ನಾರ್ಥಂಪ್ಟನ್: ಇಂಗ್ಲೆಂಡ್ ನ ಕೌಂಟಿ ತಂಡಗಳ ವಿರುದ್ಧ ಆಡಿದ ಎರಡನೇ ಅಭ್ಯಾಸ ಟಿ20 ಪಂದ್ಯವನ್ನೂ ಗೆದ್ದುಕೊಂಡಿದೆ. ನಾರ್ಥಂಪ್ಟನ್ ಶೈರ್ ವಿರುದ್ಧ ಆಡಿದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಪಡೆ 10 ರನ್ ಅಂತರದ ಜಯ ಸಾಧಿಸಿದೆ.
ನಾರ್ಥಂಪ್ಟನ್ ನ ಕೌಂಟಿ ಗ್ರೌಂಡ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ ನಲ್ಲಿ ಎಂಟು ವಿಕೆಟ್ ಗೆ 149 ರನ್ ಗಳಿಸಿದರೆ, ನಾರ್ಥಂಪ್ಟನ್ ಶೈರ್ ತಂಡವು 139 ರನ್ ಆಲೌಟಾಯಿತು.
ಟಾಸ್ ಸೊತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ಬ್ಯಾಟಿಂಗ್ ಕುಸಿತ ಕಂಡಿತು. ಆರಂಭಿಕ ನಾಲ್ಕು ಬ್ಯಾಟರ್ ಗಳ ಪೈಕಿ ಎರಡಂಕಿ ಮೊತ್ತ ದಾಖಲಿಸಿದ್ದು ಇಶಾನ್ ಕಿಶನ್ ಒಬ್ಬರೆ. ಅದೂ 20 ಎಸೆತಗಳಲ್ಲಿ 16 ರನ್. ನಂತರ ನಾಯಕ ಕಾರ್ತಿಕ್ 34 ರನ್ ಮತ್ತು ವೆಂಕಟೇಶ್ ಅಯ್ಯರ್ 20 ರನ್ ಬಾರಿಸಿದರು. 72 ರನ್ ಗೆ ಐದು ವಿಕೆಟ್ ಕಳೆದುಕೊಂಡಿದ್ದ ವೇಳೆ ನೆರವಿಗೆ ಬಂದ ಹರ್ಷಲ್ ಪಟೇಲ್ 36 ಎಸೆತಗಳಲ್ಲಿ 54 ರನ್ ಚಚ್ಚಿದರು. ಹರ್ಷಲ್ ಇನ್ನಿಂಗ್ಸ್ ಮೂರು ಸಿಕ್ಸರ್ ಮತ್ತು ಐದು ಬೌಂಡರಿಗಳನ್ನು ಒಳಗೊಂಡಿತ್ತು.
ಇದನ್ನೂ ಓದಿ:ಮಿಸ್ ಇಂಡಿಯಾ ಕಿರೀಟ ಗೆದ್ದ ಉಡುಪಿಯ ಸಿನಿ ಶೆಟ್ಟಿ
ಗುರಿ ಬೆನ್ನತ್ತಿದ ನಾರ್ಥಂಪ್ಟನ್ ಶೈರ್ ತಂಡವೂ ಸತತ ವಿಕೆಟ್ ಕಳೆದುಕೊಂಡಿತು. ಸೈಫ್ ಜೈಬ್ 33 ರನ್ ಮತ್ತು ಎಮಿಲೋ ಗೇ 22 ರನ್ ಗಳಿಸಿದರು. ತಂಡ 19.3 ಓವರ್ ಗಳಲ್ಲಿ 139 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಅರ್ಶದೀಪ್ ಸಿಂಗ್, ಆವೇಶ್ ಖಾನ್, ಹರ್ಷಲ್ ಪಟೇಲ್, ಯುಜಿ ಚಾಹಲ್ ತಲಾ ಎರಡು ವಿಕೆಟ್ ಕಿತ್ತರೆ, ಪ್ರಸಿಧ್ ಕೃಷ್ಣ ಮತ್ತು ವೆಂಕಟೇಶ್ ಅಯ್ಯರ್ ತಲಾ ಒಂದು ವಿಕೆಟ್ ಪಡೆದರು.