ಲಾಸ್ ಏಂಜಲೀಸ್: ಕೋವಿಡ್ 19 ಸೋಂಕು ತಗಲುವ ಭಯದಿಂದ ಸುಮಾರು ಮೂರು ತಿಂಗಳ ಕಾಲ ಯಾರಿಗೂ ತಿಳಿಯದಂತೆ ಶಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಸ್ತವ್ಯ ಹೂಡಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಲಾಸ್ ಏಂಜಲೀಸ್ ನ ಉಪನಗರದಲ್ಲಿ ವಾಸಿಸುತ್ತಿದ್ದ ಆದಿತ್ಯ ಸಿಂಗ್(36ವರ್ಷ) ಅಕ್ಟೋಬರ್ 19ರಿಂದ ಶಿಕಾಗೋದ ಓ’ಹರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುರಕ್ಷಿತ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದು, ಶನಿವಾರ (ಜನವರಿ 16) ಬಂಧಿಸಲಾಗಿದೆ ಎಂದು ಚಿಕಾಗೋ ಟ್ರಿಬ್ಯೂನ್ ವರದಿ ಮಾಡಿದೆ.
ವಿಮಾನ ನಿಲ್ದಾಣದಲ್ಲಿನ ನಿರ್ಬಂಧಿತ ಪ್ರದೇಶದೊಳಕ್ಕೆ ಕಾನೂನು ಬಾಹಿರವಾಗಿ ಪ್ರವೇಶಿಸಿದ್ದ ಮತ್ತು ಅಸಭ್ಯತೆ, ಕಳ್ಳತನ ಆರೋಪ ಸಿಂಗ್ ವಿರುದ್ಧ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಓಹರೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಿಂಗ್, ಅಕ್ಟೋಬರ್ 19ರಿಂದ ವಿಮಾನ ನಿಲ್ದಾಣದ ಭದ್ರತಾ ವಲಯದಲ್ಲಿ ಪತ್ತೆಯಾಗದಂತೆ ವಾಸಿಸಿರುವುದಾಗಿ ಪ್ರಾಸಿಕ್ಯೂಟರ್ಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಯೂನೈಟೆಡ್ ಏರ್ ಲೈನ್ಸ್ ಸಿಬ್ಬಂದಿ ಸಿಂಗ್ ಬಳಿ ಗುರುತು ಚೀಟಿ ತೋರಿಸುವಂತೆ ಕೇಳಿದ್ದರು. ಈತ ಗುರುತಿನ ಬ್ಯಾಡ್ಜ್ ವೊಂದನ್ನು ತೋರಿಸಿದ್ದ, ಆದರೆ ಅದು ಕಳೆದ ಅಕ್ಟೋಬರ್ ತಿಂಗಳಿನಿಂದ ನಾಪತ್ತೆಯಾಗಿದ್ದ ಮ್ಯಾನೇಜರ್ ಅವರ ಬ್ಯಾಡ್ಜ್ ಆಗಿತ್ತು. ನಂತರ ಸಿಂಗ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ವರದಿ ವಿವರಿಸಿದೆ.
ಕೋವಿಡ್ 19 ಸೋಂಕಿನ ಭಯದಿಂದ ಮನೆಗೆ ತೆರಳದೆ ಶಿಕಾಗೋ ವಿಮಾನ ನಿಲ್ದಾಣದ ಭದ್ರತಾ ವಲಯದಲ್ಲಿಯೇ ಸಿಂಗ್ ವಾಸವಾಗಿರುವುದಾಗಿ ಅಸಿಸ್ಟೆಂಟ್ ಸ್ಟೇಟ್ ಅಟಾರ್ನಿ ಕಾಥ್ಲೀಲಿನ್ ಹಾಗೆರ್ಟೈ ಕೋರ್ಟ್ ಗೆ ತಿಳಿಸಿದ್ದರು.
ಸಿಂಗ್ ಜಾಮೀನಿಗಾಗಿ ಒಂದು ಸಾವಿರ ಡಾಲರ್ ಪಾವತಿಸಲು ಸಾಧ್ಯವಾಗುವುದಾದರೆ ವಿಮಾನ ನಿಲ್ದಾಣ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕು ಎಂದು ಅಟಾರ್ನಿ ತಿಳಿಸಿದ್ದು, ವಿಚಾರಣೆಯನ್ನು ಜನವರಿ 27ಕ್ಕೆ ಮುಂದೂಡಲಾಗಿದೆ ಎಂದು ವರದಿ ತಿಳಿಸಿದೆ.