Advertisement

ಭಾರತೀಯ ಸಂಸ್ಕೃತಿ ಮಹೋತ್ಸವ ಸಂಪನ್ನ

12:50 PM Jan 19, 2018 | |

ಹುಬ್ಬಳ್ಳಿ: ಪ್ರೇಕ್ಷಕರ ಕೊರತೆ ನಡುವೆಯೂ ಭಾರತೀಯ ಸಂಸ್ಕೃತಿಯ ಹಿರಿಮೆ, ಜನಪದ ಸಾಂಸ್ಕೃತಿಕ ಸೊಗಡು ವಿಜೃಂಭಿಸಿತು. ದೇಶದ ವಿವಿಧ ರಾಜ್ಯದ  ಬುಡಕಟ್ಟು ಹಾಗೂ ಜಾನಪದ ನೃತ್ಯ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. 

Advertisement

ಭಾರತೀಯ ಸಂಸ್ಕೃತಿ ಮಹೋತ್ಸವ ಅಂಗವಾಗಿ  ಇಲ್ಲಿನ ನೆಹರು ಮೈದಾನದಲ್ಲಿ ಎರಡು ದಿನ ಕಾಲ ಆಯೋಜಿಸಿದ್ದ ಕಾರ್ಯಕ್ರಮ ಗುರುವಾರ ಸಂಪನ್ನಗೊಂಡಿತು. ಗುರುವಾರ ನಡೆದ ಕಾರ್ಯಕ್ರಮದಲ್ಲಿ  ಕರ್ನಾಟಕದ ಕೋಲಾಟ, ವೀರಗಾಸೆ ನೃತ್ಯ ಗಮನ ಸೆಳೆಯಿತು. 

ಮಿಜೋರಾಂನ ಚಿರೋ ನೃತ್ಯ-ಅಲ್ಲಿನ ಬುಡಕಟ್ಟು ಸಂಪ್ರದಾದಲ್ಲಿ ಮದುವೆ ವೇಳೆ  ಕೈಗೊಳ್ಳುವ ನೃತ್ಯ ಪ್ರದರ್ಶಿಸಲಾಯಿತು. ಪಂಜಾಬ್‌ನ ಬಾಂಗ್ರಾ ನೃತ್ಯ ಆಕರ್ಷಣೀಯವಾಗಿತ್ತು. ತೆಲಂಗಾಣದ ಕಲಾವಿದರು ಮಥುರಾದಿಂದ ತೆಲಂಗಾಣದ ಅದಿಲಾಬಾದ್‌ ಜಿಲ್ಲೆಯವರೆಗೆ

ರಾಮ ಕೃಷ್ಣ ಲೀಲಾ ಸಾರುವ ಮಾಥುರಿ ನೃತ್ಯ ಹಾಗೂ ಉತ್ತರಾಖಂಡದಲ್ಲಿ ಬುಡಕಟ್ಟು ಜನಾಂಗ ಧಾರ್ಮಿಕ ಕಾರ್ಯ, ಮಗುವಿನ ಜನನ ಹಾಗೂ ಮದುವೆ ಸಂದರ್ಭದಲ್ಲಿ ಕೈಗೊಳ್ಳುವ ಜೋಡಾ ಚಪೇಲಿ ನೃತ್ಯ ಗಮನ ಸೆಳೆಯಿತು. 

ಅಸ್ಸಾಂನ  ಬಾಗೂಂಬಾ, ಗುಜರಾತ್‌ನ ಸಿದ್ದಿ ದಮಾಲ, ಹಿಮಾಚಲ ಪ್ರದೇಶದ ಗದ್ದಾ ಡ್ಯಾನ್ಸ್‌, ತಮಿಳುನಾಡಿನ ಕರಗಂ ಕವಣಿ ಅಲ್ಲದೆ ಮಹಾರಾಷ್ಟ್ರ ಇನ್ನಿತರ  ರಾಜ್ಯಗಳ ಕಲಾವಿದರು ಜಾನಪದ ನೃತ್ಯ ಪ್ರದರ್ಶಿಸಿದರು. ದೇಶದ ವಿವಿಧ ರಾಜ್ಯಗಳಿಂದ ಕಲಾ ತಂಡಗಳು ಆಗಮಿಸಿದ್ದವು. ವಿಶೇಷವಾಗಿ ಆಯಾ  ರಾಜ್ಯಗಳ ಬುಡಕಟ್ಟು ಹಾಗೂ ಜಾನಪದ ಸಂಸ್ಕೃತಿ, ಸಾಂಸ್ಕೃತಿಕ ಸೊಬಗು ಬಿಂಬಿಸುವ ನೃತ್ಯದ ಪರಿಚಯ ಮಾಡಿದ್ದರು. 

Advertisement

ಹೆಚ್ಚಿನ ಹಣ ನೀಡಿ ಸಿನಿಮಾ  ನೋಡಲು ಹೋಗುವ ಜನರು ಉಚಿತವಾಗಿ ಜೀವಂತಿಕೆಯುಳ್ಳ ಕಲೆ ಬಿಂಬಿಸುವ ಕಾರ್ಯಕ್ರಮಕ್ಕೆ ನಿರಾಸಕ್ತಿ ತೋರಿದರೋ ಅಥವಾ ಆಯೋಜಕರು  ಸಮರ್ಪಕ ಪ್ರಚಾರ ಕೈಗೊಳ್ಳಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕೆ ಪ್ರೇಕ್ಷಕರ ಸಾಥ್‌ ಇಲ್ಲವಾಗಿತ್ತು.   

Advertisement

Udayavani is now on Telegram. Click here to join our channel and stay updated with the latest news.

Next