Advertisement

ಕ್ರಿಕೆಟ್‌ಗೆ ಈಗ ಪಿಚ್‌ ಫಿಕ್ಸಿಂಗ್‌ ಕಾಟ

09:02 AM Oct 26, 2017 | |

ನವದೆಹಲಿ: ಮ್ಯಾಚ್‌ಫಿಕ್ಸಿಂಗ್‌, ಸ್ಪಾಟ್‌ ಫಿಕ್ಸಿಂಗ್‌ ಹಗರಣದ ನಂತರ ಇದೀಗ ಪಿಚ್‌ ಫಿಕ್ಸಿಂಗ್‌…!  ಈಗಾಗಲೇ ಹಲವಾರು
ಮಾದರಿಯ ಫಿಕ್ಸಿಂಗ್‌ನಿಂದ ಕಂಗೆಟ್ಟಿರುವ ಭಾರತೀಯ ಕ್ರಿಕೆಟ್‌, ಇದೀಗ ಹೊಸ ಮಾದರಿಯ ಪಿಚ್‌ ಫಿಕ್ಸಿಂಗ್‌ನಿಂದ ಮತ್ತಷ್ಟು ಕಳಂಕ ಹೊತ್ತುಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ.

Advertisement

ಭಾರತ-ನ್ಯೂಜಿಲೆಂಡ್‌ ನಡುವಿನ ಪುಣೆ ಪಂದ್ಯಕ್ಕೂ ಮುನ್ನ ಪಿಚ್‌ ಅನ್ನು ಬೇಕಾದಂತೆ ಬದಲಾಯಿಸಿ ಕೊಡುವುದಾಗಿ ಬುಕಿಗೆ ಹೇಳಿರುವ ಕ್ಯೂರೇಟರ್‌ ಒಬ್ಬರು, ಹೊಸ ಮಾದರಿಯ ಕ್ರಿಕೆಟ್‌ ಭ್ರಷ್ಟಾಚಾರ ತೆರೆದಿಟ್ಟಿದ್ದಾರೆ. ಆಂಗ್ಲವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ಆಘಾತಕಾರಿ ವಿಚಾರ ಬಹಿರಂಗವಾಗಿದ್ದು, ಕೆಲಹೊತ್ತು ಬುಧವಾರದ ಪಂದ್ಯವೇ ತೂಗುಯ್ನಾಲೆಯಲ್ಲಿತ್ತು. ಕಡೆಗೆ ಐಸಿಸಿ ಮಧ್ಯಪ್ರವೇಶಿಸಿ ಪಂದ್ಯ ನಡೆಯುವುದಕ್ಕೆ ಅನುವು ಮಾಡಿಕೊಟ್ಟಿದೆ.

ಇಂಥ ಭರವಸೆ ಕೊಟ್ಟಿರುವುದು ಪುಣೆ ಮೈದಾನದ ಪಿಚ್‌ ಕ್ಯುರೇಟರ್‌ ಪಾಂಡುರಂಗ ಸಲ್ಗಾಂವ್ಕರ್‌. ಈ ವಿಚಾರ  ಹಿರಂಗವಾಗುತ್ತಿದ್ದಂತೆ ಎಚ್ಚೆತ್ತ ಬಿಸಿಸಿಐ ಪಾಂಡುರಂಗ ಅವರನ್ನು ಎಲ್ಲ ರೀತಿಯ ಹುದ್ದೆಗಳಿಂದ ಕಿತ್ತು ಹಾಕಿ, ತನಿಖೆಗೂ ಆದೇಶಿಸಿದೆ. ಇದಷ್ಟೇ ಅಲ್ಲ, ಮಾನ್ಯತೆಯಿಲ್ಲದ ವ್ಯಕ್ತಿಗಳಿಗೆ ಅಂಕಣ ದೊಳಕ್ಕೆ ಪ್ರವೇಶ ನೀಡಿದ್ದು ಹೇಗೆ? ಇಲ್ಲಿ ಬಿಸಿಸಿಐ ಸಿಬ್ಬಂದಿ ಎಲ್ಲಿ ಎಡವಿದರು ಎಂಬ ಪ್ರಶ್ನೆಗೂ ಉತ್ತರ ಹುಡುಕ ಲಾಗುತ್ತಿದೆ. ಪುಣೆ ಪಿಚ್‌ ಕುರಿತು ಭಾರೀ ವಿವಾದ ಎದ್ದಿದ್ದರೂ ಬುಧವಾರದ ಭಾರತ-ನ್ಯೂಜಿಲೆಂಡ್‌ ನಡುವಿನ 2ನೇ ಏಕದಿನ ಪಂದ್ಯ ಎಂದಿನಂತೆ ನಡೆದಿದೆ. 

ಪಿಚ್ಚನ್ನು ಬದಲಿಸಿರುವ ಆರೋಪವಿರುವುದರಿಂದ ಪಂದ್ಯನಡೆಸಬೇಕೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಆದ್ದರಿಂದ ಪಿಚ್‌ ಅನ್ನು ಪರಿಶೀಲಿಸಿದ ಬಿಸಿಸಿಐ ಕ್ಯುರೇಟರ್‌ ಮ್ಹಾಮೂನ್ಕರ್‌ ಮತ್ತು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ರೆಫ್ರಿ, ಪಿಚ್‌ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಪಂದ್ಯವನ್ನು ನಡೆಸಬಹುದು ಎಂದು ಒಪ್ಪಿಗೆ ನೀಡಿದರು.

ಎಸಿಯು ಮೇಲೆ ಆಕ್ರೋಶ: ನೀರಜ್‌ ಕುಮಾರ್‌ ಮುಖ್ಯಸ್ಥರಾಗಿರುವ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ಈ ಪ್ರಕರಣ ನಿಭಾಯಿಸುವಲ್ಲಿ ಪೂರ್ಣ ವಿಫ‌ಲವಾಗಿದೆ ಎಂದು ಆರೋಪಿಸಲಾಗಿದೆ. ಆದರೆ ನೀರಜ್‌ ಬೆಂಬಲಕ್ಕೆ ಧಾವಿಸಿರುವ ಆಡಳಿತಾಧಿಕಾರಿಗಳ ಮುಖ್ಯಸ್ಥ ವಿನೋದ್‌ ರಾಯ್‌, ಕೇವಲ ಮೂವರು ವ್ಯಕ್ತಿಗಳ ಸಮಿತಿಯಿಂದ ಎಲ್ಲಕಡೆ ಕಣ್ಣಿಡಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

Advertisement

ನಡೆದಿದ್ದೇನು?
ಅ.23ರಂದು ಇಂಡಿಯಾ ಟೀವಿ ವರದಿಗಾರ ಪಾಂಡುರಂಗ ಸಲ್ಗಾಂ ವ್ಕರ್‌ಗೆ ತನ್ನನ್ನು ಬುಕಿಯೆಂದು ಪರಿಚಯಿಸಿ
ಕೊಳ್ಳುತ್ತಾರೆ (ಇಂಡಿಯಾ ಟೀವಿ ವಿಡಿಯೊದಲ್ಲಿ ಈ ಕುರಿತು ಎಲ್ಲೂ ಮಾಹಿತಿಯಿಲ್ಲ). ಅವರನ್ನು ನೇರ ಅಂಕಣಕ್ಕೇ ಪಾಂಡುರಂಗ ಕರೆದೊಯ್ಯುತ್ತಾರೆ. ಪಿಚ್‌ ಮೇಲೆ ಓಡಾಡಲು ಅವಕಾಶ ನೀಡುತ್ತಾರೆ. ಅ. 24ರಂದು ಸಂಜೆ ಕಾರೊಂದರಲ್ಲಿ ಪಿಚ್‌ ಬಗ್ಗೆ ಪಾಂಡುರಂಗ ಅವರು ಮಾಹಿತಿ ನೀಡುತ್ತಾರೆ. ಪಿಚ್ಚನ್ನು ವರದಿಗಾರ ಕೇಳಿದಂತೆ ಬದಲಿಸಲು ಒಪ್ಪುತ್ತಾರೆ. ಕೆಲವು ನಿರ್ದಿಷ್ಟ ಬದಲಾವಣೆ ಮಾಡುವುದಾಗಿ ಹೇಳಿಕೊಳ್ಳುತ್ತಾರೆ.

ಭಾರತ ಕ್ರಿಕೆಟ್‌ನ ಭವಿಷ್ಯವೆನಿಸಿಕೊಂಡಿದ್ದ ಸಲ್ಗಾಂವ್ಕರ್‌!
ಪಾಂಡುರಂಗ ಅವರು ಮಹಾರಾಷ್ಟ್ರದ ಮಾಜಿ ವೇಗದ ಬೌಲರ್‌. ಸದ್ಯ ಪುಣೆ ಪಿಚ್‌ ಕ್ಯುರೇಟರ್‌. 1974ರ ವೇಳೆಗೆ
ಭಾರತ ಕ್ರಿಕೆಟ್‌ ತಂಡದ ಭವಿಷ್ಯದ ಪ್ರತಿಭೆಯೆಂದು ಗುರ್ತಿಸಲ್ಪಟ್ಟಿದ್ದರು. ಸ್ವತಃ ಸುನೀಲ್‌ ಗಾವಸ್ಕರ್‌ ಇದನ್ನು
ಹೇಳಿಕೊಂಡಿದ್ದಾರೆ. 1974ರ ಶ್ರೀಲಂಕಾದಲ್ಲಿ ಭಾರತವಾಡಿದ ಅನಧಿಕೃತ ಟೆಸ್ಟ್‌ ಸರಣಿಯಲ್ಲಿ ಪಾಂಡುರಂಗ ಸ್ಥಾನ
ಪಡೆದಿದ್ದರು. ಅವರು 63 ಪ್ರಥಮದರ್ಜೆ ಪಂದ್ಯವಾಡಿ ಅತ್ಯಂತ ವೇಗವಾಗಿ 214 ವಿಕೆಟ್‌ ಗಳಿಸಿ ಪ್ರತಿಭಾವಂತರೆಂದು ಕರೆಸಿಕೊಂಡಿದ್ದಾರೆ.

ಸುಳ್ಳು ಮಾಹಿತಿ ನೀಡಿದರಾ ಸಲ್ಗಾಂವ್ಕರ್‌?
ದೇಶಾದ್ಯಂತ ಪುಣೆ ಪಿಚ್‌ ವಿವಾದ ಭಾರೀ ಗಲಾಟೆ ಸೃಷ್ಟಿಸಿರುವಾಗಲೇ ಕ್ಯುರೇಟರ್‌ ಪಾಂಡುರಂಗ ಸಲ್ಗಾಂವ್ಕರ್‌ ಅವರು “ಬುಕಿಗೆ’ ನೀಡಿದ ಮಾಹಿತಿ ಸುಳ್ಳು ಎನ್ನುವ ಅನುಮಾನವೂ ಮೂಡಿದೆ. ಇದಕ್ಕೆ ಕಾರಣ ಭಾರತ-ನ್ಯೂಜಿಲೆಂಡ್‌ ನಡುವಿನ 2ನೇ ಏಕದಿನ ಪಂದ್ಯ. ಬುಕಿಗೆ ಸಲ್ಗಾಂವ್ಕರ್‌ ಅವರು ಮಾಹಿತಿ ನೀಡುವಾಗ, ಪುಣೆ ಪಿಚ್ಚನ್ನು ಬ್ಯಾಟಿಂಗ್‌ ಪಿಚ್‌ ಎಂದು ವರ್ಣಿಸಿದ್ದರು. 340ರಷ್ಟು
ರನ್‌ ಬರುವ ಸಾಧ್ಯತೆಯಿದೆ ಎಂದಿದ್ದರು. ಪಂದ್ಯ ಮುಗಿದಾಗ ನಡೆದಿದ್ದೇ ಬೇರೆ. ನ್ಯೂಜಿಲೆಂಡ್‌ ಕಳಪೆ 230 ರನ್‌ ಗಳಿಸಿದರೆ,
ಭಾರತ ಕೂಡ ಒದ್ದಾಡುತ್ತಲೇ ಈ ಗುರಿ ಮುಟ್ಟಿತು. ಬೌಲರ್‌ ಗಳೇ ಇಲ್ಲಿ ಮೇಲುಗೈ ಸಾಧಿಸಿದ್ದು ನೋಡಿದಾಗ ಸಲ್ಗಾಂವ್ಕರ್‌
ಸುಳ್ಳು ಹೇಳಿದ್ದಾರೆ ಎಂಬ ಅನುಮಾನ ದಟ್ಟವಾಗುತ್ತದೆ. ಇನ್ನೊಂದು ಅನುಮಾನ-ಒಂದು ಮೈದಾನದಲ್ಲಿ ಹಲವು ಪಿಚ್‌ಗಳಿರುತ್ತವೆ. ಬಿಸಿಸಿಐ ಕಡೆಯ ಹಂತದಲ್ಲಿ ಪಾಂಡುರಂಗ ಉಲ್ಲೇಖೀಸಿದ ಪಿಚ್‌ ಬಿಟ್ಟು ಬೇರೆ ಪಿಚ್‌ನಲ್ಲಿ ಪಂದ್ಯವಾಡಿಸಿರುವ ಸಾಧ್ಯತೆಯೂ ಇದೆ.

ಈ ಹಿಂದಿನ ಪುಣೆ ಪಿಚ್‌ ಫ‌ಲಿತಾಂಶ ಕೂಡ ಬೌಲಿಂಗ್‌ಗೆ ನೆರವು ನೀಡಿದೆ. ಅದೇ ಕಾರಣಕ್ಕೆ ಅದು ಕಳಪೆ ಪಿಚ್‌ ಎಂಬ ಹೆಸರು ಪಡೆದುಕೊಂಡಿತ್ತು. ಈ ವರ್ಷ ಫೆಬ್ರವರಿಯಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಟೆಸ್ಟ್‌ ಪಂದ್ಯ ಇಲ್ಲಿ ನಡೆದಿತ್ತು. ಆಗ ಆಸ್ಟ್ರೇಲಿಯಾ ಭಾರತವನ್ನು 333 ರನ್‌ಗಳಿಂದ ಸೋಲಿಸಿತ್ತು. ಈ ಎರಡೂ ಇನಿಂಗ್ಸ್‌ನಲ್ಲಿ ಭಾರತ ಕೇವಲ 105 ಮತ್ತು 107 ರನ್‌ಗಳಿಗೆ ಆಲೌಟಾಗಿತ್ತು. ಇದರಿಂದ ಪಿಚ್‌ ಕಳಪೆಯಾಗಿದೆ ಎಂದು ಐಸಿಸಿಯೂ ಕೆಂಗಣ್ಣು ಬೀರಿತ್ತು. ಇವೆಲ್ಲವನ್ನೂ ನೋಡಿದಾಗ ಹಿಂದಿನಿಂದಲೂ
ಈ ಪಿಚ್‌ ಬೌಲಿಂಗ್‌ಗೆ ನೆರವು ನೀಡಿದ್ದು ಸ್ಪಷ್ಟವಾಗುತ್ತದೆ. ಇದು ಗೊತ್ತಿದ್ದೂ ಸಲ್ಗಾಂವ್ಕರ್‌ ಮೇಲಿನಂತೆ ನುಡಿದಿದ್ದೇಕೆ ಎನ್ನುವುದು ಸದ್ಯದ ಕುತೂಹಲ.

ಪಿಚ್‌ ದಿಢೀರ್‌ ಬದಲಿಸಲು ಸಾಧ್ಯವೇ?
ಈ ವಿವಾದ ಸೃಷ್ಟಿಯಾದ ಕೂಡಲೇ ಹಲವು ಪ್ರಶ್ನೆಗಳು ಶುರುವಾಗಿವೆ. ಕ್ರಿಕೆಟ್‌ ತಜ್ಞರು, ಮಾಜಿ ಕ್ರಿಕೆಟಿಗರು ಹಲವು ಪ್ರಶ್ನೆಗಳನ್ನು ವ್ಯಕ್ತಪಡಿಸಿದ್ದಾರೆ. ಅ.24ರ ಸಂಜೆ ಪಿಚ್‌ ಅನ್ನು ಬದಲಿಸಿಕೊಡುತ್ತೇನೆಂದು ಪಾಂಡುರಂಗ ಹೇಳಿಕೊಂಡಿದ್ದಾರೆ. ಪಂದ್ಯವಿರುವುದು ಅದರ ಮರುದಿನ ಅಂದರೆ ಅ.25ರಂದು. ಕೇವಲ ಕೆಲವೇ ಗಂಟೆಗಳಲ್ಲಿ ಪಿಚ್‌ ಅನ್ನು ಹೇಗೆ ಬದಲಿಸಲು ಸಾಧ್ಯ ಎಂದು ತಜ್ಞರು  ಪ್ರಶ್ನಿಸುತ್ತಾರೆ.ಸಾಮಾನ್ಯವಾಗಿ ಪಿಚ್‌ ಅನ್ನು ಬಿಸಿಸಿಐ ಕ್ಯುರೇಟರ್‌ ಕಣ್ಗಾವಲು ಮತ್ತು ಸೂಚನೆಯಡಿ ಸ್ಥಳೀಯ ಕ್ಯುರೇಟರ್‌ಗಳು ನಿರ್ಮಿಸುತ್ತಾರೆ. ಪ್ರತಿ ಹಂತದಲ್ಲಿ ಬಿಸಿಸಿಐ ಕಣ್ಗಾವಲು ಇದ್ದೇ ಇರುತ್ತದೆ. ಈ ಬಾರಿ ಪುಣೆ ಕ್ಯುರೇಟರ್‌ ಪಾಂಡುರಂಗ ಹಾಗೂ ಬಿಸಿಸಿಐ ಪಿಚ್‌ ಕ್ಯುರೇಟರ್‌ ರಮೇಶ್‌ ಮ್ಹಾಮೂನ್ಕರ್‌.

ಬದಲಿಸುವುದು ಹೇಗೆ ಸಾಧ್ಯ? 
ಒಂದು ಪಿಚ್‌ ಅನ್ನು ನಿರ್ಮಿಸಲು, ಹದಕ್ಕೆ ತರಲು ಕನಿಷ್ಠ 1 ವಾರ ಸಮಯ ಬೇಕಾಗುತ್ತದೆ. ಅದನ್ನು ದಿಢೀರನೆ ಬದಲಿಸಲು ಸಾಧ್ಯವೇ ಇಲ್ಲ ಎಂದು ತಜ್ಞರು ಹೇಳುತ್ತಾರೆ. ಪಿಚ್‌ ಮೇಲೆ ಸತತವಾಗಿ ಗಂಟೆ ಗಟ್ಟಲೆ ಓಡಾಡಿದರೆ ಅದರ ಸ್ವರೂಪ ಸ್ವಲ್ಪ ಮಟ್ಟಿಗೆ ಬದಲಾಗುತ್ತದೆ. ಆದ್ದರಿಂದ ಆಟಗಾರರಿಗೆ ಅದರ ಮೇಲೆ ಓಡಲು ಅವಕಾಶ ನೀಡುವುದಿಲ್ಲ. ಇಂತಹ ಸ್ಥಿತಿಯಲ್ಲಿ ಪಾಂಡುರಂಗ ಅವರು ಅದನ್ನು ಬದಲಿಸಬೇಕಾದರೆ ಹಲವರ ನೆರವು ತೆಗೆದು ಕೊಳ್ಳಬೇಕಾಗುತ್ತದೆ. ಆದರೆ ಹಾಗಾಗಿಲ್ಲ ಎಂದು ಹೇಳಲಾಗುತ್ತಿದೆ. 

ಭಾರತ ಕ್ರಿಕೆಟ್‌ನ ಹಿಂದಿನ ವಿವಾದಗಳು
ಅಜರುದ್ದೀನ್‌, ಜಡೇಜ ಮ್ಯಾಚ್‌ ಫಿಕ್ಸಿಂಗ್‌  2000ನೇ ಇಸವಿಯಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌, ಅಜಯ್‌ ಜಡೇಜ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದಿದ್ದರು. ಇದೇ ಪ್ರಕರಣದಲ್ಲಿ ಅಮಾನತುಗೊಂಡ ಆಫ್ರಿಕಾ ಮಾಜಿ ನಾಯಕ ಹ್ಯಾನ್ಸಿ ಕ್ರೋನ್ಯೆ ಈ ಇಬ್ಬರ ಹೆಸರನ್ನು ಬಹಿರಂಗಪಡಿಸಿದ್ದರು. ಮುಂದೆ ಅಜರ್‌ ಜೀವಾವಧಿ, ಜಡೇಜ 5 ವರ್ಷಗಳು ನಿಷೇಧಕ್ಕೊಳಗಾದರು.

2013ರ ಐಪಿಎಲ್‌ ಸ್ಪಾಟ್‌ಫಿಕ್ಸಿಂಗ್‌ 
2013ರ ಐಪಿಎಲ್‌ನಲ್ಲಿ ಭಾರೀ ಹಗರಣ ಬಯಲಾಗಿತ್ತು. ಮುಂಬೈ ಪೊಲೀಸರು ಸ್ಪಾಟ್‌ಫಿಕ್ಸಿಂಗ್‌ ಪ್ರಕರಣವನ್ನು ಬಹಿರಂಗ ಮಾಡಿದ್ದರು. ಆ ಘಟನೆಯಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗಿ ಎಸ್‌. ಶ್ರೀಶಾಂತ್‌ ಸೇರಿ ಇನ್ನಿಬ್ಬರು ಕ್ರಿಕೆಟಿಗರಾದ ಅಂಕಿತ್‌ ಚವಾಣ್‌, ಅಜಿತ್‌ ಚಂಡೀಲಾ ಜೀವಾವಧಿ ನಿಷೇಧಕ್ಕೊಳಗಾದರು. 

ಮಾತುಕತೆ ವಿವರ ಇಲ್ಲಿದೆ
ವರದಿಗಾರ ಮತ್ತು ಪಾಂಡುರಂಗ ನಡುವೆ ಎರಡು ಸಂದರ್ಭದಲ್ಲಿ ಮಾತುಕತೆ ನಡೆಯುತ್ತದೆ. ಅದರಲ್ಲಿ ನಿರ್ದಿಷ್ಟ ಪುಣೆ ಮೈದಾನದಲ್ಲಿರುವ ಹಲವು ಪಿಚ್‌ಗಳ ಪೈಕಿ ನಿರ್ದಿಷ್ಟವಾಗಿ ಪಿಚ್‌ ಸಂಖ್ಯೆ 8ರ ಕುರಿತೇ ಮಾತುಕತೆ ನಡೆಯುತ್ತದೆ. ಆ ಮಾತುಕತೆಯ ವಿವರ ಹೀಗಿದೆ…

ಪಾಂಡುರಂಗ: ಈ ಮೈದಾನದೊಳಗೆ ಅನ್ಯರು ಬರುವ ಹಾಗಿಲ್ಲ.
ವರದಿಗಾರ: ಯಾಕೆ?
ಪಾಂಡುರಂಗ: ಬಿಸಿಸಿಐ, ಐಸಿಸಿ ನಿಯಮಗಳು ಅನ್ಯರ ಪ್ರವೇಶವನ್ನು ನಿರ್ಬಂಧಿಸಿವೆ.
ವರದಿಗಾರ: ಹಾಗಿದ್ದರೆ ನಮಗೆ ಪ್ರವೇಶ ಸಿಕ್ಕಿದ್ದು ಹೇಗೆ?
ಪಾಂಡುರಂಗ: ನಮ್ಮ ಸ್ವಂತ ಸಾಮರ್ಥ್ಯದ ಮೇಲೆ ಕರೆದುಕೊಂಡು ಬಂದಿದ್ದೇವೆ. ಬಿಸಿಸಿಐ ಕ್ಯುರೇಟರ್‌ ಕೇಳಿದರೆ ಇಲ್ಯಾರೂ ಬಂದೇ ಇಲ್ಲ ಎಂದು ಬಿಡುತ್ತೇನೆ.
ವರದಿಗಾರ: ನಮಗೆ ನಿಮ್ಮಿಂದ ಸಹಾಯ ಆಗುತ್ತಾ, ಪಿಚ್‌ ಅನ್ನು ನಮಗೆ ಅನುಕೂಲವಾಗುವಂತೆ ಮಾಡಿಕೊಡುತ್ತೀರಾ?
ಪಾಂಡುರಂಗ: ನಾನು ನಿಮಗೆ ಆಗಲೇ ಹೇಳಿದ್ದೇನಲ್ಲ ಇದು 340 ರನ್‌ ಬರುವಂತಹ ಬ್ಯಾಟಿಂಗ್‌ ಪಿಚ್‌ ಎಂದು. ಇಲ್ಲಿ ಇಷ್ಟು ರನ್‌
ಗಳನ್ನು ಆರಾಮಾಗಿ ಬೆನ್ನತ್ತಬಹುದು.
ವರದಿಗಾರ: ಅದನ್ನು ನೀವು ಹೇಳಿದ್ದೀರಿ. ನಿಮ್ಮ ಮಾತಿನ ಪ್ರಕಾರ ನಾವು ಬೆಟ್ಟಿಂಗ್‌ ಮಾಡುತ್ತೇವೆ. ಆದರೆ…..(ನಿರ್ದಿಷ್ಟ ಆಟಗಾರ
ಅಥವಾ ತಂಡದ ಹೆಸರು)ಗೆ ನಾಳಿನ ಪಂದ್ಯದಲ್ಲಿ ಅನುಕೂಲವಾಗಬೇಕು.
ಪಾಂಡುರಂಗ: ಅದನ್ನು ಮಾಡಿಕೊಡುತ್ತೇನೆ. ಆಗಲೇ ಹೇಳಿದ್ದೇನಲ್ಲ. 

ವಿಡಿಯೊ ಹುಟ್ಟು ಹಾಕುವ ಪ್ರಶ್ನೆಗಳು
ವರದಿಗಾರ ತನ್ನನ್ನು ಬುಕಿಯೆಂದು ಪರಿಚಯಿಸಿಕೊಳ್ಳುವ ವಿಡಿಯೊ ಬಹಿರಂಗವಾಗಿಲ್ಲ. ಯಾಕೆ ಹೀಗೆ ಎನ್ನುವುದು ಪ್ರಶ್ನೆ.

ಬದಲಿಸಿಕೊಡುವುದಾಗಿ ಒಪ್ಪಿದ್ದರೂ ಏನು ಮಾಡುತ್ತೇನೆ? ಹೇಗೆ ಮಾಡುತ್ತೇನೆ? ಕೆಲವೇ ಗಂಟೆಗಳಲ್ಲಿ ಇದನ್ನು ಸಾಧಿಸಬಹುದೇ ಎಂಬ ಕುರಿತು ಏನೂ ಹೇಳಿಲ್ಲ.

ಇದಕ್ಕೆ ಪ್ರತಿಯಾಗಿ ಬುಕಿಗಳು ಎಷ್ಟು ಹಣದ ಆಮಿಷ ಒಡ್ಡಿದರು ಅಥವಾ ಬೇರೆ ಯಾವ ಕಾರಣಕ್ಕೆ ಇಂತಹ ಆತ್ಮಹತ್ಯಾ ಕಾರಿ ಘಟನೆಗೆ ಪಾಂಡುರಂಗ ಸಿದ್ಧವಾದರು ಎಂಬ ಕುರಿತು ಕಿಂಚಿತ್‌ ಸುಳಿವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next