ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡ ಈಗ ವಿಶ್ವದಲ್ಲೇ ಬಲಿಷ್ಠ ತಂಡಗಳಲ್ಲೊಂದು. ತಂಡದ ಆಟಗಾರರ ದೈಹಿಕ ಸದೃಢತೆಯೂ ಉನ್ನತ ಮಟ್ಟದಲ್ಲಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದರಲ್ಲಿ ಅಲ್ಪ ಸ್ವಲ್ಪ ಹೆಚ್ಚು ಕಡಿಮೆ ಇರುವ ಆಟಗಾರರು ಸ್ಥಾನವನ್ನೇ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಬಿಸಿಸಿಐ ದೇಹದಾಡ್ಯìವನ್ನು ವೃದ್ಧಿಸಲು ಹೆಚ್ಚು ಹೆಚ್ಚು ಆಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಿರುವುದು. ಇದಕ್ಕೆ ಹೊಸ ಸೇರ್ಪಡೆ ಡಿಎನ್‌ಎ ಪರೀಕ್ಷೆ.
ಡಿಎನ್‌ಎ ಪರೀಕ್ಷೆಯನ್ನು ಬಿಸಿಸಿಐ ಈಗಾಗಲೇ ಆರಂಭ ಮಾಡಿದೆ. ಪ್ರತಿ ಆಟಗಾರನ ಪರೀಕ್ಷೆಗೂ 25ರಿಂದ 30,000 ರೂ.ಗಳನ್ನು ಬಿಸಿಸಿಐ ವ್ಯಯಿಸುತ್ತಿದೆ. ಈ ಮೂಲಕ ಆಟಗಾರನ ದೇಹಸ್ಥಿತಿಯ ಪೂರ್ಣ ವಿವರ ಪಡೆದು ದೇಹದಾಡ್ಯìವನ್ನು ಹೆಚ್ಚಿಸಲು ತೀರ್ಮಾನಿಸಿದೆ.
ಡಿಎನ್‌ಎ ಪರೀಕ್ಷೆಯಲ್ಲಿ ಏನಾಗುತ್ತೆ?: ಡಿಎನ್‌ಎ ಪರೀಕ್ಷೆಯಲ್ಲಿ ವ್ಯಕ್ತಿಯ ವಂಶವಾಹಿಗಳ ಪರೀಕ್ಷೆಯಾಗುತ್ತದೆ. ಇದರ ಮೂಲಕ ವ್ಯಕ್ತಿಯ ದೇಹರಚನೆ ತಿಳಿಯುವುದಲ್ಲದೇ ಮೂಲಭೂತವಾಗಿ ಶರೀರದ ಸಾಮರ್ಥ್ಯ ಪರಿಚಯವಾಗುತ್ತದೆ. ಇದರ ಮೂಲಕ ಆಟಗಾರರ ಪಥ್ಯ, ದೇಹದ ತೂಕ, ಇನ್ನಿತರ ಸ್ಥಿತಿಗತಿಗಳನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಯಾವ ಕಾರಣದಿಂದ ಆಟಗಾರರ ಫಿಟ್‌ನೆಸ್ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಯುತ್ತದೆ.
ಶಂಕರ್ ಬಸು ಶಿಫಾರಸು: ಭಾರತ ತಂಡದ ದೇಹದಾಡ್ಯì ತರಬೇತುದಾರ ಶಂಕರ್ ಬಸು ಇದನ್ನು ಶುರು ಮಾಡಲು ಶಿಫಾರಸು ಮಾಡಿದರು. ಇದಕ್ಕಿಂತ ಮುನ್ನವೇ ಅಮೆರಿಕದ ಪ್ರಖ್ಯಾತ ಬಾಸ್ಕೆಟ್‌ಬಾಲ್ ಲೀಗ್ ಎನ್‌ಬಿಎ ಮತ್ತು ಫುಟ್‌ಬಾಲ್ ಲೀಗ್ ಎನ್‌ಎಫ್ಎಲ್‌ನಲ್ಲಿ ಡಿಎನ್‌ಎ ಪರೀಕ್ಷೆಯನ್ನು ಬಳಸಲಾಗುತ್ತಿದೆ.