Advertisement

ನೆಟ್‌ ಬೌಲರ್‌’ನಟರಾಜನ್‌ ದಾಖಲೆ : 44 ದಿನಗಳಲ್ಲಿ ಮೂರರಲ್ಲೂ ಪದಾರ್ಪಣೆ

12:33 AM Jan 16, 2021 | Team Udayavani |

ಬ್ರಿಸ್ಬೇನ್ :  ಬದಲಿ ಬೌಲರ್‌ ಆಗಿ ಅವಕಾಶ ಪಡೆದು, ಟೆಸ್ಟ್‌ ಸರಣಿ ವೇಳೆ ನೆಟ್‌ ಬೌಲರ್‌ ಆಗಿ ಉಳಿದುಕೊಂಡಿದ್ದ ಎಡಗೈ ಪೇಸರ್‌ ತಂಗರಸು ನಟರಾಜನ್‌ ವಿಶಿಷ್ಟ ದಾಖಲೆ ಬರೆದರು. ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಮೂಲಕ ಅವರು ಒಂದೇ ಪ್ರವಾಸದಲ್ಲಿ ಮೂರೂ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆಗೈದ ಭಾರತದ ಪ್ರಥಮ ಆಟಗಾರನೆನಿಸಿದರು.

Advertisement

ಅಷ್ಟೇ ಅಲ್ಲ, ಅವರು ಭಾರತದ 300ನೇ ಟೆಸ್ಟ್‌ ಕ್ರಿಕೆಟಿಗನೆಂಬ ಹಿರಿಮೆಗೂ ಪಾತ್ರರಾದರು. ತಂಡದಿಂದ ಬೇರ್ಪಟ್ಟ ಆರ್‌. ಅಶ್ವಿ‌ನ್‌ ಟೆಸ್ಟ್‌ಕ್ಯಾಪ್‌ ನೀಡುವ ಮೂಲಕ ತಮ್ಮದೇ ರಾಜ್ಯದ ನಟರಾಜನ್‌ ಅವರನ್ನು ಬರಮಾಡಿಕೊಂಡರು.

ಡಿ. 2ರಂದು ಕ್ಯಾನ್‌ಬೆರಾದಲ್ಲಿ ನಡೆದ 3ನೇ ಏಕದಿನ ಪಂದ್ಯದ ಮೂಲಕ ನಟರಾಜನ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಡಿ ಇರಿಸಿದರು. ಬಳಿಕ ಟಿ20 ಸರಣಿಯ ಮೂರೂ ಪಂದ್ಯಗಳಲ್ಲಿ ಆಡಿ 6 ವಿಕೆಟ್‌ ಉರುಳಿಸಿದರು.

“ಟೆಸ್ಟ್‌ ಕ್ರಿಕೆಟಿಗೆ ಸುಸ್ವಾಗತ. ತಂಗರಸು ನಟರಾಜನ್‌ ಒಂದೇ ಪ್ರವಾಸದ ವೇಳೆ ಮೂರೂ ಮಾದರಿಯ ಕ್ರಿಕೆಟಿಗೆ ಪದಾರ್ಪಣೆಗೈದ ಭಾರತದ ಮೊದಲ ಕ್ರಿಕೆಟಿಗನಾಗಿದ್ದಾರೆ…’ ಎಂದು ಬಿಸಿಸಿಐ ಟ್ವೀಟ್‌ ಮಾಡಿದೆ. ಮೊದಲ ದಿನದಾಟದಲ್ಲಿ 20 ಓವರ್‌ ಎಸೆದ ನಟರಾಜನ್‌, 63 ರನ್‌ ವೆಚ್ಚದಲ್ಲಿ ಲಬುಶೇನ್‌ ಮತ್ತು ವೇಡ್‌ ವಿಕೆಟ್‌ ಹಾರಿಸುವಲ್ಲಿ ಯಶಸ್ವಿಯಾದರು.

44 ದಿನಗಳಲ್ಲಿ  ಮೂರರಲ್ಲೂ ಪದಾರ್ಪಣೆ :

Advertisement

ಟಿ. ನಟರಾಜನ್‌ ಕೇವಲ 44 ದಿನಗಳ ಅಂತರದಲ್ಲಿ ಏಕದಿನ, ಟಿ20 ಹಾಗೂ ಟೆಸ್ಟ್‌ ಕ್ರಿಕೆಟಿಗೆ ಪದಾರ್ಪಣೆಗೈದು ಭಾರತೀಯ ದಾಖಲೆ ಸ್ಥಾಪಿಸಿದರು. ಹಿಂದಿನ ದಾಖಲೆ ಭುವನೇಶ್ವರ್‌  ಹೆಸರಲ್ಲಿತ್ತು. ಅವರು 60 ದಿನಗಳ ಅಂತರದಲ್ಲಿ ಮೂರೂ ಮಾದರಿಗಳ ಕ್ರಿಕೆಟಿಗೆ ಅಡಿಯಿರಿಸಿದ್ದರು.

ವಿಶ್ವದಾಖಲೆ ಹೊಂದಿ ರುವವರು ಕಿವೀಸ್‌ನ ಪೀಟರ್‌ ಇನ್‌ಗ್ರಾಮ್‌. ಇವರು 2009-2010ರ ಬಾಂಗ್ಲಾ ಪ್ರವಾಸದ ವೇಳೆ ಕೇವಲ 12 ದಿನಗಳ ಅಂತರದಲ್ಲಿ ಎಲ್ಲ 3 ಮಾದರಿಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು.

ವಾಷಿಂಗ್ಟನ್‌ಗೆ ಒಲಿದ ಅದೃಷ್ಟ :

ತಮಿಳುನಾಡಿನ ಮತ್ತೋರ್ವ ಕ್ರಿಕೆಟಿಗ, ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಟೆಸ್ಟ್‌ ಪ್ರವೇಶಿಸಿ ಅಚ್ಚರಿ ಮೂಡಿಸಿದರು. ಅವರು ಭಾರತದ 301ನೇ ಟೆಸ್ಟ್‌ ಕ್ರಿಕೆಟಿಗನೆನಿಸಿದರು. ವಾಷಿಂಗ್ಟನ್‌ ಟಿ20 ಸರಣಿಯಲ್ಲಿ ಆಡಿದ್ದು, ನೆಟ್‌ ಬೌಲರ್‌ ಆಗಿ ತಂಡದಲ್ಲಿ ಉಳಿದುಕೊಂಡಿದ್ದರು. ಇದರಿಂದ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ನಿರಾಸೆ ಅನುಭವಿಸಬೇಕಾಯಿತು.

ರೋಹಿತ್‌ ಬೌಲಿಂಗ್‌ :

ಸೈನಿ ಓವರಿನ ಉಳಿದ ಒಂದು ಎಸೆತವನ್ನು ರೋಹಿತ್‌ ಶರ್ಮ ಪೂರ್ತಿಗೊಳಿಸಿದರು. ಮೂಲತಃ ಆಫ್ಸ್ಪಿನ್ನರ್‌ ಆಗಿರುವ ರೋಹಿತ್‌ ಇಲ್ಲಿ ಮಧ್ಯಮ ವೇಗದ ಬೌಲಿಂಗ್‌ ನಡೆಸಿ, ಇದರಲ್ಲಿ ಒಂದು ರನ್‌ ಬಿಟ್ಟುಕೊಟ್ಟರು. ರೋಹಿತ್‌ ಟೆಸ್ಟ್‌ನಲ್ಲಿ ಬೌಲಿಂಗ್‌ ನಡೆಸಿದ್ದು ಇದೇ ಮೊದಲಲ್ಲ. ಈಗಾಗಲೇ 370 ಎಸೆತವಿಕ್ಕಿದ್ದು, 216 ರನ್‌ ವೆಚ್ಚದಲ್ಲಿ 2 ವಿಕೆಟ್‌ ಉರುಳಿಸಿದ್ದಾರೆ. ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ಕೂಡ ಸಾಧಿಸಿದ್ದಾರೆ!

 

Advertisement

Udayavani is now on Telegram. Click here to join our channel and stay updated with the latest news.

Next