ವಾಷಿಂಗ್ಟನ್: ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಮತ್ತು ಅಮೆರಿಕದ ಪ್ರಜೆ ಗುರುಪತ್‌ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ್ದ ಆರೋಪಡಾ ಮೇಲೆ ಭಾರತೀಯ ಪ್ರಜೆ ನಿಖಿಲ್ ಗುಪ್ತಾನನ್ನು ಜೆಕ್ ಗಣರಾಜ್ಯದಿಂದ ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಪ್ರಿಸನ್ಸ್ ವೆಬ್‌ಸೈಟ್ ವರದಿ ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಪನ್ನು ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಯುಎಸ್ ಸರ್ಕಾರದ ಕೋರಿಕೆಯ ಮೇರೆಗೆ 52 ವರ್ಷದ ಗುಪ್ತಾ ಅವರನ್ನು ಕಳೆದ ವರ್ಷ ಜೆಕ್ ರಿಪಬ್ಲಿಕ್‌ನಲ್ಲಿ ಬಂಧಿಸಲಾಯಿತು. ಅಂದಿನಿಂದ ನಿಖಿಲ್ ನನ್ನು ಪ್ರೇಗ್‌ನ ಜೈಲಿನಲ್ಲಿ ಇರಿಸಲಾಗಿತ್ತು. ಈಗ ಅವರನ್ನು ಅಮೆರಿಕಕ್ಕೆ ಕರೆತರಲಾಗಿದ್ದು ಅದರಂತೆ ಇಂದು ನ್ಯೂಯಾರ್ಕ್‌ನ ಫೆಡರಲ್ ನ್ಯಾಯಾಲಯಕ್ಕೆ ಹಾಜರಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ಪನ್ನು ಅವರನ್ನು ಕೊಲ್ಲಲು ವ್ಯಕ್ತಿಯೊಬ್ಬರಿಗೆ ಸುಪಾರಿ ನೀಡಿದ್ದ ಗುಪ್ತಾ, ಮುಂಗಡವಾಗಿ 15,000 ಡಾಲರ್ ನೀಡಿದ್ದ ಎಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ. ಹೆಸರು ಬಹಿರಂಗಪಡಿಸದ ಭಾರತೀಯ ಅಧಿಕಾರಿಯೊಬ್ಬರು ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದೂ ಆರೋಪಿಸಲಾಗಿದೆ. ನಿಖಿಲ್ ಗುಪ್ತಾ ಅವರನ್ನು ಪ್ರಸ್ತುತ ಬ್ರೂಕ್ಲಿನ್‌ನಲ್ಲಿರುವ ಫೆಡರಲ್ ಮೆಟ್ರೋಪಾಲಿಟನ್ ಡಿಟೆನ್ಶನ್ ಸೆಂಟರ್‌ನಲ್ಲಿ ಇರಿಸಲಾಗಿದೆ.
ಮಾಹಿತಿ ಪ್ರಕಾರ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಸ್ತಾಂತರಗೊಂಡವರನ್ನು ಒಂದು ದಿನದ ಒಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಆದರೆ ನಿಖಿಲ್ ವಿಚಾರದಲ್ಲಿ ಹಾಗೆ ಆಗಲಿಲ್ಲ ಕೆಲವೊಂದು ಅಗತ್ಯ ತನಿಖೆಗಳು ನಡೆಯುತ್ತಿರಬಹುದು ಹಾಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲು ವಿಳಂಬವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ