ ತಿಳಿಸಿದೆ.
ಪೊಲೀಸರು ಸುಮೇಶ್ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.