ಚೆನ್ನೈ: ಇಂಡಿಯನ್-2 ಸಿನಿಮಾದ ವೇಳೆ ಸಂಭವಿಸಿದ ಕ್ರೇನ್ ದುರಂತದಲ್ಲಿ ಸಾವನ್ನಪ್ಪಿದ್ದ ಮೂರು ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ನೀಡುವುದಾಗಿ ನಟ ಕಮಲ್ ಹಾಸನ್ ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ಇಂಡಿಯನ್ -2 ಚಿತ್ರೀಕರಣದ ಸೆಟ್ ನಲ್ಲಿ ಏಕಾಏಕಿ ಕ್ರೇನ್ ಉರುಳಿ ಬಿದ್ದು ಸಿನಿಮಾದ ತಾಂತ್ರಿಕ ವರ್ಗದ ಶ್ರೀಕೃಷ್ಣ, ಮಧು ಹಾಗೂ ಚಂದ್ರನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದರು.
ಕೂಡಲೇ ಗಾಯಗೊಂಡವರನ್ನು ಕಿಲ್ಪಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ನೀಡುತ್ತಿದ್ದೇನೆ. ಆದರೆ ಇದು ಕಳೆದುಕೊಂಡ ಜೀವಕ್ಕೆ ನೀಡುತ್ತಿರುವ ಪರಿಹಾರವಲ್ಲ ಎಂದು ಹೇಳಿದರು.
ಸಿನಿಮಾರಂಗದಲ್ಲಿ ಜನರ ಸುರಕ್ಷತೆ ಈಗಲೂ ಪ್ರಶ್ನಾರ್ಹವಾಗಿಯೇ ಉಳಿದಂತಾಗಿದೆ. ಇಂದು ನಾನು ನನ್ನ ಗೆಳೆಯರು ಹಾಗೂ ಸಿನಿಮಾ ರಂಗದ ಹಿರಿಯರ ಜತೆ ಮಾತನಾಡಿದ್ದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ. ಹಲವು ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸಲಾಗುತ್ತಿದೆ. ಆದರೂ ನಮಗೆ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ಕೊಡಲಾಗಿಲ್ಲ ಎಂಬುದು ನಿಜಕ್ಕೂ ನಾಚಿಕೆಗೇಡಿನ ವಿಚಾರ ಎಂದು ಹೇಳಿದರು.
ಇವರು ಬಡತನದಿಂದ ಬಂದ ಜನರು. ಮೂರು ವರ್ಷದ ಹಿಂದೆ ನನಗೂ ಅಪಘಾತವಾಗಿತ್ತು. ಇಂತಹ ಪರಿಸ್ಥಿತಿ ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ ಎಂದರು.
ಇಂಡಿಯನ್ 2 ಸಿನಿಮಾದ ನಿರ್ದೇಶಕ ಶಂಕರ್, ಸಿನಿಮಾದ ಹೀರೋ ಕಮಲ್ ಹಾಸನ್ ಕಿಲ್ಪಾಕ್ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.