ನವದೆಹಲಿ: ಪಾಕಿಸ್ಥಾನದ ಉಗ್ರಪೋಷಣೆಗೆ ಮತ್ತೊಂದು ಭಾರೀ ಹೊಡೆತ ನೀಡಿರುವ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಸೋಮವಾರದಂದು 7 ಉಗ್ರ ಶಿಬಿರಗಳನ್ನು ಧ್ವಂಸಗೊಳಿಸಿದೆ ಮತ್ತು ಭಾರತೀಯ ಸೇನೆಯ ಈ ಕಾರ್ಯಾಚರಣೆಯಲ್ಲಿ ಒಟ್ಟು 50 ಉಗ್ರರು ಹತರಾಗಿದ್ದಾರೆ ಎಂಬ ಮಾಹಿತಿಯನ್ನು ಸೇನೆಯ ಉನ್ನತ ಮೂಲಗಳನ್ನು ಅನುಸರಿಸಿ ರಿಪಬ್ಲಿಕ್ ಟಿ.ವಿ. ವರದಿ ಮಾಡಿದೆ.
ಬಾರ್ಡರ್ ಆಕ್ಷನ್ ಟೀಂ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಏಳು ಮಂದಿ ಪಾಕಿಸ್ಥಾನಿ ಎಸ್.ಎಸ್.ಜಿ. ಕಮಾಂಡೋಗಳು ತಗ್ದಾರ್ ಸೆಕ್ಟರ್ ನಿಂದ ಭಾರತದ ನೆಲದೊಳಕ್ಕೆ ನುಸುಳಿಬರುವ ಪ್ರಯತ್ನದಲ್ಲಿದ್ದಾಗ ಭಾರತೀಯ ಯೋಧರು ಈ ಪ್ರಯತ್ನವನ್ನು ಮಧ್ಯದಲ್ಲೇ ಪ್ರತಿದಾಳಿ ನಡೆಸಿ ತಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಭಾರತೀಯ ಸೇನೆಯ ಈ ಕಾರ್ಯಾಚರಣೆಯ ಕುರುಹಾಗಿ ಪಾಕಿಸ್ಥಾನಿ ಕಮಾಂಡೋಗಳ ಮೃತದೇಹಗಳು ಗಡಿನಿಯಂತ್ರಣ ರೇಖೆಯ ಬಳಿ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲೇ ಬಿದ್ದಿರುವುದು ಪತ್ತೆಯಾಗಿದೆ.
ಭಾರತೀಯ ಸೇನೆಯು 155 ಮಿ.ಮಿ. ಗಾತ್ರದ ಒಟ್ಟು 3000 ಶೆಲ್ ಗಳನ್ನು ಬೋಫೋರ್ಸ್ ಫಿರಂಗಿ ಮೂಲಕ ಸಿಡಿಸಿದ ಪರಿಣಾಮ ಪಿ.ಒ.ಕೆ. ಪ್ರದೇಶದಲ್ಲಿದ್ದ ಒಟ್ಟು ಏಳು ಉಗ್ರಶಿಬಿರಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ ಎಂದು ಮೂಲಗಳು ವರದಿ ಮಾಡಿವೆ. ಇನ್ನು ಈ ಏಳು ಉಗ್ರ ಶಿಬಿರಗಳ ಪೈಕಿ ಎರಡು ಶಿಬಿರಗಳು ಪಿಒಕೆಯ 30 ಕಿಲೋಮೀಟರ್ ಒಳಭಾಗದಲ್ಲಿತ್ತು, ಹಾಗೂ ಇಲ್ಲಿಗೆ ಶೆಲ್ ಗಳು ಅಪ್ಪಳಿಸಿದ ಪರಿಣಾಮ ನೊಸೇರಿ ಆಣೆಕಟ್ಟೆಯ ನೀಲಂ-ಝೀಲಂ ಜಲವಿದ್ಯುತ್ ಸ್ಥಾವರದ ಗೇಟ್ ಸಂಖ್ಯೆ.03ಕ್ಕೆ ಭಾರೀ ಹಾನಿಯಾಗಿದೆ ಎಂದೂ ಖಚಿತ ಮೂಲಗಳಿಂದ ತಿಳಿದುಬಂದಿದೆ.
ಇದಕ್ಕೂ ಮುಂಚೆ ಅಕ್ಟೋಬರ್ 20ರಂದು ಭಾರತೀಯ ಸೇನೆಯು ತಗ್ದಾರ್ ಸೆಕ್ಟರ್ ಎದುರು ಪಾಕ್ ಉಗ್ರಶಿಬಿರಗಳನ್ನು ಗುರಿಯಾಗಿಸಿ ಪ್ರತಿದಾಳಿಯನ್ನು ನಡೆಸಿತ್ತು. ಮತ್ತು ಈ ಭಾಗದಿಂದ ಭಾರತದ ನೆಲದೊಳಗೆ ಉಗ್ರರನ್ನು ನುಸುಳಿಸುವ ಶಿಬಿರಗಳನ್ನು ಗುರಿಯಾಗಿಸಿ ಸೇನೆಯು ಆರ್ಟಿಲರಿ ದಾಳಿಯನ್ನು ಸಂಘಟಿಸಿತ್ತು. ಮತ್ತು ಈ ದಾಳಿಯಲ್ಲಿ 6-10 ಪಾಕಿಸ್ಥಾನಿ ಸೈನಿಕರು ಮೃತಪಟ್ಟಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಮಾತ್ರವಲ್ಲದೇ ಉಗ್ರರ ನಾಲ್ಕು ಲಾಂಚ್ ಪ್ಯಾಡ್ ಗಳನ್ನೂ ಸಹ ಈ ದಾಳಿಯ ಸಂದರ್ಭದಲ್ಲಿ ಭಾರತೀಯ ಸೇನೆ ಧ್ವಂಸಗೊಳಿಸಿತ್ತು.
ಕುಪ್ವಾರ ಜಿಲ್ಲೆಯ ತಗ್ದಾರ್ ಪ್ರದೇಶದಲ್ಲಿ ಪಾಕಿಸ್ಥಾನಿ ಸೇನೆ ಕದನವಿರಾಮ ಉಲ್ಲಂಘಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಈ ದಾಳಿಯನ್ನು ನಡೆಸಿತ್ತು ಎಂದು ವರದಿಯಾಗಿತ್ತು. ಮತ್ತು ಇದನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೂ ಸಹ ಬಳಿಕ ಖಚಿತಪಡಿಸಿದ್ದರು.
ಪಾಕಿಸ್ಥಾನಿ ಸೇನೆ ಸಿಡಿಸಿದ 120 ಮಿ.ಮಿ. ಗಾತ್ರದ ಆರ್ಟಿಲರಿ ಶೆಲ್ ಗಳನ್ನು ನಾಶಗೊಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಪೂಂಛ್ ಜಿಲ್ಲೆಯ ಮೆಂಧಾರ್ ಸೆಕ್ಟರ್ ನಲ್ಲಿ ನಿರಂತರವಾಗಿ ಕದನವಿರಾಮವನ್ನು ಉಲ್ಲಂಘಿಸಿತ್ತಿರುವ ಪಾಕಿಸ್ಥಾನ ಈ ಭಾಗದಲ್ಲಿ ನಿರಂತರ ಶೆಲ್ ದಾಳಿಯನ್ನು ನಡೆಸುತ್ತಿದೆ. ಈ ರೀತಿಯಾಗಿ ಪಾಕ್ ಸೇನೆಯ ಫಿರಂಗಿಗಳಿಂದ ಉಡಾವಣೆಗೊಂಡು ಈ ಭಾಗದಲ್ಲಿ ಬಂದು ಬಿದ್ದಿದ್ದ ಸ್ಪೋಟಗೊಳ್ಳದ ಶೆಲ್ ಗಳನ್ನು ಭಾರತೀಯ ಸೇನೆಯ ಯೋಧರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸುರಕ್ಷಿತ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಿದ್ದಾರೆ.