ಹೂಸ್ಟನ್: ಅರ್ಧಕ್ಕೇ ಶಾಲೆ ಬಿಟ್ಟ ಅನಿವಾಸಿ ಭಾರತೀಯ ಯುವಕ ರಿಶಿ ಶಾ ಈಗ ಶತಕೋಟ್ಯಧಿಪತಿ! 31 ವರ್ಷದವರಾದ ಶಾ ಯಾರೂ ಊಹಿಸದ ರೀತಿಯ ಸಾಧನೆ ಮಾಡಿದ್ದಾರೆ. ಕೇವಲ 10 ವರ್ಷಗಳಲ್ಲಿ ಅವರ ಸಾಧನೆ ಎಲ್ಲರ ಹುಬ್ಬೇರಿಸಿದ್ದಷ್ಟೇ ಅಲ್ಲ, ಅಮೆರಿಕದ ಚಿಕಾಗೋನ ಶತಕೋಟ್ಯಧೀಶರ ಪಟ್ಟಿಯಲ್ಲಿ ಹೆಸರು ದಾಖಲಾಗುವಂತೆ ಮಾಡಿದೆ. 2006ರಲ್ಲಿ ‘ಔಟ್‌ಕಮ್ ಹೆಲ್ತ್’ ಹೆಸರಿನ ವೈದ್ಯಕೀಯ ಸಾಫ್ಟ್ವೇರ್ ಕುರಿತ ಕಂಪೆನಿಯೊಂದನ್ನು ಶಾ ಮತ್ತು ಅವರ ಪರಿಚಯದವರಾದ ಶ್ರದ್ಧಾ ಅಗರ್‌ವಾಲ್, ಸುಮಾರು 2800 ಸಾವಿರ ಕೋಟಿ ಹೂಡಿಕೆ ಆಕರ್ಷಿಸಿ ಸ್ಥಾಪಿಸಿದರು. ಈಗ ಈ ಕಂಪೆನಿಯ ಮೌಲ್ಯ ಬರೋಬ್ಬರಿ 35,840 ಕೋಟಿ ರೂ. ಆಗಿದೆ. ಶಾ ಅವರ ತಂದೆ ಭಾರತೀಯರಾಗಿದ್ದು, ಚಿಕಾಗೋಗೆ ವಲಸೆ ಹೋಗಿದ್ದರು. ಅವರ ತಂದೆ ನಿಧನ ಬಳಿಕ ತಾಯಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಅವರ ಸಹೋದರರಿಗೆ ಟೈಪ್ 1 ಡಯಾಬಿಟೀಸ್ ಇದ್ದು, ಈ ಕುರಿತಾಗಿ ಮಾಹಿತಿ ಸಂಗ್ರಹಣೆಯ ವಿಚಾರವೇ ಅವರಿಗೆ ಹೊಸ ಕಂಪೆನಿ ಸ್ಥಾಪಿಸಲು ಕಾರಣವಾಯಿತು. ಆರಂಭದಲ್ಲಿ ಶಾ ಅವರು ಶೇ.80ರಷ್ಟು ಮತ್ತು ಶ್ರದ್ಧಾ ಅವರು ಶೇ.20ರಷ್ಟು ಮಾಲಕತ್ವ ಹೊಂದಿದ್ದರು. ಈಗ ಶಾ ಅವರ ಕಂಪೆನಿ ಷೇರು ಮಾರುಕಟ್ಟೆಯಲ್ಲಿ ನೋಂದಾಯಿಸಲ್ಪಟ್ಟ ಪ್ರತಿಷ್ಠಿತ ಕಂಪನಿಯಾಗಿ ಬೆಳೆದಿದೆ.
ಔಟ್‌ಕಮ್ ಹೆಲ್ತ್ ಏನು ಮಾಡುತ್ತೆ?
ಇದೊಂದು ಡಿಜಿಟಲ್ ರೂಪದಲ್ಲಿ ಮಾಹಿತಿ ನೀಡುವ ಕಂಪೆನಿ. ವೈದ್ಯರು ಮತ್ತು ರೋಗಿಗಳಿಗೆ ಸಂಪರ್ಕ ಏರ್ಪಡಿಸುವುದರ ಜೊತೆಗೆ ರೋಗಿಗಳಿಗೆ ತಮಗೆ ಬೇಕಾದ ಚಿಕಿತ್ಸೆ ಬಗ್ಗೆ ಮಾಹಿತಿ ನೀಡುತ್ತದೆ. ರೋಗಿಗಳಿಗೆ ಎಂತಹ ಚಿಕಿತ್ಸೆ ನೀಡಬೇಕೆಂದೂ ವೈದ್ಯರಿಗೆ ಸಲಹೆ ನೀಡುತ್ತದೆ. ಇದಕ್ಕಾಗಿ ಕಂಪೆನಿ ಟಚ್‌ಸ್ಕ್ರೀನ್ ಮತ್ತು ವಿಶೇಷ ಸಾಫ್ಟ್ವೇರ್ ಇರುವ ಉಪಕರಣಗಳನ್ನು ಆಸ್ಪತ್ರೆಗಳಿಗೆ ಒದಗಿಸುತ್ತದೆ. 2020ರ ವೇಳೆಗೆ ಅಮೆರಿಕದ ಶೇ.70ರಷ್ಟು ವೈದ್ಯರನ್ನು ಈ ಸಂಸ್ಥೆ ಸಂಪರ್ಕಿಸುವ ಇರಾದೆ ಹೊಂದಿದೆ.