ಮಾಲೆ: ಮಾಲ್ಡೀವ್ಸ್ ದೇಶವು “ಸಂಪೂರ್ಣ ಸ್ವತಂತ್ರ” ವನ್ನು ಹೊಂದಲು ಉದ್ದೇಶಿಸಿದೆ. ಹೀಗಾಗಿ ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ಭಾರತೀಯ ಪಡೆಗಳನ್ನು ತೊರೆಯಲು ಸೂಚಿಸಿದೆ ಎಂದು ಅಧ್ಯಕ್ಷರಾಗಿ ಆಯ್ಕೆಯಾದ ಮೊಹಮದ್ ಮುಯಿಜ್ಜು ಹೇಳಿದ್ದಾರೆ.
ಪ್ರಸ್ತುತ ಇಬ್ರಾಹಿಂ ಸೋಲಿಹ್ ಅವರು ದ್ವೀಪ ರಾಷ್ಟ್ರದ ವ್ಯವಹಾರಗಳ ಮೇಲೆ ಭಾರತವನ್ನು ಅನಿಯಂತ್ರಿತವಾಗಿ ನಿಯಂತ್ರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಭಾರತೀಯ ಸೈನಿಕರನ್ನು ಅಲ್ಲಿ ನೆಲೆಸಲು ಅವಕಾಶ ನೀಡುವ ಮೂಲಕ ದೇಶದ ಸಾರ್ವಭೌಮತ್ವವನ್ನು ಒಪ್ಪಿಸಿದ್ದಾರೆ ಎಂದು ಮುಯಿಜ್ಜು ಅವರು ಆರೋಪಿಸಿದರು.
ಹಿಂದೂ ಮಹಾಸಾಗರದ ದ್ವೀಪಸಮೂಹವಾದ ಮಾಲ್ಡೀವ್ಸ್ ನಲ್ಲಿ ಹೊಸದಾಗಿ ಚುನಾಯಿತರಾದ ಮುಯಿಝು, ಬ್ಲೂಮ್‌ಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ “ಇದು ಭಾರತೀಯ ವಿದೇಶಿ ಮಿಲಿಟರಿ ಉಪಸ್ಥಿತಿಯಾಗಿದೆ” ಎಂದು ಹೇಳಿದರು. ಬೇರೆ ಯಾವುದೇ ದೇಶದ ಪಡೆಗಳಾಗಿದ್ದರೂ ಅವರ ಪ್ರತಿಕ್ರಿಯೆ ಇದೇ ಆಗಿರುತ್ತದೆ ಎಂದು ಅವರು ಹೇಳಿದರು.
ಸುಮಾರು 70 ಭಾರತೀಯ ಸೇನಾ ಸಿಬ್ಬಂದಿಗಳು ನವದೆಹಲಿ ಪ್ರಾಯೋಜಿತ ರಾಡಾರ್ ಕೇಂದ್ರಗಳು ಮತ್ತು ಕಣ್ಗಾವಲು ವಿಮಾನಗಳನ್ನು ನಿರ್ವಹಿಸುತ್ತಿದ್ದಾರೆ. ಭಾರತೀಯ ಯುದ್ಧನೌಕೆಗಳು ಮಾಲ್ಡೀವ್ಸ್ ನ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗಲು ಸಹಾಯ ಮಾಡುತ್ತವೆ.
ಮುಯಿಝು ಅವರು ತಮ್ಮ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕುವ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದರು, ಆ ಮಾತುಕತೆಗಳು “ಈಗಾಗಲೇ ಬಹಳ ಯಶಸ್ವಿಯಾಗಿದೆ” ಎಂದರು.