ಸಿನಿಮಾ ಕಲಾವಿದರು ಮತ್ತು ತಂತ್ರಜ್ಞರ ಕುರಿತು ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ಆದರೆ, ಚಿತ್ರರಂಗ ನಡೆದು ಬಂದ ಹಾದಿಯ ಬಗ್ಗೆ ಯಾರೊಬ್ಬರೂ ಚಿತ್ರ ಮಾಡುವ ಪ್ರಯತ್ನ ಮಾಡಿರಲಿಲ್ಲ. ಆ ಪ್ರಯತ್ನವನ್ನು ಆಟೋ ರಾಜ ಮಾಡುತ್ತಿದ್ದಾರೆ. ಆಟೋ ಓಡಿಸುತ್ತಿದ್ದ ಅವರು, ಈಗ ಚಿತ್ರದಲ್ಲಿ ಚಿತ್ರರಂಗ ನಡೆದು ಬಂದ ಹಾದಿಯನ್ನು ಸೆರೆಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ.
ಬರೀ ಕನ್ನಡವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಅವರು ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈಗಾಗಲೇ “ಇಂಡಿಯನ್ ಸಿನಿಮಾ’ ಎಂಬ ಚಿತ್ರವನ್ನು ಅವರು ಸದ್ದಿಲ್ಲದೆ ಶುರು ಮಾಡಿದ್ದಾರೆ. ಅಲ್ಲಾ ಸ್ವಾಮೀ, ನೂರು ವರ್ಷದ ಇತಿಹಾಸವಿರುವ ಭಾರತೀಯ ಚಿತ್ರರಂಗದ ಬಗ್ಗೆ ಎರಡೂವರೆ ಗಂಟೆಯಲ್ಲಿ ಹೇಳುವುದಕ್ಕೆ ಸಾಧ್ಯವಾ? ಹಾಗೆ ಹೇಳಿದರೂ ಅದು ಸಾಕ್ಷ್ಯಚಿತ್ರವಾದಂತಾಗುವುದಿಲ್ಲವಾ?
ಮುಂತಾದ ಹಲವು ಪ್ರಶ್ನೆಗಳು ಬರಬಹುದು. ಆಟೋ ಶಿವು ಹೇಳುವಂತೆ, ಅವರು ಈ ಚಿತ್ರವನ್ನು ಐದು ಭಾಗಗಳಲ್ಲಿ ತೋರಿಸುತ್ತಾರಂತೆ. ಮೊದಲ ಭಾಗದಲ್ಲಿ ಭಾರತೀಯ ಚಿತ್ರರಂಗದ 100 ವರ್ಷಗಳ ಇತಿಹಾಸ ಹೇಳಿದರೆ, ಮಿಕ್ಕ ಭಾಗಗಳಲ್ಲಿ ಒಂದೊಂದು ಭಾಷೆಯ ಚಿತ್ರರಂಗದ ಬಗ್ಗೆ ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ಅಷ್ಟೇ ಅಲ್ಲ, ಒಂದೊಂದು ಭಾಷೆಯ ಚಿತ್ರದಲ್ಲೂ, ಆಯಾ ಭಾಷೆಯ ಸೂಪರ್‌ಸ್ಟಾರ್ ಕುಟುಂಬದವರು ಇರುತ್ತಾರಂತೆ.
ಇದೆಲ್ಲಾ ಸಾಧ್ಯವಾ ಎಂದರೆ, ಖಂಡಿತಾ ಸಾಧ್ಯ ಎಂಬ ಉತ್ತರ ಶಿವು ಅವರಿಂದ ಬರುತ್ತದೆ. ಅವರು ಇದಕ್ಕೂ ಮುನ್ನ “ಬಾಹುಲಿಗಳು’ ಎಂಬ ಚಿತ್ರ ಪ್ರಾರಂಭಿಸಿದ್ದವರು. ಈ ಮಧ್ಯೆ ಈ ಚಿತ್ರದ ಐಡಿಯಾ ಹೊಳೆದು, ಇದನ್ನು ಮುಗಿಸಿ, ಆ ನಂತರ ಆ ಚಿತ್ರವನ್ನು ಮಾಡುವ ಯೋಚನೆಯಲ್ಲಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟರಾದ ರಾಜೇಶ್, ಗಿರಿಜಾ ಲೋಕೇಶ್, ಸಿಹಿಕಹಿ ಚಂದ್ರು, ಜಯಲಕ್ಷ್ಮೀ ಮುಂತಾದವರು ನಟಿಸುತ್ತಿದ್ದಾರೆ. ನಟ-ನಿರ್ದೇಶಕ ಸಂದೀಪ್ ಮಲಾನಿ ಈ ಚಿತ್ರದಲ್ಲಿ ಫಿಲ್ಮ್ ಇನ್‌ಸ್ಟಿಟ್ಯೂಟ್‌ವೊಂದನ್ನು ನಡೆಸುತ್ತಿರುತ್ತಾರಂತೆ.
ಅಲ್ಲಿನ ವಿದ್ಯಾರ್ಥಿಗಳಿಗೆ ಅವರು ಭಾರತೀಯ ಸಿನಿಮಾ ಬಗ್ಗೆ ಪಾಠ ಮಾಡುವುದೇ ಕಥೆಯಂತೆ. ಆ ಸಂದರ್ಭದಲ್ಲಿ ಚಿತ್ರರಂಗ ನಡೆದು ಬಂದ ಹಾದಿಯನ್ನು ತೋರಿಸಲಾಗುತ್ತದಂತೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಒಂದು ಚಿತ್ರರಂಗ ನಡೆದು ಬಂದ ದಾರಿಯನ್ನು ಬಿಂಬಿಸಿದರೆ, ಇನ್ನೊಂದು ಹಾಡನ್ನು ನಟಿ ಶ್ರೀದೇವಿಗೆ ಅರ್ಪಿಸಲಾಗುತ್ತದಂತೆ. ಆ ಹಾಡು, ಶ್ರೀದೇವಿ ಅಭಿನಯದ ಹಲವು ಹಾಡುಗಳ ಕೊಲಾಜ್ ಆಗಲಿದೆಯಂತೆ. ಚಿತ್ರದ ಒಂದು ಹಾಡನ್ನು ಕಾರ್ತಿಕ್ ವೆಂಕಟೇಶ್ ಸಂಯೋಜಿಸುತ್ತಿದ್ದಾರೆ.