ಮಂಗಳೂರು: ಉಳ್ಳಾಲದ ಬಟ್ಟಪ್ಪಾಡಿ ಸಮೀಪ ಸಮುದ್ರದಲ್ಲಿ ಮುಳುಗಿರುವ ಸರಕು ನೌಕೆ “ಪ್ರಿನ್ಸೆಸ್ ಮಿರಾಲ್’ ನಿಂದ ತೈಲ ಸೋರಿಕೆ ಆತಂತಕದ ನಡುವೆ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್‌ನ ಡೋರ್ನಿಯರ್ ವಿಮಾನ ಮತ್ತು ನೌಕೆಗಳು ನಿರಂತರ ಕಣ್ಗಾವಲು ಇರಿಸಿವೆ.
ಒಂದು ವೇಳೆ ಅನಿರೀಕ್ಷಿತವಾಗಿ ತೈಲ ಸೋರಿಕೆಯಾದರೆ ನದಿ ಪ್ರವೇಶಿಸದಂತೆ ತಡೆಗಟ್ಟುವ ಉದ್ದೇಶದಿಂದ ನೇತ್ರಾವತಿ ನದಿ ಅಳಿವೆ ಪ್ರದೇಶದಲ್ಲಿ ಇಂಟರ್ ಟೈಡಲ್ ಬೂಮ್‌ಗಳನ್ನು ಅಳವಡಿಸಲಾಗಿದೆ.
ಹಡಗು ಮುಳುಗಿರುವ ಪ್ರದೇಶದಲ್ಲಿ ಮೀನುಗಾರಿಕೆ ನಡೆಸದಂತೆ ನೋಡಿಕೊಳ್ಳಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.
ತೈಲ ಸೋರಿಕೆಯಾದರೆ ಪರಿಸರಕ್ಕೆ ಹಾನಿಯಾಗದಂತೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಕಳೆದ ಮೂರು ದಿನಗಳಿಂದ ಉಳ್ಳಾಲ, ಪಣಂಬೂರು, ತಣ್ಣೀರುಬಾವಿ ಬೀಚ್‌ಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಗಿದೆ. ಸೋಮವಾರವೂ ಅಣಕು ಕಾರ್ಯಾಚರಣೆ ನಡೆದಿದೆ.
ಗುಜರಾತ್‌ನಿಂದ ಈಗಾಗಲೇ ಬಂದಿರುವ ಮಾಲಿನ್ಯ ನಿಯಂತ್ರಣ ನೌಕೆ ಸಮುದ್ರ ಪಾವಕ್ ಮತ್ತು ಇತರ ನೌಕೆಗಳ ಸಹಾಯದಿಂದ ನೌಕೆಯಲ್ಲಿರುವ 220 ಮೆಟ್ರಿಕ್ ಟನ್ ತೈಲವನ್ನು ಹೊರತೆಗೆಯುವ ಪ್ರಯತ್ನ ನಡೆದಿದೆ. ಈ ನಡುವೆ ಹಡಗು ಮುಳುಗಿರುವ ಜಾಗದಲ್ಲಿ ಸಮುದ್ರ ಅಬ್ಬರ ತೀವ್ರವಾಗಿಯೇ ಮುಂದುವರಿದಿದ್ದು ಯಾವುದೇ ಕಾರ್ಯಾಚರಣೆಗೆ ತೊಡಕುಂಟಾಗಿದೆ.