ಟೋಕಿಯೊ: ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದಾರೆ. 51 ಕೆಜಿ ವಿಭಾಗದಲ್ಲಿ ಇಂದು ನಡೆದ ಪಂದ್ಯದಲ್ಲಿ ಡೊಮಿನಿಕನ್ ರಿಪಬ್ಲಿಕನ್ ನ ಎದುರಾಳಿ ಮಿಗುಲೆನಾ ಹರ್ನಾಂಡೆಜ್ ಗಾರ್ಸಿಯಾ ವಿರುದ್ಧ 4-1 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರು.
38 ವರ್ಷದ ಮೇರಿ ಕೋಮ್ ಅವರು ತನಗಿಂತ 15 ವರ್ಷ ಕಡಿಮೆ ಹರೆಯದ ಡೊಮಿನಿಕನ್ ಸ್ಪರ್ಧಿಯ ವಿರುದ್ಧ ಸೆಣಸಾಡಿದರು. ಆರಂಭದಿಂದ ಅಂತ್ಯದವರೆಗೆ ಭಾರೀ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮೇರಿ ಕೋಮ್ ತಮ್ಮ ಅದ್ಭುತ ಪಟ್ಟುಗಳನ್ನು ಪ್ರದರ್ಶಿಸಿದರು
.
ಇದನ್ನೂ ಓದಿ:ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರ ಗೆದ್ದ ಭಾರತದ ಪ್ರಿಯಾ ಮಲಿಕ್
ಆರು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದರು.
ಮಣಿಕಾ ಬಾತ್ರಗೆ ಜಯ: ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಭಾರತದ ಮಣಿಕಾ ಬಾತ್ರ ಜಯ ಸಾಧಿಸಿದರು. ಉಕ್ರೇನ್ ಆಟಗಾರ್ತಿ ಮಾರ್ಗರಿಟಾ ಪೆಸೋಟ್ಸ್ ಕಾ ವಿರುದ್ಧ ಜಿದ್ದಾಜಿದ್ದಿನ ಕಾಳಗದಲ್ಲಿ ಮಣಿಕಾ 4-3 ಅಂತರದಿಂದ ಜಯ ಸಾಧಿಸಿದರು.
ಮೊದಲೆರಡು ಸೆಟ್ ಕಳೆದುಕೊಂಡ ಮಣಿಕಾ ನಂತರ ಕಮ್ ಬ್ಯಾಕ್ ಮಾಡಿದರು. ಮೂರನೇ ಮತ್ತು ನಾಲ್ಕನೇ ಸೆಟ್ ಗೆದ್ದ ಮಣಿಕಾ, ಐದನೇ ಸೆಟ್ ಕಳೆದುಕೊಂಡರು. ಪಂದ್ಯ ಗೆಲ್ಲಬೇಕಾದರೆ ಅಂತಿಮ ಎರಡೂ ಸೆಟ್ ಗೆಲ್ಲಬೇಕಾಗಿತ್ತು. ಕಠಿಣ ಸ್ಥಿತಿಯಲ್ಲೂ ಗೆದ್ದ ಮಣಿಕಾ ಬಾತ್ರ ಗೆಲುವಿನ ನಗೆ ಬೀರಿದರು.