Advertisement

ಕಾಂಗರೂ ನಾಡಿನಲ್ಲಿ ಟೀಮ್‌ ಇಂಡಿಯಾ ಕಮಾಲ್‌

12:30 AM Jan 08, 2019 | Team Udayavani |

ಸಿಡ್ನಿ: ಭಾರತೀಯ ಕ್ರಿಕೆಟಿಗರ 71 ವರ್ಷಗಳ ಕಾಯುವಿಕೆಗೆ ಸೋಮವಾರ ಸಿಡ್ನಿ ಅಂಗಳದಲ್ಲಿ ತೆರೆ ಬಿದ್ದಿದೆ. ಆಸ್ಟ್ರೇಲಿಯ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್‌ ಸರಣಿ ಗೆಲ್ಲುವ ಮೂಲಕ ಭಾರತೀಯ ಕ್ರಿಕೆಟ್‌ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾಗಿದೆ.

Advertisement

4 ಪಂದ್ಯಗಳ ಸರಣಿಯನ್ನು ಅಡಿಲೇಡ್‌ ಗೆಲುವಿನೊಂದಿಗೆ ಆರಂಭಿಸಿದ ಕೊಹ್ಲಿ ಪಡೆ, ಅಂತಿಮವಾಗಿ ಇದನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿತು. ಬೇಸರವೆಂದರೆ, ಈ ಅಂತರ 3-1ಕ್ಕೆ ಏರದಿದ್ದುದು. ಸಿಡ್ನಿ ಟೆಸ್ಟ್‌ ಪಂದ್ಯದ ಅಂತಿಮ ದಿನದಾಟ ಸಂಪೂರ್ಣವಾಗಿ ಮಳೆಗೆ ತುತ್ತಾದುದರಿಂದ ಭಾರತದ ಸಂಭಾವ್ಯ ಜಯವೊಂದು ತಪ್ಪಿತು. ಹೀಗಾಗಿ ಫಾಲೋಆನ್‌ಗೆ ತುತ್ತಾಗಿದ್ದ ಆಸ್ಟ್ರೇಲಿಯ ಅಷ್ಟರ ಮಟ್ಟಿಗೆ ಸಮಾಧಾನಪಟ್ಟಿತು.

ಮೊದಲ ದಿನದಿಂದಲೇ ಹಿಡಿತ
ಮೆಲ್ಬರ್ನ್ನಲ್ಲಿ ನಡೆದ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯವನ್ನು ಗೆದ್ದಾಗಲೇ ಭಾರತ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಟೀಮ್‌ ಇಂಡಿಯಾ ಪಾಲಿಗೆ ಸಿಡ್ನಿ ಟೆಸ್ಟ್‌ ಡ್ರಾಗೊಂಡರೂ ಸಾಕಿತ್ತು. ಆದರೆ ಆಸ್ಟ್ರೇಲಿಯದ ಸ್ಥಿತಿ ಭಿನ್ನವಾಗಿತ್ತು. ಮರ್ಯಾದೆ ಉಳಿಸಿಕೊಳ್ಳಬೇಕಾದರೆ ಸಿಡ್ನಿಯಲ್ಲಿ ಪೇನ್‌ ಪಡೆ ಗೆಲ್ಲಲೇಬೇಕಿತ್ತು. ಆದರೆ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕ್ಷಣದಿಂದಲೇ ಭಾರತ ಈ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತ ಹೋಯಿತು. ಆತಿಥೇಯರಿಗೆ ಫಾಲೋಆನ್‌ ಹೇರುವಷ್ಟರ ಮಟ್ಟಿಗೆ ಪಾರಮ್ಯ ಸಾಧಿಸಿತು. ಕೊನೆಯಲ್ಲಿ ವರುಣನ ಹಸ್ತಕ್ಷೇಪದಿಂದ ಕೊಹ್ಲಿ ಬಳಗದ 3ನೇ ಗೆಲುವು ಕೈಜಾರಿತು.

ಫಾಲೋಆನ್‌ ಬಳಿಕ ಕನಿಷ್ಠ ಒಂದು ದಿನದ ಆಟ ಲಭಿಸಿದರೂ ಭಾರತ ಸಿಡ್ನಿಯಲ್ಲೂ ಗೆಲುವಿನ ಬಾವುಟ ಹಾರಿಸುತ್ತಿತ್ತು. ಈ ವಿಷಯದಲ್ಲಿ ಮಾತ್ರ ಭಾರತಕ್ಕೆ ಅದೃಷ್ಟ ಕೈಕೊಟ್ಟಿತು. 2-1 ಅಂತರದ ಗೆಲುವಿಗೆ ತೃಪ್ತಿಪಡಬೇಕಾಯಿತು.

ಇನ್ನು 7 ತಿಂಗಳು ವಿರಾಮ
3 ಶತಕಗಳ ಸಹಿತ 521 ರನ್‌ ಪೇರಿಸಿದ ಚೇತೇಶ್ವರ್‌ ಪೂಜಾರ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪಂದ್ಯಶ್ರೇಷ್ಠ ಗೌರವ ಕೂಡ ಪೂಜಾರ ಅವರಿಗೆ ಒಲಿಯಿತು. 21 ವಿಕೆಟ್‌ ಕಿತ್ತ ಜಸ್‌ಪ್ರೀತ್‌ ಬುಮ್ರಾ ಟೀಮ್‌ ಇಂಡಿಯಾದ ಬಳಿಂಗ್‌ ಹೀರೋ ಎನಿಸಿಕೊಂಡರು. ಪೃಥ್ವಿ ಶಾ ಮೊದಲೇ ಗಾಯಾಳಾಗಿ ಬೇರ್ಪಟ್ಟದ್ದು, ಕೆ.ಎಲ್‌. ರಾಹುಲ್‌-ಮುರಳಿ ವಿಜಯ್‌ ಜೋಡಿಯ ಆರಂಭಿಕ ವೈಫ‌ಲ್ಯದ ಹೊರತಾಗಿಯೂ ಭಾರತ ಕಾಂಗರೂ ನಾಡಿನಲ್ಲಿ ಅಭೂತಪೂರ್ವ ಪರಾಕ್ರಮ ಮೆರೆಯಿತು. ಸರಣಿ ನಡುವೆ ಕರೆ ಪಡೆದ ಮಾಯಾಂಕ್‌ ಅಗರ್ವಾಲ್‌ ಅವರ ಯಶಸ್ವೀ ಪದಾರ್ಪಣೆ ತಂಡಕ್ಕೆ ಹೊಸ ಚೈತನ್ಯ ತುಂಬಿತು. ಭಾರತಕ್ಕಿನ್ನು 7 ತಿಂಗಳ ಕಾಲ ಟೆಸ್ಟ್‌ ವಿರಾಮ.

Advertisement

ಕೊಹ್ಲಿ ಕ್ಯಾಪ್ಟನ್ಸಿ ಯಶಸ್ಸು
ಸ್ವಾತಂತ್ರ್ಯ ಪೂರ್ವದಲ್ಲೇ, 1947-48ರಲ್ಲಿ ಮೊದಲ ಬಾರಿಗೆ ಭಾರತ ತಂಡ ಲಾಲಾ ಅಮರನಾಥ್‌ ಸಾರಥ್ಯದಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿತ್ತು. ಅಂದಿನ ತಂಡ ಕ್ರಿಕೆಟ್‌ ಲೆಜೆಂಡ್‌ ಡಾನ್‌ ಬ್ರಾಡ್‌ಮನ್‌ ನೇತೃತ್ವದ ಆಸ್ಟ್ರೇಲಿಯವನ್ನು ಎದುರಿಸಿತ್ತು. ಪರಿಣಾಮ 4-0 ಸೋಲು.

ಬಳಿಕ ಚಂದು ಬೋರ್ಡೆ, ಬಿಷನ್‌ ಸಿಂಗ್‌ ಬೇಡಿ, ಸುನೀಲ್‌ ಗಾವಸ್ಕರ್‌, ಕಪಿಲ್‌ದೇವ್‌, ಮೊಹಮ್ಮದ್‌ ಅಜರುದ್ದೀನ್‌, ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ಮಹೇಂದ್ರ ಸಿಂಗ್‌ ಧೋನಿ ಅವರ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯದಲ್ಲಿ ಸರಣಿ ಆಡಿತಾದರೂ ಯಾರಿಂದಲೂ ಗೆಲುವಿನ ಇತಿಹಾಸ ನಿರ್ಮಿಸಲಾಗಲಿಲ್ಲ. ಇದನ್ನು ವಿರಾಟ್‌ ಕೊಹ್ಲಿ ಪಡೆ ಸಾಧಿಸಿದೆ.

1971ರಲ್ಲಿ ಅಜಿತ್‌ ವಾಡೇಕರ್‌ ನಾಯಕತ್ವದ ಭಾರತ ತಂಡ ವೆಸ್ಟ್‌ ಇಂಡೀಸ್‌ ಹಾಗೂ ಇಂಗ್ಲೆಂಡ್‌ನ‌ಲ್ಲಿ ಸರಣಿ ಗೆದ್ದದ್ದು, ಕಪಿಲ್‌ದೇವ್‌ ಮತ್ತು ರಾಹುಲ್‌ ದ್ರಾವಿಡ್‌ ಪಡೆ 1986 ಹಾಗೂ 2007ರಲ್ಲಿ ಇಂಗ್ಲೆಂಡ್‌ ನೆಲದಲ್ಲಿ ಸರಣಿ ವಶಪಡಿಸಿಕೊಂಡದ್ದೆಲ್ಲ ಭಾರತೀಯ ಟೆಸ್ಟ್‌ ಚರಿತ್ರೆಯ ಮೈಲುಗಲ್ಲುಗಳಾಗಿ ದಾಖಲಾಗಿವೆ. ಈಗ ಆಸ್ಟ್ರೇಲಿಯದಲ್ಲಿ ಜಯಭೇರಿ ಮೊಳಗಿದೆ. ಭಾರತದ ಕ್ರಿಕೆಟ್‌ ಹೊಸ ಎತ್ತರಕ್ಕೆ ಏರಿದೆ.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌: 7 ವಿಕೆಟಿಗೆ ಡಿಕ್ಲೇರ್‌ 622
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌        300
ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್‌
ಉಸ್ಮಾನ್‌ ಖ್ವಾಜಾ    ಔಟಾಗದೆ    4
ಮಾರ್ಕಸ್‌ ಹ್ಯಾರಿಸ್‌    ಔಟಾಗದೆ    2
ಇತರ        0
ಒಟ್ಟು  (ವಿಕೆಟ್‌ ನಷ್ಟವಿಲ್ಲದೆ)        6
ಬೌಲಿಂಗ್‌:
ಮೊಹಮ್ಮದ್‌ ಶಮಿ        2-1-4-0
ಜಸ್‌ಪ್ರೀತ್‌ ಬುಮ್ರಾ        2-1-2-0
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಚೇತೇಶ್ವರ್‌ ಪೂಜಾರ

ಆಸ್ಟ್ರೇಲಿಯದಲ್ಲಿ ಭಾರತ
ವರ್ಷ    ಫ‌ಲಿತಾಂಶ (ಪಂದ್ಯ)

1947-48    4-0 ಸೋಲು (5)
1967-68    4-0 ಸೋಲು (4)
1977-78    3-2 ಸೋಲು (5)
1980-81    1-1 ಡ್ರಾ (3)
1985-86    0-0 ಡ್ರಾ (3)
1991-92    4-0 ಸೋಲು (5)
1999-00    3-0 ಸೋಲು (3)
2003-04    1-1 ಡ್ರಾ (4)
2007-08    2-1 ಸೋಲು (4)
2011-12    4-0 ಸೋಲು (4)
2014-15    2-0 ಸೋಲು (4)
2018-19    2-1 ಜಯ (4)

ಏಶ್ಯದ ಹೊರಗೆ ಭಾರತದ ಸರಣಿ ಜಯಭೇರಿ
ಎದುರಾಳಿ    ಅಂತರ    ವರ್ಷ
ನ್ಯೂಜಿಲ್ಯಾಂಡ್‌    3-1    1967-68
ಇಂಗ್ಲೆಂಡ್‌    1-0    1971
ಇಂಗ್ಲೆಂಡ್‌    2-0    1986
ಇಂಗ್ಲೆಂಡ್‌    1-0    2007
ನ್ಯೂಜಿಲ್ಯಾಂಡ್‌    1-0    2008-09
ಆಸ್ಟ್ರೇಲಿಯ    2-1    2018-19

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಭಾರತ ಆಸ್ಟ್ರೇಲಿಯದಲ್ಲಿ ಮೊದಲ ಬಾರಿಗೆ ಟೆಸ್ಟ್‌ ಸರಣಿ ಜಯಿಸಿತು. ಈ ಮೂಲಕ ಆಸ್ಟ್ರೇಲಿಯ ನೆಲದಲ್ಲಿ ಸರಣಿ ಗೆದ್ದ ಏಶ್ಯದ ಮೊದಲ ತಂಡವೆಂಬ ಹಿರಿಮೆಗೂ ಪಾತ್ರವಾಯಿತು.
* ಭಾರತ 8 ರಾಷ್ಟ್ರಗಳಲ್ಲಿ ಟೆಸ್ಟ್‌ ಸರಣಿ ಜಯಿಸಿದ ವಿಶ್ವದ 4 ತಂಡಗಳಲ್ಲಿ ಒಂದೆನಿಸಿತು. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ 9 ರಾಷ್ಟ್ರಗಳ ವಿರುದ್ಧ ವಿದೇಶಗಳಲ್ಲಿ ಸರಣಿ ಗೆದ್ದದ್ದು ದಾಖಲೆ. ಭಾರತ ಈವರೆಗೆ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆದ್ದಿಲ್ಲ. ಹಾಗೆಯೇ ಇಂಗ್ಲೆಂಡ್‌ ತಂಡ ಜಿಂಬಾಬ್ವೆಯಲ್ಲಿ ಈ ಸಾಧನೆ ಮಾಡಿಲ್ಲ.
* ವಿರಾಟ್‌ ಕೊಹ್ಲಿ ಸಾರಥ್ಯದಲ್ಲಿ ಭಾರತ ವಿದೇಶಗಳಲ್ಲಿ 4ನೇ ಟೆಸ್ಟ್‌ ಸರಣಿ ಗೆದ್ದಿತು. ಇದಕ್ಕೂ ಮುನ್ನ ಶ್ರೀಲಂಕಾದಲ್ಲಿ 2-1 (2015), 3-0 (2017) ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ 2-0 (2016) ಅಂತರದಿಂದ ಸರಣಿ ಜಯಿಸಿತ್ತು.
* ಆಸ್ಟ್ರೇಲಿಯ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದ 5ನೇ ತಂಡವಾಗಿ ಭಾರತ ಮೂಡಿಬಂತು. ಇಂಗ್ಲೆಂಡ್‌ 13 ಸಲ, ವೆಸ್ಟ್‌ ಇಂಡೀಸ್‌ 4 ಸಲ, ದಕ್ಷಿಣ ಆಫ್ರಿಕಾ 3 ಸಲ ಹಾಗೂ ನ್ಯೂಜಿಲ್ಯಾಂಡ್‌ ಒಮ್ಮೆ ಸರಣಿ ಜಯಿಸಿವೆ.
* ಚೇತೇಶ್ವರ್‌ ಪೂಜಾರ ಮೊದಲ ಬಾರಿಗೆ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅವರಿಗೆ ಪಂದ್ಯಶ್ರೇಷ್ಠ ಒಲಿಯುತ್ತಿರುವುದು ಇದು 6ನೇ ಸಲ.
* ಆಸ್ಟ್ರೇಲಿಯಕ್ಕೆ ಈ ಸರಣಿಯಲ್ಲಿ ಒಂದೂ ಶತಕ ದಾಖಲಿಸಲು ಸಾಧ್ಯವಾಗಲಿಲ್ಲ. ಸಿಡ್ನಿಯಲ್ಲಿ ಮಾರ್ಕಸ್‌ ಹ್ಯಾರಿಸ್‌ ಹೊಡೆದ 79 ರನ್ನೇ ಈ ಸರಣಿಯಲ್ಲಿ ದಾಖಲಾದ ಆಸ್ಟ್ರೇಲಿಯದ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ.
* ಆಸ್ಟ್ರೇಲಿಯ 4 ಹಾಗೂ ಇದಕ್ಕಿಂತ ಹೆಚ್ಚಿನ ಪಂದ್ಯಗಳ ಸರಣಿಗಳಲ್ಲಿ ಶತಕ ದಾಖಲಿಸದ 4ನೇ ಸಂದರ್ಭ ಇದಾಗಿದೆ.
* ಆಸ್ಟ್ರೇಲಿಯದ ಕ್ರಿಕೆಟಿಗನಿಂದ “3 ಪ್ಲಸ್‌’ ಪಂದ್ಯಗಳ ಸರಣಿಯಲ್ಲಿ 2ನೇ ಕನಿಷ್ಠ ವೈಯಕ್ತಿಕ ಮೊತ್ತ ದಾಖಲಾಯಿತು (ಹ್ಯಾರಿಸ್‌ ಅವರ 79 ರನ್‌). 1888ರ ಇಂಗ್ಲೆಂಡ್‌ ಎದುರಿನ 3 ಪಂದ್ಯಗಳ ಸರಣಿಯಲ್ಲಿ 32 ರನ್‌ ಹೊಡೆದದ್ದು ಕನಿಷ್ಠ ಮೊತ್ತವಾಗಿದೆ.
* 4 ಪ್ಲಸ್‌ ಪಂದ್ಯಗಳ ಸರಣಿಯಲ್ಲಿ 3ನೇ ಕನಿಷ್ಠ ವೈಯಕ್ತಿಕ ಮೊತ್ತ ದಾಖಲಾಯಿತು. ಇಂಗ್ಲೆಂಡ್‌ ಎದುರಿನ 1958ರ ಸರಣಿಯಲ್ಲಿ ನ್ಯೂಜಿಲ್ಯಾಂಡ್‌ ಕ್ರಿಕೆಟಿಗ 66 ರನ್‌ ಹೊಡೆದದ್ದು ದಾಖಲೆ. ಇಂಗ್ಲೆಂಡ್‌ ವಿರುದ್ಧದ 1954ರ ಸರಣಿಯಲ್ಲಿ ಪಾಕಿಸ್ಥಾನ ಆಟಗಾರನಿಂದ ದಾಖಲಾದ 69 ರನ್ನಿಗೆ 2ನೇ ಸ್ಥಾನ.
* ಭಾರತ ಎದುರಾಳಿಗೆ ಶತಕ ನಿರಾಕರಿಸಿದ 2ನೇ ಸರಣಿ ಇದಾಗಿದೆ. ಇದಕ್ಕೂ ಮುನ್ನ 2015ರಲ್ಲಿ ದಕ್ಷಿಣ ಆಫ್ರಿಕಕ್ಕೂ ಭಾರತದೆದುರು ಶತಕ ಸಾಧ್ಯವಾಗಿರಲಿಲ್ಲ. ಈ ಎರಡೂ ಸಂದರ್ಭಗಳಲ್ಲಿ ವಿರಾಟ್‌ ಕೊಹ್ಲಿ ಅವರೇ ಭಾರತದ ನಾಯಕರಾಗಿದ್ದರು.
* ಈ ಸರಣಿಯಲ್ಲಿ ಭಾರತದ ಅಷ್ಟೂ ವಿಕೆಟ್‌ಗಳನ್ನು ಕಮಿನ್ಸ್‌, ಸ್ಟಾರ್ಕ್‌, ಹ್ಯಾಝಲ್‌ವುಡ್‌ ಮತ್ತು ಲಿಯೋನ್‌ ಸೇರಿ ಉರುಳಿಸಿದರು. ಇದು 4 ಪ್ಲಸ್‌ ಪಂದ್ಯಗಳ ಸರಣಿಯಲ್ಲಿ ಎದುರಾಳಿಯ ಎಲ್ಲ ವಿಕೆಟ್‌ಗಳನ್ನು ಕೇವಲ 4 ಬೌಲರ್‌ಗಳು ಸೇರಿಕೊಂಡು ಕೆಡವಿದ 3ನೇ ನಿದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next