Advertisement

“ಭಾರತ ವಿರುದ್ಧ ಗೆದ್ದರೆ ಜೀವಮಾನದ ಸಾಧನೆ’: ಸ್ಟೀವನ್‌  ಸ್ಮಿತ್‌

03:35 AM Feb 15, 2017 | Team Udayavani |

ಮುಂಬಯಿ: ತಂಡದ ಮುಂದಿನ ಅತ್ಯಂತ ಕಠಿನ ಸವಾಲನ್ನು ಮನಗಂಡಿರುವ ಆಸ್ಟ್ರೇಲಿಯದ ನಾಯಕ ಸ್ಟೀವನ್‌ ಸ್ಮಿತ್‌, ಭಾರತ ವಿರುದ್ಧ ಗೆದ್ದರೆ ಅದು ತನ್ನ ಹಾಗೂ ತಂಡದ ಪಾಲಿಗೆ ಜೀವಮಾನದ ಶ್ರೇಷ್ಠ ಸಾಧನೆಯಾಗಿ ದಾಖಲಾಗಲಿದೆ ಎಂದಿದ್ದಾರೆ. ಅವರು ಮಂಗಳವಾರ ಮುಂಬಯಿಯಲ್ಲಿ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತಿದ್ದರು.

Advertisement

“ಭಾರತದಲ್ಲಿ ಆಡುವುದು ಬಹು ದೊಡ್ಡ ಸವಾಲು. ಲೆಕ್ಕಾಚಾರವನ್ನೆಲ್ಲ ಮೀರಿ ನಿಂತು, ಸರಣಿ ಗೆದ್ದು ಅಸಾಮಾನ್ಯವಾದುದನ್ನು ಸಾಧಿಸಿದ್ದೇ ಆದರೆ ಮುಂದಿನ 10-20 ವರ್ಷಗಳ ಕಾಲ ಈ ವಿಜಯ ನಮ್ಮ ಪಾಲಿಗೆ ಶ್ರೇಷ್ಠ ನೆನಪಾಗಿ ಉಳಿಯಲಿದೆ. ಹೀಗಾಗಿ ಇಲ್ಲಿ ಆಡುವುದೊಂದು ಅದ್ಭುತ ಅವಕಾಶವೆಂದೇ ನಾವು ಭಾವಿಸಿದ್ದೇವೆ’ ಎಂದು ಸ್ಮಿತ್‌ ಹೇಳಿದರು.

ಆಸ್ಟ್ರೇಲಿಯ 2004-05ರ ಬಳಿಕ ಭಾರತದ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದಿಲ್ಲ. ಅಂದು ಆತಿಥೇಯರ ವಿರುದ್ಧ 2-1 ಅಂತರದ ಜಯ ಸಾಧಿಸಿತ್ತು. ಕೊನೆಯ ಸಲ, ಅಂದರೆ 2012-13ರಲ್ಲಿ ಬಂದಾಗ 4-0 ವೈಟ್‌ವಾಶ್‌ಗೆ ತುತ್ತಾಗಿತ್ತು.

ಅತ್ಯಂತ ಕಠಿನ ಸರಣಿ
“ಅನುಮಾನವೇ ಇಲ್ಲ. ಇದೊಂದು ಅತ್ಯಂತ ಕಠಿನ ಪ್ರವಾಸ. ಆದರೆ ಈ ಸವಾಲನ್ನು ಎದುರಿಸುವುದು ನಾಯಕನಾಗಿ ನನ್ನ ಪಾಲಿಗೊಂದು ರೋಮಾಂಚಕಾರಿ ಅನುಭವ. ಮುಂದಿನ 6 ವಾರಗಳಲ್ಲಿ ಏನು ಸಂಭವಿಸಲಿದೆ ಎಂಬುದನ್ನು ಕಾಣಲು ನಾವೆಲ್ಲ ಕುತೂಹಲಗೊಂಡಿದ್ದೇವೆ’ ಎಂದರು ಸ್ಮಿತ್‌.

ನಾಯಕ ಸ್ಟೀವನ್‌ ಸ್ಮಿತ್‌ ಪಾಲಿಗೆ ಭಾರತದ ವಾತಾ ವರಣ ಹೊಸತೇನಲ್ಲ. ಕಳೆದ ಕೆಲವು ವರ್ಷಗಳಿಂದ ಅವರು ಐಪಿಎಲ್‌ನಲ್ಲಿ ಆಡುತ್ತ ಬಂದಿದ್ದಾರೆ.  ರಾಜಸ್ಥಾನ್‌ ರಾಯಲ್ಸ್‌, ಆರ್‌ಸಿಬಿ, ಪುಣೆಯ 2 ತಂಡಗಳನ್ನು ಅವರು ಪ್ರತಿನಿಧಿಸಿದ್ದಾರೆ. ಹಾಗೆಯೇ ಕೋಚ್‌ ಡ್ಯಾರನ್‌ ಲೇಹ್ಮನ್‌ ಕೂಡ ಕೆಲವು ಐಪಿಎಲ್‌ ತಂಡಗಳಿಗೆ ತರಬೇತಿ ನೀಡಿದ ಅನುಭವವನ್ನೂ ಹೊಂದಿದ್ದಾರೆ.

Advertisement

ಆದರೆ ಭಾರತೀಯ ಉಪಖಂಡದ ಸ್ಪಿನ್‌ ಟ್ರ್ಯಾಕ್‌ಗಳಲ್ಲಿ ಆಡಲು ಸಾಧ್ಯವಿಲ್ಲ ಎಂಬುದು ಆಸ್ಟ್ರೇಲಿಯಕ್ಕೆ ತಗುಲಿರುವ ದೊಡ್ಡ ಕಂಟಕ. ಇದು ಸುಳ್ಳಲ್ಲ. ಕಳೆದ ವರ್ಷ ಶ್ರೀಲಂಕಾ ಪ್ರವಾಸಗೈದ ಕಾಂಗರೂ ಪಡೆ ಎಲ್ಲ 3 ಟೆಸ್ಟ್‌ಗಳಲ್ಲಿ ಸೋತು ತೀವ್ರ ಮುಖಭಂಗ ಅನುಭವಿಸಿತ್ತು. ಹೀಗಾಗಿ ಈ ಸಲ ಆಸೀಸ್‌ ತಂಡ ದುಬಾೖ ಟ್ರ್ಯಾಕ್‌ಗಳಲ್ಲಿ ಅಭ್ಯಾಸ ನಡೆಸಿಯೇ ಭಾರತಕ್ಕೆ ಬಂದಿದೆ. ಇದು ಎಷ್ಟರ ಮಟ್ಟಿಗೆ ಯಶಸ್ಸು ತಂದುಕೊಟ್ಟಿತು ಎಂಬುದು ಮುಂದಿನ ಸಂಗತಿ.

ಕೊಹ್ಲಿ ತಡೆಯಲು ಯೋಜನೆ
ಭಾರತದೆದುರಿನ ಸರಣಿಯ ವೇಳೆ ಆಸ್ಟ್ರೇಲಿಯಕ್ಕೆ ದೊಡ್ಡ ಸವಾಲಾಗಿ ಕಾಡುವುದು ಇಲ್ಲಿನ ಸ್ಪಿನ್‌ ಹಾಗೂ ಕ್ಯಾಪ್ಟನ್‌ ಕೊಹ್ಲಿ ಅವರ ಪ್ರಚಂಡ ಬ್ಯಾಟಿಂಗ್‌ ಫಾರ್ಮ್. ಒಂದು ವಾರದ ಹಿಂದಿನ ತನಕ ಕೊಹ್ಲಿಯನ್ನು ನಿಯಂತ್ರಿಸಲು ನಾವು ಯಾವುದೇ ಯೋಜನೆ ಹಾಕಿಕೊಂಡಿಲ್ಲ ಎಂದು ಆಸೀಸ್‌ ಹೇಳಿಕೊಂಡಿತ್ತು. ಈ ಕುರಿತು ಮಾತಾಡಿದ ಸ್ಮಿತ್‌, “ಕೊಹ್ಲಿ ವಿರುದ್ಧ ಗೇಮ್‌ಪ್ಲ್ರಾನ್‌ ಒಂದನ್ನು ರೂಪಿಸುತ್ತಿದ್ದೇವೆ, ಆದರೆ ಇದನ್ನಿಲ್ಲಿ ಹೇಳುವುದಿಲ್ಲ’ ಎಂದರು.

“ವಿರಾಟ್‌ ಕೊಹ್ಲಿ ವಿಶ್ವದರ್ಜೆಯ ಕ್ರಿಕೆಟಿಗ. ಅಮೋಘ ಬ್ಯಾಟಿಂಗ್‌ ನಡೆಸುತ್ತಿದ್ದಾರೆ. ಕಳೆದ 4 ಸರಣಿಗಳಲ್ಲಿ 4 ದ್ವಿಶತಕ ಬಾರಿಸಿದ್ದಾರೆ. ಕೊಹ್ಲಿ ಸೇರಿದಂತೆ ಟಾಪ್‌-6 ಆಟಗಾರರು ಭಾರತದ ಬಳಿ ಇದ್ದಾರೆ. ಇವರನ್ನು ನಿಯಂತ್ರಿಸುವ ವಿಶ್ವಾಸ ನಮ್ಮದು…’ ಎಂಬುದು ಕಾಂಗರೂ ಕಪ್ತಾನನ ಆಶಾವಾದ. ಬೌಲಿಂಗ್‌ನಲ್ಲಿ ಅಶ್ವಿ‌ನ್‌ ದೊಡ್ಡ ಸಾವಾಲಾಗುವುದರಲ್ಲಿ ಅನುಮಾನವೇ ಇಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಸ್ಮಿತ್‌, “ನಮ್ಮ ಎಲ್ಲ ಬ್ಯಾಟ್ಸ್‌ಮನ್‌ಗಳೂ ಅಶ್ವಿ‌ನ್‌ ವಿರುದ್ಧ ಸೂಕ್ತ ಯೋಜನೆಗಳನ್ನು ರೂಪಿಸಿದ್ದಾರೆ. ಇದು ಯಶಸ್ವಿಯಾಗಬೇಕು. ಅಶ್ವಿ‌ನ್‌ ವಿಶ್ವದರ್ಜೆಯ ಸ್ಪಿನ್ನರ್‌ ಆಗಿದ್ದು, ಮೊನ್ನೆಯಷ್ಟೇ 250 ವಿಕೆಟ್‌ ಪೂರ್ತಿಗೊಳಿಸಿ ದ್ದಾರೆ…’ ಎಂದರು.

ಭಾರತದಲ್ಲಿ ಸ್ಪಿನ್ನರ್‌ಗಳನ್ನು ಹೇಗೆ ನಿಭಾಯಿಸಬೇಕು ಎಂಬ ಪಾಠವನ್ನರಿಯಲು ತಮಿಳುನಾಡಿನ ಮಾಜಿ ಸ್ಪಿನ್ನರ್‌ ಎಸ್‌. ಶ್ರೀರಾಮ್‌ ಮತ್ತು ಇಂಗ್ಲೆಂಡಿನ ಮಾಂಟಿ ಪನೆಸರ್‌ ಅವರನ್ನು ಸಲಹೆಗಾರರನ್ನಾಗಿ ನೇಮಿಸಿದೆ.
“ಟೆಸ್ಟ್‌ ಪಂದ್ಯಕ್ಕೆ ದೀರ್ಘ‌ ಅವಧಿಯ ಯೋಜನೆ ರೂಪಿ ಸಬೇಕಾಗುತ್ತದೆ, ಮತ್ತು ಇದನ್ನು ಕಾಯ್ದುಕೊಂಡು ಹೋಗ ಬೇಕಾಗುತ್ತದೆ. ದುಬಾೖಯಲ್ಲಿ ನಮಗೆ ಉತ್ತಮ ಮಟ್ಟದ ಪಿಚ್‌ಗಳು ಲಭಿಸಿದವು. ಸಾಕಷ್ಟು ತಿರುವು ಹಾಗೂ ಬೌನ್ಸ್‌ ಕೂಡ ಇತ್ತು. ಇದರಿಂದ ನಮ್ಮವರಿಗೆ ಲಾಭವಾಗಲಿದೆ ಎಂಬ ನಂಬಿಕೆ ಇದೆ…’ ಎಂದರು.

ಕೆಣಕುವುದಾದರೆ ಕೆಣಕಲಿ! 
ಎದುರಾಳಿಗಳನ್ನು ಅಂಗಳದಲ್ಲೇ ಕೆಣಕಿಸುವುದು, ನಿಂದಿಸುವುದು, ನಾನಾ ರೀತಿಯ ಹುಚ್ಚಾಟಗಳ ಮೂಲಕ ಮಾನಸಿಕ ಯುದ್ದ ಸಾರುವುದು ಆಸ್ಟ್ರೇಲಿಯ ಕ್ರಿಕೆಟಿಗರ ಜಾಯಮಾನ. ಇಂಥ “ಸ್ಲೆಜಿಂಗ್‌ ಪಾಠ’ಗಳನ್ನು ಅವರಿಗೆ ಅಭ್ಯಾಸದ ವೇಳೆಯೇ ಹೇಳಿಕೊಡಲಾಗುತ್ತದೆ. ಚೆನ್ನಾಗಿ ಆಡುತ್ತಿರುವ ಎದುರಾಳಿ ಆಟಗಾರನ ಹಾದಿ ತಪ್ಪಿಸುವುದೇ ಇದರ ಉದ್ದೇಶ. ಎಷ್ಟು ವಿಕೋಪಕ್ಕೆ ಹೋಗಿದೆ ಎಂಬುದಕ್ಕೆ 2008ರ ಸರಣಿಯ “ಮಂಕೀಗೇಟ್‌’ ವಿದ್ಯಮಾನವೇ ಸಾಕ್ಷಿ!
2015ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ವೇಳೆಯೂ ಆಸೀಸ್‌ ಆಟಗಾರರು ತಮ್ಮ ಹುಟ್ಟುಗುಣವನ್ನು ಮರೆತಿರಲಿಲ್ಲ. ಇದರಿಂದ ಅನೇಕರಿಗೆ ದಂಡವನ್ನೂ ವಿಧಿಸಲಾಗಿತ್ತು. 

ಮುಂಬರುವ ಭಾರತ ಸರಣಿಯ ವೇಳೆಯೂ ಇಂಥ ಪ್ರಕರಣಗಳು ಪುನರಾವರ್ತಿಸುವ ಸೂಚನೆಯೊಂದು ಲಭಿಸಿದೆ. ಇದಕ್ಕೆ ಸ್ಟೀವನ್‌ ಸ್ಮಿತ್‌ ಆಡಿದ ಮಾತುಗಳೇ ಸಾಕ್ಷಿ. ಎದುರಾಳಿ ಆಟಗಾರರನ್ನು ನಮ್ಮವರು ಕೆರಳಿಸುವುದಾದರೆ ಕೆರಳಿಸಲಿ-ಇದು ಸ್ಮಿತ್‌ ಥಿಯರಿ!

“ನಮ್ಮೆಲ್ಲ ಆಟಗಾರರೂ ಸಹಜ ಆಟವನ್ನೇ ಆಡುತ್ತಾರೆ. ಅವರು ಮಾತಿನ ಮೂಲಕವೂ ಹೋರಾಟ ನಡೆಸಿ ಇದರಿಂದ ಲಾಭ ಪಡೆಯುತ್ತಾರಾದರೆ ಈ ನಿಟ್ಟಿನಲ್ಲೂ ಮುಂದುವರಿಯಲಿ…’ ಎಂದು ಸ್ಮಿತ್‌ ಹೇಳಿದ್ದಾರೆ. ಒಟ್ಟಾರೆ ಕ್ರಿಕೆಟ್‌ ಜತೆಗೆ ಮತ್ತೂಂದು “ಆಟ’ವನ್ನೂ ಆಸ್ವಾದಿಲು ನಾವೆಲ್ಲ ಸಿದ್ಧರಾಗಬೇಕಿದೆ!

Advertisement

Udayavani is now on Telegram. Click here to join our channel and stay updated with the latest news.

Next