ಪಲ್ಲೆಕೆಲೆ : ಶನಿವಾರ ಏಷ್ಯಾ ಕಪ್ ನ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ಥಾನ ತಂಡಗಳ ಮುಖಾಮುಖಿಯ ಮುನ್ನಾದಿನ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ”ನಿಸ್ಸಂದೇಹವಾಗಿ ಇದು ನಮಗೆಲ್ಲರಿಗೂ ಬಹಳ ದೊಡ್ಡ ಪಂದ್ಯಾವಳಿಯಾಗಿದ್ದು, ದೊಡ್ಡ ಇತಿಹಾಸವನ್ನು ಹೊಂದಿದೆ” ಎಂದು ಹೇಳಿದ್ದಾರೆ.
ಪಲ್ಲೆಕೆಲೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪಂದ್ಯಾವಳಿಯ ಮಹತ್ವ ಮತ್ತು ಶ್ರೀಮಂತ ಇತಿಹಾಸದ ಬಗ್ಗೆ ಮಾತನಾಡಿ, ಏಷ್ಯಾ ಕಪ್ 2023 ಗಾಗಿ ತಂಡದ ಉದ್ದೇಶಗಳನ್ನು ಸ್ಪಷ್ಟಪಡಿಸಿದರು.
ತವರಿನಲ್ಲಿ ನಡೆಯುವ ವಿಶ್ವಕಪ್‌ಗೆ ಮೊದಲು “ಅಂತಿಮ ಫಿಟ್‌ನೆಸ್ ಪರೀಕ್ಷೆ” ಎಂದು ಪರಿಗಣಿಸುತ್ತೀರಾ ಎಂಬ ಪ್ರಶ್ನೆಗೆ,ನಕ್ಕು ಪ್ರತಿಕ್ರಿಯಿಸಿದ ಕಪ್ತಾನ,”ಯಾವುದೇ ಸಂದರ್ಭದಲ್ಲಿ, ಇದು ಫಿಟ್ನೆಸ್ ಪರೀಕ್ಷೆ ಅಥವಾ ಇನ್ನಾವುದೇ ವಿಷಯವಲ್ಲ. ಇದು ಏಷ್ಯಾದ ಅಗ್ರ 6 ತಂಡಗಳ ನಡುವೆ ನಡೆಯುವ ಪಂದ್ಯಾವಳಿಯಾಗಿದೆ. ಹೌದು, ಫಿಟ್‌ನೆಸ್ ಪರೀಕ್ಷೆ ಮತ್ತು ಫಿಟ್‌ನೆಸ್ ಶಿಬಿರ ಮತ್ತು ಎಲ್ಲವನ್ನೂ ಬೆಂಗಳೂರಿನಲ್ಲಿ ಮಾಡಲಾಗಿದೆ. ಈಗ, ನಾವು ಮುಂದುವರಿದು ಪಂದ್ಯವನ್ನು ಎದುರಿಸಬೇಕಾಗಿದೆ. ಈ ಪಂದ್ಯಾವಳಿಯಲ್ಲಿ ನಾವು ಏನನ್ನು ಸಾಧಿಸಬಹುದು ಎಂಬುದನ್ನು ನೋಡಬೇಕು” ಎಂದರು.
“ತಂಡಕ್ಕೆ ಆಯ್ಕೆಯಾಗಿರುವ ಎಲ್ಲಾ ಆರು ಬೌಲರ್‌ಗಳು ಶ್ರೇಷ್ಠ ಬೌಲರ್‌ಗಳು ಮತ್ತು ಅವರು ಎಷ್ಟು ಸಮರ್ಥರು ಎಂಬುದನ್ನು ವಿಶ್ವ ಕ್ರಿಕೆಟ್‌ನಲ್ಲಿ ಸಾಬೀತುಪಡಿಸಿದ್ದಾರೆ. ಬಹಳ ಸಮಯದ ನಂತರ ಗಾಯದಿಂದ ವಾಪಸಾಗುತ್ತಿರುವ ಬುಮ್ರಾ ಅವರು ಐರ್ಲೆಂಡ್‌ನಲ್ಲಿ ಉತ್ತಮವಾಗಿ ಆಡಿದರು. ಅವರು ಬೆಂಗಳೂರಿನ ಶಿಬಿರದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಇದು ಒಳ್ಳೆಯ ಸಂಕೇತ” ಎಂದರು.
“ಶಮಿ ಮತ್ತು ಸಿರಾಜ್ ಕೂಡ ಹಾಗೆಯೇ. ಕಳೆದ ಕೆಲವು ವರ್ಷಗಳಿಂದ ಅವರು ತಂಡಕ್ಕಾಗಿ ಉತ್ತಮವಾಗಿ ಆಡುತ್ತಿದ್ದಾರೆ. ಇದು ನಮಗೆ ಸಕಾರಾತ್ಮಕ ಸಂಕೇತವಾಗಿದೆ. ಆದ್ದರಿಂದ ಅವರು ಮುಂದಿನ ಎರಡು ತಿಂಗಳುಗಳವರೆಗೆ ತಮ್ಮನ್ನು ತಾವು ಅತ್ಯುತ್ತಮ ಫಾರ್ಮ್ ನಲ್ಲಿರಿಸಿಕೊಳ್ಳಬಹುದು ಎಂದು ಆಶಿಸುತ್ತೇವೆ” ಎಂದರು.
ಟೂರ್ನಿಯ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಲಿರುವ ಕೆಎಲ್ ರಾಹುಲ್ ಇಲ್ಲದೆ ಭಾರತ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತೊಡೆಯ ಗಾಯದಿಂದ ಶ್ರೀಲಂಕಾಕ್ಕೆ ಹೋಗಿಲ್ಲ.
ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 03 ಗಂಟೆಗೆ ರೋಚಕ ಏಕದಿನ ಪಂದ್ಯ ಆರಂಭವಾಗಲಿದೆ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಪ್ರಯಾಣ ಮೀಸಲು).