ಮೌಂಟ್ ಮೌಂಗನುಯಿ: ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಶತಕ ಮತ್ತು ಬೌಲರ್ ಗಳ ಸಾಂಘಿಕ ಪ್ರದರ್ಶನದ ಸಹಾಯದಿಂದ ಭಾರತ ತಂಡವು ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಆರು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡವು 18.5 ಓವರ್ ಗಳಲ್ಲಿ 126 ರನ್ ಗೆ ಆಲೌಟಾಯಿತು. ಇದರೊಂದಿಗೆ ಹಾರ್ದಿಕ್ ಪಾಂಡ್ಯ ಬಳಗವು 65 ರನ್ ಗಳ ಅಂತರದ ಗೆಲುವು ಸಾಧಿಸಿತು.
ಆರಂಭಿಕನಾಗಿ ಕಣಕ್ಕಿಳಿದ ಪಂತ್ ನಿರಾಸೆ ಮೂಡಿಸಿದರು. (6 ರನ್) ಆದರೆ ಮತ್ತೊಬ್ಬ ಎಡಗೈ ಆಟಗಾರ ಇಶಾನ್ ಕಿಶನ್ 36 ರನ್ ಗಳಿಸಿದರು. ಅಯ್ಯರ್ ಕೂಡಾ ಕೇವಲ 13 ರನ್ ಮಾಡಿದರು. ಆದರೆ ಮತ್ತೊಂದೆಡೆ ಭರ್ಜರಿಯಾಗಿ ಬ್ಯಾಟ್ ಬೀಸಿದ ಅಜೇಯ ಶತಕ ಗಳಿಸಿದರು. ಕೇವಲ 51 ಎಸೆತ ಎದುರಿಸಿದ ಸೂರ್ಯ ಏಳು ಸಿಕ್ಸರ್ ನೆರವಿನಿಂದ ಅಜೇಯ 111 ರನ್ ಗಳಿಸಿದರು. ಇದು ಅವರ ಎರಡನೇ ಟಿ20 ಶತಕವಾಗಿದೆ. ಈ ಮೊದಲು ಇಂಗ್ಲೆಂಡ್ ವಿರುದ್ಧ 117 ರನ್ ಗಳಿಸಿದ್ದರು.
ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಅನುಭವಿ ಬೌಲರ್ ಟಿಮ್ ಸೌಥಿ ಹ್ಯಾಟ್ರಿಕ್ ಪಡೆದು ಮಿಂಚಿದರು. ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆದರು. ಇದು ಅವರ ಎರಡನೇ ಟಿ20 ಹ್ಯಾಟ್ರಿಕ್. ಈ ಸಾಧನೆ ಮಾಡಿದ ಮತ್ತೊಬ್ಬ ಆಟಗಾರ ಎಂದರೆ ಲಸಿತ್ ಮಾಲಿಂಗ ಮಾತ್ರ.
ಗುರಿ ಬೆನ್ನತ್ತಿದ ಕಿವೀಸ್ ಮೊದಲ ಓವರ್ ನಲ್ಲೇ ಫಿನ್ ಅಲೆನ್ ರೂಪದಲ್ಲಿ ವಿಕೆಟ್ ಕಳೆದುಕೊಂಡಿತು. ನಾಯಕ ಕೇನ್ ವಿಲಿಯಮ್ಸನ್ 61 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾರಿಂದಲೂ ಬೆಂಬಲ ಸಿಗಲಿಲ್ಲ. ಭಾರತದ ಪರ ದೀಪಕ್ ಹೂಡಾ ನಾಲ್ಕು ವಿಕೆಟ್, ಸಿರಾಜ್ ಮತ್ತು ಚಾಹಲ್ ತಲಾ ಎರಡು ವಿಕೆಟ್ ಕಿತ್ತರು.
ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಭಾರತವು 1-0 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಅಂತಿಮ ಪಂದ್ಯವು ಮಂಗಳವಾರ ನೇಪಿಯರ್ ನಲ್ಲಿ ನಡೆಯಲಿದೆ.