ಮೆಲ್ಬರ್ನ್: ಭಾರತ ಮತ್ತು ಪಾಕಿಸ್ಥಾನ ಪಂದ್ಯವೆಂದರೆ ಸಹಜವಾಗಿಯೇ ರೋಮಾಂಚನವಿರುತ್ತದೆ. ಆದರೆ ಹಿಂದೆಂದೂ ಕಂಡಿರದ ರೋಮಾಂಚಕ ಘಟ್ಟ ತಲುಪಿದ್ದು ಐಸಿಸಿ ಟಿ20 ವಿಶ್ವಕಪ್ 2022ರ ಭಾರತ- ಪಾಕಿಸ್ಥಾನ ಪಂದ್ಯ . ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರದಿಂದ ಭಾರತ ತಂಡ ನಾಲ್ಕು ವಿಕೆಟ್ ಅಂತರದ ಜಯ ಸಾಧಿಸಿತು.
ಮೆಲ್ಬರ್ನ್ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನವು 20 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 159 ರನ್ ಗಳಿಸಿದರೆ, ಭಾರತ ತಂಡವು 6 ವಿಕೆಟ್ ಕಳೆದುಕೊಂಡು ಅಂತಿಮ ಎಸೆತದಲ್ಲಿ ಜಯ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನಕ್ಕೆ ಉತ್ತಮ ಆರಂಭವೇನು ಸಿಗಲಿಲ್ಲ. 15 ರನ್ ಆಗುವಷ್ಟರಲ್ಲಿ ನಾಯಕ ಬಾಬರ್ ಅಜಂ ಮತ್ತು ಕೀಪರ್ ರಿಜ್ವಾನ್ ಪೆವಿಲಿಯನ್ ಸೇರಿದ್ದರು. ನಂತರ ಜೊತೆಯಾದ ಮಸೂದ್ ಮತ್ತು ಇಫ್ತಿಕಾರ್ ಅಹಮದ್ 76 ರನ್ ಜೊತೆಯಾಟವಾಡಿದರು. ತಲಾ ಅರ್ಧಶತಕ ಸಿಡಿಸಿದ ಇಬ್ಬರು ಪಾಕ್ ತಂಡವನ್ನು ಆಧರಿಸಿದರು. ಕೊನೆಯಲ್ಲಿ ಶಹೀನ್ ಶಾ ಅಫ್ರಿದಿ 8 ಎಸೆತಗಳಲ್ಲಿ 16 ರನ್ ಗಳಿಸಿದರು.
ಭಾರತದ ಪರ ಅರ್ಶದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಮೂರು ವಿಕೆಟ್ ಕಿತ್ತರು. ಭುವನೇಶ್ವರ್ ಮತ್ತು ಶಮಿ ತಲಾ ಒಂದು ವಿಕೆಟ್ ಕಿತ್ತರು.
ಗುರಿ ಬೆನ್ನತ್ತಿದ ಭಾರತಕ್ಕೆ ಮತ್ತೆ ಪಾಕ್ ಬೌಲರ್ ಗಳು ಕಾಡಿದರು. ಪವರ್ ಪ್ಲೇ ಮುಗಿಯುವ ವೇಳೆ ಭಾರತದ ಪ್ರಮುಖ ನಾಲ್ಕು ಬ್ಯಾಟರ್ ಗಳು ಪೆವಿಲಿಯನ್ ಸೇರಿಯಾಗಿತ್ತು. ಆದರೆ ನಂತರ ಜೊತೆಯಾದ ವಿರಾಟ್ ಮತ್ತು ಹಾರ್ದಿಕ್ ಪಾಂಡ್ಯ ಶತಕದ ಜತೆಯಾಟವಾಡಿದರು. ಹಾರ್ದಿಕ್ 40 ರನ್ ಗಳಿಸಿದರೆ, ವಿರಾಟ್ ಅಜೇಯ 82 ರನ್ ಬಾರಿಸಿದರು.
ಕೊನೆಯ 8 ಎಸೆತದಲ್ಲಿ ಭಾರತ ತಂಡಕ್ಕೆ 28 ರನ್ ಅಗತ್ಯವಿತ್ತು. ಸತತ ಎರಡು ಸಿಕ್ಸರ್ ಬಾರಿಸಿದ ವಿರಾಟ್ ಚೇಸಿಂಗ್ ಗೆ ಅಡಿಯಿಟ್ಟರು. ಕೊನೆಯ ಓವರ್ ನಲ್ಲಿ ಪಾಂಡ್ಯ ಔಟಾದರೂ ವಿರಾಟ್ ಭಾರತಕ್ಕೆ ಆಸರೆಯಾಗಿ ನಿಂತರು.