ಪೂರ್ವ ಸಿಕ್ಕಿಂ: ಉತ್ತರ ಭಾರತ ಸೇರಿದಂತೆ ಈಶಾನ್ಯ ರಾಜ್ಯಗಳು ತೀವ್ರ ಚಳಿಯಿಂದ ತತ್ತರಿಸಿದ್ದು, ಪೂರ್ವ ಸಿಕ್ಕಿಂ ನಲ್ಲಿ ಹಿಮಪಾತಕ್ಕೆ ಸಿಲುಕಿದ್ದ ಸುಮಾರು 1500ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಲಾಗಿದೆ.
ಇಲ್ಲಿನ ಜವಹರಲಾಲ್ ನೆಹರು ರಸ್ತೆಯಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ.
ರಕ್ಷಿಸಿದ ಪ್ರವಾಸಿಗರಿಗೆ ಅಗತ್ಯ ವಸ್ತುಗಳಾದ ಆಹಾರ, ಬೆಚ್ಚಗಿನ ದಿರಿಸು, ಔಷಧಿ ನೀಡಲಾಗಿದ್ದು, ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರ ಸುರಕ್ಷಿತೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನಾಥುಲಾ ಪಾಸ್ ನಿಂದ ಸುಮಾರು 300 ಟ್ಯಾಕ್ಸಿಗಳಲ್ಲಿ ಸೊಮಂಗ್ ಕೆರೆ ಪ್ರದೇಶಕ್ಕೆ ಸಂಚರಿಸುತ್ತಿದ್ದ ವೇಳೆ ಜವಹರಲಾಲ್ ನೆಹರು ರಸ್ತೆಯಲ್ಲಿ ಹಿಮಪಾತವಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಪ್ರವಾಸಿಗರಿಗೆ 17ನೇ ಮೈಲಿಯ ಸೇನಾ ಶಿಬಿರದಲ್ಲಿ ಆಶ್ರಯ ನೀಡಲಾಗಿದೆ.
ಸೇನೆಯ ಜಿಸಿಬಿ ಮತ್ತು ಇತರ ಯಂತ್ರಗಳ ಮೂಲಕ ರಸ್ತೆಯ ಮೇಲಿನ ಹಿಮವನ್ನು ತೆರವುಗೊಳಿಸುತ್ತಿದೆ.