Advertisement

‘ಭಾರತೀಯ ಸಿನೆಮಾಗಳ ಪಾತ್ರ ಮಹತ್ತರ’

12:00 PM Oct 22, 2017 | Team Udayavani |

ಮೂಡಬಿದಿರೆ: ಜಾಗತಿಕ ಸಿನೆಮಾ ಅಧ್ಯಯನದಲ್ಲಿ ಭಾರತೀಯ ಸಿನೆಮಾ ರಂಗಕ್ಕೆ ವಿಶೇಷ ಸ್ಥಾನವಿದೆ. ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಜಗತ್ತಿಗೆ ತಿಳಿಸಿಕೊಡುವಲ್ಲಿ ಭಾರತೀಯ ಸಿನೆಮಾಗಳ ಪಾತ್ರ ಮಹತ್ವದ್ದು ಎಂದು ಮಣಿಪಾಲ ವಿಶ್ವವಿದ್ಯಾಲಯದ
ಯುರೋಪಿಯನ್‌ ಸ್ಟಡೀಸ್‌ನ ಡಾ| ಟಟಿಯಾನಾ ಸುರೆಲಝ್ ಹೇಳಿದರು.

Advertisement

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ವೇದಿಕೆ ‘ರೋಸ್ಟ್ರಮ್‌-ಸ್ಪೀಕರ್ ಕ್ಲಬ್‌’ ಆಯೋಜಿಸಿದ್ದ ‘ಪಾಶ್ಚಿಮಾತ್ಯ ದೃಷ್ಟಿಕೋನದಲ್ಲಿ ಭಾರತೀಯ ಸಿನೆಮಾ’ ಎಂಬ ವಿಷಯದ ಕುರಿತಾಗಿ ಅವರು ವಿಶೇಷ ಉಪನ್ಯಾಸ ನೀಡಿದರು.

ಪಾಶ್ಚಿಮಾತ್ಯ ಜಗತ್ತಿಗೆ ಭಾರತೀಯ ಸಿನೆಮಾ ರಂಗ ಎಂದರೆ ಬಾಲಿವುಡ್‌ ಎಂಬಂತಾಗಿದೆ. ಹಿಂದಿ ಸಿನೆಮಾಗಳು ಜಾಗತಿಕ ಮಟ್ಟದಲ್ಲಿ ಬೆಳೆಯಲು ಕಾರಣ ಅದರಲ್ಲಿರುವ ಸಾಂಸ್ಕೃತಿಕ ಅಂಶಗಳು ಹಾಗೂ ಭಾರತೀಯ ಜನಜೀವನವನ್ನು ಬಿಂಬಿಸುವ ವಿಧಾನ. ಸಂಗೀತಕ್ಕೆ ಈ ಚಿತ್ರಗಳಲ್ಲಿ ಹೆಚ್ಚು ಪ್ರಾಧಾನ್ಯ ಇರುವುದು ಕೂಡ ಬಾಲಿವುಡ್‌ ಜನಪ್ರಿಯಗೊಳ್ಳಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಿನೆಮಾ ಒಂದೇ ಆದರೂ ಕೂಡ ಅದಕ್ಕೆ ವಿಭಿನ್ನ ಆಯಾಮಗಳಿರುತ್ತವೆ; ಇದರಿಂದಾಗಿ ಜನ ಅದನ್ನು ಗ್ರಹಿಸುವ ರೀತಿಯೂ ವಿಭಿನ್ನವಾಗಿರುತ್ತದೆ. ಇದೇ ಕಾರಣದಿಂದಾಗಿ ಕೆಲವು ಬಾರಿ ಸಿನೆಮಾಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಅನೇಕ ಸಿನೆಮಾಗಳಲ್ಲಿ ಎರಡು-ಮೂರು ಭಾಷೆಗಳನ್ನು ಬಳಸಲಾಗುತ್ತದೆ. ಈ ರೀತಿಯ ಭಾಷಾ ಬಳಕೆ ವಿದೇಶೀ ಪ್ರೇಕ್ಷಕರಲ್ಲಿ ಗೊಂದಲಗಳನ್ನು ಮೂಡಿಸುತ್ತದೆ. ಸಿನೆಮಾ ಈ ರೀತಿಯ ಗೊಂದಲಗಳಿಂದ ಹೊರತಾಗಿರಬೇಕು ಎಂದು ಡಾ| ಟಟಿಯಾನಾ ಹೇಳಿದರು.

ಭಾರತೀಯ ಸಿನೆಮಾ ಪಡೆಯುತ್ತಿರುವ ಹೊಸ ಆಯಾಮಗಳನ್ನು ತಿಳಿಸಿದ ಅವರು, ಸಿನೆಮಾ ಮನೋರಂಜನೆಗೆ ಮಾತ್ರ ಸೀಮಿತವಾಗದೇ ಹೊಸ ಆಲೋಚನೆಗಳನ್ನು ಹುಟ್ಟು ಹಾಕಬೇಕು. ಪ್ರಸ್ತುತ ಹಿಂದಿ ಸಿನೆಮಾಗಳನ್ನು ಗಮನಿಸುವಾಗ ಅವು ಅತ್ಯುತ್ತಮ ಕಥಾ ಹಂದರವನ್ನು ಹೊಂದಿದ್ದು, ಅನಿರೀಕ್ಷಿತ ತಿರುವುಗಳಿಂದ ಕೂಡಿರುತ್ತವೆ. ಜತೆಗೆ ಹೀರೋಯಿಸಂನಿಂದ ಹೊರಬಂದು ನಟನಾ ಕೌಶಲಕ್ಕೆ ಹೆಚ್ಚು ಪ್ರಾಮುಖ್ಯ ಸಿಗುತ್ತಿದೆ ಎಂದರು. ರೋಸ್ಟ್ರಮ್‌ ಕ್ಲಬ್‌ನ ಸಂಚಾಲಕ ದೀಪಕ್‌ ರಾಜ್‌, ಗುರುದತ್‌ ಸೋಮಯಾಜಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next