ಬಸವನಬಾಗೇವಾಡಿ: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆ ಎಲ್ಲಾ ರಂಗದಲ್ಲಿ ಹೆಸರುವಾಸಿಯಾಗಿದೆ. ಅದನ್ನು ದೇಶಕ್ಕೆ ಪರಿಚಯಿಸುವ ಕಾರ್ಯವಾಗಬೇಕೆಂಬ ಉದ್ದೇಶದಿಂದ ಡಿ. 24 ರಿಂದ 31ರ ವೆರೆಗೆ ವಿಜಯಪುರ ಜಿಲ್ಲೆಯ ಕಗ್ಗೊಡ ಗ್ರಾಮದಲ್ಲಿ ಭಾರತ ವಿಕಾಸ ಸಂಗಮದಿಂದ ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ತಾಲೂಕಿನ ವಿವಿಧ ಶಾಲಾ ಮುಖ್ಯಸ್ಥರು ಹಾಗೂ ತಾಲೂಕು ವ್ಯಾಪಾರಸ್ಥರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಯಕ್ರಮ ಯಾವುದೇ ಪಕ್ಷದ ಅಥವಾ ಯಾವುದೇ ಜಾತಿ, ಧರ್ಮಕ್ಕೆ ಸಂಬಂಧಿಸಿದಲ್ಲ. ದೇಶದ ಧಾರ್ಮಿಕ, ಜ್ಞಾನ, ಶಿಕ್ಷಣ, ಸಂಸ್ಕೃತಿ, ಗ್ರಾಮಸಂಗಮ, ಕಾಯಕ, ಆರೋಗ್ಯ, ಕೃಷಿ, ನೀರಾವರಿ, ಯುವಸಂಗಮ, ಮಾತೃಸಂಗಮ, ಗೋವು ಸಂವರ್ಧನೆ ಸೇರಿದಂತೆ ಅನೇಕ ಜ್ಞಾನ ಸಂಪಾದಿಸುವಂತ ಕಾರ್ಯಕ್ರಮ ಇದಾಗಿದೆ ಎಂದರು.
ದೇಶದ ಎಲ್ಲ ಸಮುದಾಯದ ಜಗದ್ಗುರುಗಳು ದೇಶದ ಹಾಗೂ ನಾಡಿನ ವಿವಿಧ ಮಠಮಾನ್ಯಗಳ ಸ್ವಾಮೀಜಿಗಳು, ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು ಕೇಂದ್ರದ ಸಚಿವರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಿ.24 ರಿಂದ 31ರವರೆಗೆ ಪ್ರತಿದಿನ ಬೆಳಗ್ಗೆ ವಿವಿಧ ಗೋಷ್ಠಿಗಳು, ಮಧ್ಯಾಹ್ನಕ್ಕೆ ಗೋಷ್ಠಿ ಸಂವಾದ, ಪ್ರಶಸ್ತಿ ಪ್ರದಾನ, ಸಂಜೆ 5.30 ರಿಂದ ದೇಶದ ವಿವಿಧ ಕಲಾ ತಂಡಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಎಲ್ಲ ಕಾರ್ಯಕ್ರಮಗಳು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ವಿಜಯಪುರ ಸಿದ್ದೇಶ್ವರ ಸಂಸ್ಥೆ ಹಾಗೂ ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಆಯೋಜಿಸಿದೆ ಎಂದರು.
ಕಾರ್ಯಕ್ರಮದಲ್ಲಿ ನಿತ್ಯ 2 ರಿಂದ 3 ಲಕ್ಷ ಜನರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಜರುಗುವ ಜಿಲ್ಲೆಯ ಕಗ್ಗೋಡ ಗ್ರಾಮದಲ್ಲಿ 10 ಸಾವಿರ ಜನರು ವಾಸ್ತವ್ಯ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದ ವಿಸ್ತರಣೆ 160 ರಿಂದ 180 ಏಕರೆ ಜಮೀನಿನಲ್ಲಿ ಕಾರ್ಯಕ್ರಮ ಜರುಗಲಿದೆ. ಜಿಲ್ಲೆಯಿಂದ ಜನರು ಹಾಗೂ ವಿವಿಧ ಸಂಘ, ಸಂಸ್ಥೆಗಳು ಲಕ್ಷ ಲಕ್ಷ ಬಿಳಿ ಜೋಳದ ರೊಟ್ಟಿ, ಶೇಂಗಾ ಹೋಳಿಗೆ, ದವಸ ಧಾನ್ಯ, ತರಕಾರಿ, ಹಣ್ಣು ಹಂಪಲು, ಸ್ವಯಂ ಪೇರಿತರಾಗಿ ಜನರು ನೀಡುತ್ತಿದ್ದಾರೆ ಎಂದರು. ಬಿ.ಕೆ. ಕಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಂಗರಾಜ ದೇಸಾಯಿ, ರಮೇಶ ಯಳಮೇಲಿ, ಸಿದ್ದಣ್ಣ ಉಪ್ಪಿನ, ಎಂ.ಎಸ್. ಕೊಟ್ಟಿ, ಎಸ್.ಎ. ದೇಗಿನಾಳ ಹಾಜರಿದ್ದರು.