Advertisement

ಸತತ 10ನೇ ಬಾರಿ ಭಾರತಕ್ಕೆ ಪ್ರಶಸ್ತಿ

11:46 AM Nov 27, 2017 | |

ಗೋರ್ಗಾನ್‌(ಇರಾನ್‌): ನಾಯಕ ಅಜಯ್‌ ಠಾಕೂರ್‌ ಅಮೋಘ ರೈಡಿಂಗ್‌ ಹಾಗೂ ಸಂಘಟನಾತ್ಮಕ ಹೋರಾಟದ ಫ‌ಲವಾಗಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕ್‌ ತಂಡವನ್ನು ಫೈನಲ್‌ನಲ್ಲಿ 36-22ರಿಂದ ಮಣಿಸಿ ಏಷ್ಯನ್‌ ಕಬಡ್ಡಿ ಪ್ರಶಸ್ತಿ ಗೆದ್ದಿದೆ. 

Advertisement

ಭಾರತ ಪುರುಷರ ತಂಡ ಸತತ 10ನೇ ಬಾರಿಗೆ ಈ ಟ್ರೋಫಿ ಗೆಲ್ಲುತ್ತಿರುವುದು ವಿಶೇಷವಾಗಿದೆ. ಇದೇ ಕೂಟದ ಮಹಿಳಾ ವಿಭಾಗದ ಫೈನಲ್‌ನಲ್ಲಿ ಭಾರತ ಮಹಿಳಾ ತಂಡ 42-20 ಅಂಗಳ ಅಂತರದಿಂದ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿ ಸತತ 5ನೇ ಸಲ ಚಾಂಪಿಯನ್‌ ಆಗಿದೆ.

ಆರಂಭದಲ್ಲಿಯೇ ಚುರುಕಿನ ಆಟ: ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ ಪಂದ್ಯದಲ್ಲಿ ಭಾರತ ಪಾಕ್‌ ತಂಡವನ್ನು ಸುಲಭವಾಗಿ ಮಣಿಸಿತು. ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪಾಕಿಸ್ತಾನ ಬಲಿಷ್ಠ ಭಾರತಕ್ಕೆ ಸ್ಪರ್ಧೆ ನೀಡುವಲ್ಲಿ ಎಡವಿತು. ಯಾವುದೇ ಹಂತದಲ್ಲಿಯೂ ಭಾರತೀಯರು ಪಾಕ್‌ಗೆ ಮೇಲುಗೈ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ. ಮೊದಲ ಅವಧಿಯಲ್ಲಿ ಪಾಕ್‌ ತಂಡವನ್ನು ಎರಡು ಬಾರಿ ಆಲೌಟ್‌ ಮಾಡಿದ ಶ್ರೇಯಸ್ಸು ಭಾರತಕ್ಕೆ ಸೇರುತ್ತದೆ.

ಪಂದ್ಯದ ಆರಂಭದಲ್ಲಿಯೇ ಭಾರತ ಭರ್ಜರಿ ದಾಳಿ ಆರಂಭಿಸಿತು. ತಾರಾ ರೈಡರ್‌ಗಳಾದ ಪ್ರದೀಪ್‌ ನರ್ವಾಲ್‌ ಮತ್ತು ಅಜಯ್‌ ಠಾಕೂರ್‌ ನಿರಂತರವಾಗಿ ರೈಡಿಂಗ್‌ ಅಂಕ ತರತೊಡಗಿದರು. ಹೀಗಾಗಿ ಅಂಕಗಳಿಕೆಯಲ್ಲಿ ಭಾರತ ಮೇಲುಗೈ ಸಾಧಿಸತೊಡಗಿತು. ಇದರಿಂದಾಗಿ ಮೊದಲ ಅವಧಿ ಅಂತ್ಯಕ್ಕೂ ಮುನ್ನ ಪಾಕ್‌ ಎರಡು ಬಾರಿ ಆಲೌಟ್‌ ಆಯಿತು. ಹೀಗಾಗಿ ಅಂತಿಮವಾಗಿ ಭಾರತ ಮೊದಲ ಅವಧಿಯಲ್ಲಿಯೇ 25-10 ರಿಂದ ಮುನ್ನಡೆ ಪಡೆಯಿತು. ಈ ಹಂತದಲ್ಲಿಯೇ ಭಾರತ ಚಾಂಪಿಯನ್‌ ಆಗುವ ಭರವಸೆ ಮೂಡಿಸಿತು.

2ನೇ ಅವಧಿಯಲ್ಲಿ ಪಾಕ್‌ ತಕ್ಕಮಟ್ಟಿನ ಪ್ರತಿರೋಧ: ಮೊದಲ ಅವಧಿಯಲ್ಲಿ ಹೀನಾಯ ಪ್ರದರ್ಶನ ನೀಡಿದ ಪಾಕ್‌ 2ನೇ ಅವಧಿಯಲ್ಲಿ ತಕ್ಕ ಮಟ್ಟಿಗೆ ಪ್ರತಿರೋಧ ನೀಡುವಲ್ಲಿ ಯಶಸ್ವಿಯಾಯಿತು. ಆದರೆ ಭಾರತ ಅಂಕಗಳಿಕೆಯ ವೇಗದಲ್ಲಿ ಕುಗ್ಗಿದರೂ ಪಂದ್ಯದ ಮೇಲಿನ ಹಿಡಿತವನ್ನು ಬಿಡಲಿಲ್ಲ. ತಂಡ ಒಂದು ಬಾರಿಯೂ ಆಲೌಟ್‌ ಆಗದಂತೆ ನೋಡಿಕೊಂಡಿತು. ಈ ಹಂತದಲ್ಲಿ ಭಾರತ 11 ಅಂಕ ಪಡೆದರೆ, ಪಾಕಿಸ್ತಾನ 12 ಅಂಕವನ್ನು ಪಡೆಯಿತು. ಅಂತಿಮವಾಗಿ ಭಾರತ 36-22 ರಿಂದ ಜಯ ಸಾಧಿಸಿತು. ಪಾಕಿಸ್ತಾನ ಕೂಡ ಬಲಿಷ್ಠ ತಂಡವಾಗಿರುವುದರಿಂದ ತೀವ್ರ ಸ್ಪರ್ಧೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಪ್ರೊ ಕಬಡ್ಡಿಯಲ್ಲಿ ವಿವಿಧ ತಂತ್ರಗಾರಿಕೆ ಕಲಿತಿರುವ ಭಾರತೀಯರು ಯಾವುದೇ ಅನಾಹುತಕ್ಕೆ ಅವಕಾಶ ನೀಡಲಿಲ್ಲ.

Advertisement

ಸತತ 5ನೇ ಸಲ ಪ್ರಶಸ್ತಿ ಗೆದ್ದ ಭಾರತ ಮಹಿಳಾ ತಂಡ
ಮಹಿಳಾ ತಂಡ ಫೈನಲ್‌ ಪಂದ್ಯದಲ್ಲಿ 42-20 ರಿಂದ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿ ಚಾಂಪಿಯನ್‌ಶಿಪ್‌ ಪ್ರಶಸ್ತಿ
ಪಡೆದಿದೆ. ಪಂದ್ಯದ ಆರಂಭದಲ್ಲಿಯೇ ಚುರುಕಿನ ಪ್ರದರ್ಶನ ಆರಂಭಿಸಿದ ಭಾರತ ಮೊದಲ ಅವಧಿಯ ಅಂತ್ಯದಲ್ಲಿ 19-12
ರಿಂದ ಮುನ್ನಡೆ ಪಡೆಯಿತು. ನಂತರದ ಹಂತದಲ್ಲಿಯೂ ಭಾರತ ತನ್ನ ಅಂಕದ ಬೇಟೆಯನ್ನು ಮುಂದುವರಿಸಿತ್ತು. ಇದರಿಂದಾಗಿ ಭಾರತಕ್ಕೆ ಸವಾಲು ನೀಡುವಲ್ಲಿ ದಕ್ಷಿಣ ಕೊರಿಯಾ ಎಡುವಿತು. ಅಂತಿಮವಾಗಿ ಭಾರತ ಚಾಂಪಿಯನ್‌ ಆಗುವಲ್ಲಿ ಯಶಸ್ವಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next