Advertisement
ಅಭ್ಯಾಸದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸೇನಾ ಸಿಬ್ಬಂದಿ ಮುಖ್ಯಸ್ಥರು) ಜನರಲ್ ಅನಿಲ್ ಚೌಹಾಣ್ ಅವರು ಉಪಸ್ಥಿತರಿದ್ದರು. 120ಕ್ಕೂ ಹೆಚ್ಚು ವಿಮಾನಗಳು ಭಾಗವಹಿಸಿದ ಈ ಅಭ್ಯಾಸದಲ್ಲಿ, ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿ ನಿಖರವಾಗಿ ದಾಳಿ ಕಾರ್ಯಾಚರಣೆ ನಡೆಸುವ ಭಾರತೀಯ ವಾಯು ಸೇನೆಯ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು.
Related Articles
Advertisement
ಈ ವರ್ಷದ ವಾಯು ಶಕ್ತಿ ಅಭ್ಯಾಸದಲ್ಲಿ ಭಾರತೀಯ ಸೇನೆಯೂ ಭಾಗವಹಿಸಿದ್ದು, ಇದು ಭಾರತೀಯ ಸೇನೆಯ ಎರಡೂ ವಿಭಾಗಗಳ ನಡುವಿನ ಅತ್ಯುತ್ತಮ ಸಂಯೋಜನೆಯನ್ನು ಪ್ರದರ್ಶಿಸಿತು.
ವಾಯು ಶಕ್ತಿ ಅಭ್ಯಾಸದಲ್ಲಿ ಭಾರತದ ಸ್ವದೇಶೀ ನಿರ್ಮಾಣದ ತೇಜಸ್ ಯುದ್ಧ ವಿಮಾನ, ಪ್ರಚಂಡ್ ಮತ್ತು ಧ್ರುವ್ ಹೆಲಿಕಾಪ್ಟರ್‌ಗಳು, ಜಾಗತಿಕವಾಗಿ ಗುರುತಿಸಲ್ಪಟ್ಟ ವಿಮಾನಗಳಾದ ರಫೇಲ್, ಮಿರೇಜ್-2000, ಸುಖೋಯಿ-30 ಎಂಕೆಐ, ಮತ್ತು ಜಾಗ್ವಾರ್‌ಗಳೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು. ಅದರೊಡನೆ, ಅತ್ಯಾಧುನಿಕ ಹೆಲಿಕಾಪ್ಟರ್‌ಗಳಾದ ಚಿನೂಕ್, ಅಪಾಚೆ, ಮತ್ತು ಎಂಐ-17ಗಳು ಅಭ್ಯಾಸದಲ್ಲಿ ಭಾಗಿಯಾದವು. ವಾಯು ಶಕ್ತಿ ಅಭ್ಯಾಸ ಭಾರತೀಯ ಸ್ವದೇಶೀ ನಿರ್ಮಾಣದ ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ವ್ಯವಸ್ಥೆಗಳಾದ ಆಕಾಶ್ ಮತ್ತು ಸಮರ್‌ನಂತಹ ಆಯುಧ ವ್ಯವಸ್ಥೆಗಳನ್ನೂ ಪ್ರದರ್ಶಿಸಿತು.
2024ರ ವಾಯು ಶಕ್ತಿ ಅಭ್ಯಾಸವನ್ನು ‘ನವಶ್ ವಜ್ರ ಪ್ರಹಾರಮ್’ ಅಂದರೆ, ಆಗಸದಿಂದ ಮಿಂಚಿನ ದಾಳಿ ಎಂಬ ಥೀಮ್ ಅಡಿಯಲ್ಲಿ ನಡೆಸಲಾಗಿದ್ದು, ಇದು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಪ್ರತಿನಿಧಿಸಿದ್ದು, ರಾಷ್ಟ್ರೀಯ ಭದ್ರತೆಯ ಕುರಿತು ವಾಯುಪಡೆಯ ಬದ್ಧತೆ ಮತ್ತು ಸ್ವಾವಲಂಬನೆಯ ಸಾಧನೆಯೆಡೆಗೆ ನಿರಂತರ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.
ವಾಯು ಶಕ್ತಿ ಅಭ್ಯಾಸ ಮೂರು ವರ್ಷಗಳಿಗೊಮ್ಮೆ ನೆರವೇರುವ ಅಭ್ಯಾಸವಾಗಿದ್ದು, ಕಳೆದ ಬಾರಿ 2019ರ ಫೆಬ್ರವರಿಯಲ್ಲಿ ನೆರವೇರಿತ್ತು. 2022ರಲ್ಲಿ ಆಯೋಜನೆಗೊಳ್ಳಬೇಕಿದ್ದ ವಾಯು ಶಕ್ತಿ ಆವೃತ್ತಿ ರಷ್ಯಾ ಮತ್ತು ಉಕ್ರೇನ್ ನಡುವೆ ತೀವ್ರಗೊಂಡಿದ್ದ ಚಕಮಕಿಯ ಕಾರಣದಿಂದ ರದ್ದಾಗಿತ್ತು. ಈ ನಿರ್ಧಾರಕ್ಕೆ ಕೋವಿಡ್-19 ಕೂಡ ಕಾರಣವಾಗಿತ್ತು.
ವಾಯು ಶಕ್ತಿ 2024ರ ಗುರಿಗಳು
i) ಭಾರತೀಯ ವಾಯು ಸೇನೆಯ ಸಮಗ್ರ ಯುದ್ಧ ಮತ್ತು ಕಾರ್ಯಾಚರಣಾ ಸಾಮರ್ಥ್ಯಗಳ ಪ್ರದರ್ಶನ.
ii) ಗಾಳಿಯಿಂದ ಭೂಮಿಗೆ ಮತ್ತು ಭೂಮಿಯಿಂದ ಗಾಳಿಗೆ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ತೋರುವಿಕೆ. ಭಾರತೀಯ ನಿರ್ಮಾಣದ ತೇಜಸ್ ರೀತಿಯ ವಿಮಾನಗಳು ಸೇರಿದಂತೆ, ವಿವಿಧ ಯುದ್ಧ ವಿಮಾನಗಳ ನಡುವೆ ಯಾವುದೇ ಅಡೆತಡೆಯಿಲ್ಲದ ಸಂಯೋಜನೆ.
iii) ವಿವಿಧ ಮಿಲಿಟರಿ ಯೋಜನೆಗಳಲ್ಲಿ ಭಾರತೀಯ ಭೂ ಸೇನೆಯೊಡನೆ ಸಂಯೋಜಿತ ಕಾರ್ಯಾಚರಣೆಗಳ ಪ್ರದರ್ಶನ.
iv) ಭಾರತೀಯ ವಾಯುಪಡೆ ಬಳಸುವ ಇತ್ತೀಚಿನ ತಾಂತ್ರಿಕ ನಾವೀನ್ಯತೆಗಳು ಮತ್ತು ಆಯುಧಗಳ ಪ್ರದರ್ಶನ.
v) ರಾತ್ರಿಯ ವೇಳೆ ಕಾರ್ಯಾಚರಣೆ ನಡೆಸಲು ಮತ್ತು ದಾಳಿ ನಡೆಸುವಲ್ಲಿ ಭಾರತೀಯ ವಾಯುಪಡೆಯ ಸಾಮರ್ಥ್ಯ ಪ್ರದರ್ಶನ. ಈ ಅಭ್ಯಾಸದಲ್ಲಿ ಭಾರತೀಯ ವಾಯುಪಡೆಯ ಸಾಗಾಣಿಕಾ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳೂ ಪ್ರದರ್ಶನ ತೋರಿವೆ.
ಏಕೀಕೃತ ವೈಮಾನಿಕ ಸಾಮರ್ಥ್ಯ ಪ್ರದರ್ಶನ
ಭಾರತೀಯ ವಾಯುಪಡೆ ಮೂರು ಪ್ರಮುಖ ಯುದ್ಧ ಅಭ್ಯಾಸಗಳಾದ ವಾಯು ಶಕ್ತಿ, ಗಗನ್ ಶಕ್ತಿ, ಮತ್ತು ತರಂಗ್ ಶಕ್ತಿಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ.
ಇಂತಹ ಅಭ್ಯಾಸಗಳು ಭಾರತೀಯ ವಾಯುಪಡೆಯ ರಕ್ಷಣೆ ಮತ್ತು ದಾಳಿ ಸಾಮರ್ಥ್ಯ, ಹಗಲು ಮತ್ತು ರಾತ್ರಿ ವೇಳೆಯ ಕಾರ್ಯಾಚರಣಾ ಸಾಮರ್ಥ್ಯವನ್ನು ತೋರಿಸುತ್ತವೆ. ಅದರೊಡನೆ, ಇಂತಹ ಕಾರ್ಯಾಚರಣೆಗಳು ಭಾರತೀಯ ಸೇನಾಪಡೆಯ ವಿವಿಧ ವಿಭಾಗಗಳ ಕಾರ್ಯಾಚರಣಾ ಸಹಯೋಗವನ್ನು ಪ್ರದರ್ಶಿಸುತ್ತವೆ.
ವಾಯು ಶಕ್ತಿ ಅಭ್ಯಾಸ: ಭಾರತೀಯ ವಾಯುಪಡೆ ಆಯೋಜಿಸುವ ‘ವಾಯು ಶಕ್ತಿ’ ಸೇನಾ ಅಭ್ಯಾಸ ಪ್ರತಿ ಮೂರು ವರ್ಷಗಳಿಗೊಮ್ಮೆ ಜರಗುತ್ತದೆ. ಪೋಖ್ರಾನ್ ಪ್ರದೇಶದಲ್ಲಿ ಜರಗುವ ಈ ಅಭ್ಯಾಸದಲ್ಲಿ, ಅಂದಾಜು 135 ಯುದ್ಧ ವಿಮಾನಗಳು, ವಿಮಾನಗಳು, ಹೆಲಿಕಾಪ್ಟರ್‌ಗಳು, ಹಾಗೂ ಡ್ರೋನ್‌ಗಳು ಭಾಗವಹಿಸುತ್ತವೆ.
ಗಗನ ಶಕ್ತಿ ಅಭ್ಯಾಸ: ಇದು ಭಾರತೀಯ ವಾಯುಪಡೆ ಭಾರತೀಯ ಸೇನೆಯ ಇತರ ವಿಭಾಗಗಳು ಮತ್ತು ಪಾಲುದಾರರ ಜೊತೆ ಕೈಗೊಳ್ಳುವ ಸಮರ ಅಭ್ಯಾಸವಾಗಿದೆ. ಉತ್ತರದಿಂದ ದಕ್ಷಿಣಕ್ಕೆ – ಪೂರ್ವದಿಂದ ಪಶ್ಚಿಮಕ್ಕೆ ಕಾರ್ಯಾಚರಿಸುವ ಭಾರತೀಯ ಸೇನೆ ಮತ್ತು ನೌಕಾಪಡೆಗಳು ಇದರಲ್ಲಿ ಭಾಗಿಯಾಗುತ್ತವೆ. ಈ ಅಭ್ಯಾಸದಲ್ಲಿ ರಫೇಲ್ ಯುದ್ಧ ವಿಮಾನಗಳು ಮತ್ತು ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳೂ ಭಾಗಿಯಾಗುತ್ತವೆ. ಈ ಅಭ್ಯಾಸವೂ 2024ರಲ್ಲಿ ನಡೆಯಲಿದೆ.
ತರಂಗ್ ಶಕ್ತಿ ಅಭ್ಯಾಸ: ಇದು ಭಾರತದಲ್ಲಿ ನಡೆಯುವ ಮೊದಲ ಬಹುರಾಷ್ಟ್ರೀಯ ಪಾಲ್ಗೊಳ್ಳುವಿಕೆಯ ಅಭ್ಯಾಸವಾಗಿದೆ. ಇದರಲ್ಲಿ ಭಾರತದ ಸ್ನೇಹಿತ ರಾಷ್ಟ್ರಗಳಾದ ಅಮೆರಿಕಾ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಹಾಗೂ ಇತರ ಸ್ಥಳೀಯ ರಾಷ್ಟ್ರಗಳ ಯುದ್ಧ ವಿಮಾನಗಳು ಭಾಗಿಯಾಗಲಿವೆ. ಈ ಅಭ್ಯಾಸದಲ್ಲಿ ಒಟ್ಟು 12 ಮಿತ್ರ ವಾಯುಪಡೆಗಳು ಭಾಗವಹಿಸುವ ನಿರೀಕ್ಷೆಗಳಿವೆ.
ಭಾರತೀಯ ವಾಯಪಡೆ ಪ್ರಸ್ತುತ ತನ್ನ ಜಾಗತಿಕ ವ್ಯಾಪ್ತಿ, ಅತ್ಯಂತ ದೀರ್ಘ ವ್ಯಾಪ್ತಿಯ ಗುರಿಯ ಮೇಲೆ ನಿಖರ ದಾಳಿ ನಡೆಸುವ ಸಾಮರ್ಥ್ಯದಿಂದಾಗಿ ಹೆಸರುವಾಸಿಯಾಗುತ್ತಿದೆ. ಭಾರತೀಯ ವಾಯುಪಡೆ ಇದೇ ರೀತಿಯಲ್ಲಿ ಹೊಸ ಸಾಮರ್ಥ್ಯಗಳ ಅನಾವರಣ ನಡೆಸುವುದನ್ನು ಮುಂದುವರಿಸುವ ನಿರೀಕ್ಷೆಗಳಿವೆ.
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)