ನವದೆಹಲಿ: ಜೂನಿಯರ್ ಕಮಿಷನ್ಡ್ ಅಧಿಕಾರಿಗಳು, ಇತರೆ ರ್‍ಯಾಂಕ್ ಸೇರಿದಂತೆ ಅಗ್ನಿವೀರರ ನೇಮಕಾತಿಯ ಕಾರ್ಯವಿಧಾನದಲ್ಲಿ ಭಾರತೀಯ ಸೇನೆ ಪರಿಷ್ಕರಣೆ ಮಾಡಿದೆ.
ಪರಿಷ್ಕೃತ ವಿಧಾನದ ಪ್ರಕಾರ, 3 ಹಂತಗಳಲ್ಲಿ ನೇಮಕಾತಿ ನಡೆಯುತ್ತದೆ. ಮೊದಲಿಗೆ, ಕಂಪ್ಯೂಟರ್ ಆಧಾರಿತ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಇ) ನಡೆಸಲಾಗುತ್ತದೆ. ನಂತರ ದೈಹಿಕ ಕ್ಷಮತೆ ಪರೀಕ್ಷೆ ನಡೆಸಲಾಗುತ್ತದೆ. ನೇಮಕಾತಿಗಾಗಿ ಅರ್ಜಿ ಸಲ್ಲಿಕೆಗೆ 2023ರ ಫೆ.16ರಿಂದ ಮಾ.15ರವರೆಗೆ ಅವಕಾಶ ಇದೆ.
ಸೇನೆಯ ವೆಬ್‌ಸೈಟ್ ////www.joinindianarmy.nic.in ಮೂಲಕ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಇ) ಬರೆಯಬೇಕಾಗುತ್ತದೆ.
ಎರಡನೇ ಹಂತದಲ್ಲಿ, ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಆಯಾ ಸೇನಾ ನೇಮಕಾತಿ ಕಚೇರಿಗಳು ನಿರ್ಧರಿಸಿದ ಸ್ಥಳದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ದೈಹಿಕ ಅಳತೆ ಪರೀಕ್ಷೆ ನಡೆಸಲಾಗುತ್ತದೆ. ಅಂತಿಮವಾಗಿ ಮೂರನೇ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕಾಗುತ್ತದೆ. 2023ರ ಏ.17ರಿಂದ 30ರ ನಡುವೆ ದೇಶಾದ್ಯಂತ ಸುಮಾರು 180 ಪರೀಕ್ಷಾ ಕೇಂದ್ರಗಳಲ್ಲಿ ಸಿಇಇ ನಡೆಯಲಿದೆ.
ಅರ್ಜಿ ಸಲ್ಲಿಸಲು ಪ್ರತಿ ಅಭ್ಯರ್ಥಿಗೆ 500 ರೂ. ಶುಲ್ಕವಿದ್ದು, ವೆಚ್ಚದ ಶೇ.50ರಷ್ಟನ್ನು ಸೇನೆಯೇ ಭರಿಸಲಿದೆ. ಅರ್ಜಿ ಸಲ್ಲಿಕೆ ಸಮಯದಲ್ಲಿ ಅಭ್ಯರ್ಥಿಗಳು 250 ರೂ. ಮಾತ್ರ ಪಾವತಿಸಬೇಕಾಗುತ್ತದೆ. ಅಭ್ಯರ್ಥಿಗಳು ಸಿಇಇ ಪರೀಕ್ಷೆ ಬರೆಯಲು ಐದು ಸ್ಥಳಗಳ ಆಯ್ಕೆ ಮಾಡಬಹುದಾಗಿದೆ ಎಂದೂ ಸೇನೆ ತಿಳಿಸಿದೆ.