ಕಾಠ್ಮಂಡು:ಉಭಯ ದೇಶಗಳ ನಡುವಿನ ಗಡಿ ವಿವಾದ ಸೇರಿದಂತೆ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಭಾರತೀಯ ಸೇನಾ ವರಿಷ್ಠ ಜನರಲ್ ಎಂಎಂ ನರಾವಣೆ ಅವರು ಮೂರು ದಿನಗಳ ನೇಪಾಳ ಭೇಟಿಯ ಹಿನ್ನೆಲೆಯಲ್ಲಿ ಬುಧವಾರ(ನವೆಂಬರ್ 4, 2020) ಕಾಠ್ಮಂಡುಗೆ ಆಗಮಿಸಿರುವುದಾಗಿ ವರದಿ ತಿಳಿಸಿದೆ.
ನೇಪಾಳ ಸೇನಾ ವರಿಷ್ಠ ಜನರಲ್ ಪೂರ್ಣ ಚಂದ್ರ ಥಾಪಾ ಅವರ ಅಧಿಕೃತ ಆಹ್ವಾನದ ಮೇರೆಗೆ ಜನರಲ್ ನರಾವಣೆ ಅವರು ನೇಪಾಳ ಪ್ರವಾಸ ಕೈಗೊಂಡಿದ್ದು, ಪತ್ನಿ ವೀಣಾ ನರಾವಣೆ ಕೂಡಾ ಜತೆಗಿದ್ದರು. ವೀಣಾ ನರಾವಣೆ ಅವರು ಭಾರತೀಯ ಸೇನೆಯ ಎಡಬ್ಲ್ಯುಡಬ್ಲ್ಯುಎ(Army Wives Welfare Association) ಅಧ್ಯಕ್ಷರಾಗಿದ್ದಾರೆ.
ನೇಪಾಳದ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನರಲ್ ನರಾವಣೆ ಮತ್ತು ಪತ್ನಿ ವೀಣಾ ನರಾವಣೆ ಅವರನ್ನು ಲೆಫ್ಟಿನೆಂಟ್ ಪ್ರಭು ರಾಮ್ ಅವರನ್ನು ಸ್ವಾಗತಿಸಿ ಬರಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಇಂತಹ ಉನ್ನತ ಮಟ್ಟದ ಭೇಟಿ ಅಗತ್ಯವಿದೆ ಎಂದು ನೇಪಾಳ ಸೇನೆ ನಂಬಿರುವುದಾಗಿ ನೇಪಾಳ ಸೇನೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಿದೆ.
ನೇಪಾಳ ಸೇನಾ ಕೇಂದ್ರ ಕಚೇರಿಗೆ ಜನರಲ್ ನರಾವಣೆ ಅವರು ಭೇಟಿ ನೀಡಲಿದ್ದು, ನಂತರ ನೇಪಾಳ ಆರ್ಮಿ ಕಾಲೇಜ್ ನಲ್ಲಿನ ಯುವ ಸೇನಾ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಗುರುವಾರ ನೇಪಾಳ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ಜತೆ ಔಪಚಾರಿಕವಾಗಿ ಮಾತುಕತೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.