ನವದೆಹಲಿ: ಗುಜರಾತ್ ನ ಭಯೋತ್ಪಾದಕ ನಿಗ್ರಹ ದಳದ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಸೋಮವಾರ(ಏಪ್ರಿಲ್ 25) ಅರಬ್ಬಿ ಸಮುದ್ರದ ಸಮೀಪ ಪಾಕಿಸ್ತಾನದ ಬೋಟ್ ಅನ್ನು ವಶಕ್ಕೆ ಪಡೆದಿದ್ದು, ಬೋಟ್ ನಲ್ಲಿ ಒಂಬತ್ತು ಮಂದಿ ಸಿಬ್ಬಂದಿಗಳು ಹಾಗೂ 280 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಫ್ರಾನ್ಸ್ ಅಧ್ಯಕ್ಷರಾಗಿ ಇಮ್ಯಾನುಯೆಲ್ ಮ್ಯಾಕ್ರಾನ್ ಎರಡನೇ ಬಾರಿಗೆ ಆಯ್ಕೆ, ಲೀ ಪೆನ್ ಗೆ ಸೋಲು
ಪಾಕಿಸ್ತಾನದ “ಅಲ್ ಹಜ್” ಹೆಸರಿನ ಬೋಟ್ ಅನ್ನು ಭಾರತದ ಕರಾವಳಿ ಪ್ರದೇಶದ ಗಡಿಯೊಳಗೆ ಬಂದಾಗ ಭಾರತೀಯ ಕರಾವಳಿ ಪಡೆ ಅದನ್ನು ತಡೆದು ವಶಕ್ಕೆ ತೆಗೆದುಕೊಂಡಿರುವುದಾಗಿ ರಕ್ಷಣಾ ವಕ್ತಾರರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬೋಟ್ ನಲ್ಲಿ 280 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಪತ್ತೆಯಾಗಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ ಬೋಟ್ ನಲ್ಲಿ ಒಂಬತ್ತು ಮಂದಿ ಸಿಬ್ಬಂದಿಗಳಿದ್ದು, ಅವರನ್ನೆಲ್ಲಾ ಗುಜರಾತ್ ನ ಕಚ್ ಜಿಲ್ಲೆಯ ಜಖಾವು ಬಂದರು ಪ್ರದೇಶಕ್ಕೆ ಕರೆ ತಂದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದಿಂದ ಬೋಟ್ ನಲ್ಲಿ ಡ್ರಗ್ಸ್ ತರಲಾಗುತ್ತಿದೆ ಎಂಬ ಮಾಹಿತಿ ಭಯೋತ್ಪಾದಕ ನಿಗ್ರಹ ದಳಕ್ಕೆ ಲಭ್ಯವಾಗಿದ್ದು, ನಂತರ ಭಾರತೀಯ ಕರಾವಳಿ ಪಡೆಯ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.