Advertisement

ಒಲಿಯಿತು ಅಡಿಲೇಡ್‌

04:02 AM Jan 16, 2019 | |

ಅಡಿಲೇಡ್‌: ನಾಯಕ ವಿರಾಟ್‌ ಕೊಹ್ಲಿ ಅವರ 39ನೇ ಶತಕ ವೈಭವ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ “ಫಿನಿಶಿಂಗ್‌ ಪರಾಕ್ರಮ’ದಿಂದಾಗಿ ಭಾರತ ಅಡಿಲೇಡ್‌ ಅಖಾಡದಲ್ಲಿ ಮೇಲುಗೈ ಸಾಧಿಸಿದೆ. ಭಾರೀ ಸವಾಲಿನ ದ್ವಿತೀಯ ಏಕದಿನ ಪಂದ್ಯವನ್ನು 6 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದು ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

Advertisement

ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶಾನ್‌ ಮಾರ್ಷ್‌ ಅವರ ಸೆಂಚುರಿ ಸಾಹಸದಿಂದ 9 ವಿಕೆಟಿಗೆ 298 ರನ್‌ ಪೇರಿಸಿದರೆ, ಭಾರತ 49.2 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 299 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಶುಕ್ರವಾರದ ಮೆಲ್ಬರ್ನ್ ಮೇಲಾಟದಲ್ಲಿ ಸರಣಿ ಇತ್ಯರ್ಥವಾಗಲಿದೆ.

ಆಪತ್ಭಾಂಧವ ಕೊಹ್ಲಿ
ರೋಹಿತ್‌ ಶರ್ಮ-ಶಿಖರ್‌ ಧವನ್‌ ಅವರ ಭರವಸೆಯ ಆರಂಭದ ಬಳಿಕ ಕ್ರೀಸ್‌ ಆಕ್ರಮಿಸಿಕೊಂಡ ವಿರಾಟ್‌ ಕೊಹ್ಲಿ, ತಂಡದ ಪಾಲಿಗೆ ಆಪತಾತ್ಭಾಂಧವರಾದರು. ಅಡಿ ಲೇಡ್‌ನ‌ಲ್ಲಿ ಸತತ 2ನೇ ಶತಕ ಸಂಭ್ರಮ ಆಚರಿಸಿದರು. ಆಸೀಸ್‌ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ “ಚೇಸಿಂಗ್‌ ಕಿಂಗ್‌’ ಕೊಹ್ಲಿ 112 ಎಸೆತಗಳಿಂದ 104 ರನ್‌ ಬಾರಿಸಿದರು. ಸಿಡಿಸಿದ್ದು 5 ಬೌಂಡರಿ ಹಾಗೂ 2 ಸಿಕ್ಸರ್‌. 

44ನೇ ಓವರಿನಲ್ಲಿ, ಸ್ಕೋರ್‌ 242ಕ್ಕೆ ಏರಿದಾಗ ಕೊಹ್ಲಿ ವಿಕೆಟ್‌ ಬಿತ್ತು. ಆಗ ಸಣ್ಣದೊಂದು ಆತಂಕ ಎದುರಾದದ್ದು ಸುಳ್ಳಲ್ಲ. ಸಾಕಷ್ಟು ವಿಕೆಟ್‌ ಕೈಲಿತ್ತಾದರೂ ಧೋನಿ ಮತ್ತೂಂದು “ಸ್ಲೋ ಬ್ಯಾಟಿಂಗ್‌’ ಮೂಲಕ ಪರದಾಡುತ್ತಿದ್ದರು. ಆದರೆ ಬೆಹ್ರಾನ್ಡಾಫ್  ಪಾಲಾದ ಅಂತಿಮ ಓವರಿನ ಮೊದಲ ಎಸೆತದಲ್ಲಿ ಸಿಕ್ಸರ್‌ ಸಿಡಿಸುವ ಮೂಲಕ ಹೀರೋ ಆಗಿ ಮೂಡಿಬಂದರು. ಅಲ್ಲಿಗೆ ಅವರ ಅಪರೂಪದ ಅರ್ಧ ಶತಕ ಪೂರ್ತಿಗೊಂಡಿತು; ಮೊತ್ತವೂ ಸಮನಾಯಿತು. ಕೊನೆಯ ಓವರ್‌ನಲ್ಲಿ ಭಾರತದ ಜಯಕ್ಕೆ 7 ರನ್‌ ಅಗತ್ಯವಿತ್ತು.


ಧೋನಿ ಗಳಿಕೆ 54 ಎಸೆತಗಳಿಂದ 55 ರನ್‌. ಇದರಲ್ಲಿ 2 ಸಿಕ್ಸರ್‌ ಸೇರಿತ್ತು. ದಿನೇಶ್‌ ಕಾರ್ತಿಕ್‌ ಬಿರುಸಿನ ಆಟವಾಡಿ ಅಜೇಯ 25 ರನ್‌ ಹೊಡೆದರು (14 ಎಸೆತ, 2 ಬೌಂಡರಿ). ಇವರಿಬ್ಬರ ಜತೆಯಾಟದಿಂದ ಭಾರತ ದಡ ಸೇರಿತು. 
ಸಿಡ್ನಿ ಶತಕವೀರ ರೋಹಿತ್‌ ಇಲ್ಲಿ 52 ಎಸೆತಗಳಿಂದ 43 ರನ್‌ ಬಾರಿಸಿದರು (2 ಬೌಂಡರಿ, 2 ಸಿಕ್ಸರ್‌). ಶಿಖರ್‌ ಧವನ್‌ ಗಳಿಕೆ 28 ಎಸೆತಗಳಿಂದ 32 ರನ್‌. ಮೊದಲ ವಿಕೆಟಿಗೆ 7.4 ಓವರ್‌ಗಳಿಂದ 47 ರನ್‌ ಬಂತು. ರಾಯುಡು 24 ರನ್‌ ಹೊಡೆದರು (36 ಎಸೆತ, 2 ಬೌಂಡರಿ).

ಮಾರ್ಷ್‌ “ಶಾನ್‌’ದಾರ್‌ ಶತಕ


ಭುವನೇಶ್ವರ್‌- ಶಮಿ ಜೋಡಿಯ ಆರಂಭಿಕ ಸ್ಪೆಲ್‌ ಹೆಚ್ಚು ಪರಿಣಾಮಕಾರಿಯಾಗಿತ್ತು. ನಾಯಕ ಆರನ್‌ ಫಿಂಚ್‌ ವೈಫ‌ಲ್ಯ ಇಲ್ಲಿಯೂ ಮುಂದುವರಿಯಿತು. 6ನೇ ಓವರಿನ ಕೊನೆಯ ಎಸೆತದಲ್ಲಿ ಫಿಂಚ್‌ ಆರೇ ರನ್ನಿಗೆ ವಾಪಸಾದರು. ಅಲೆಕ್ಸ್‌ ಕ್ಯಾರಿ 27 ಎಸೆತಗಳಿಂದ 18 ರನ್‌ ಮಾಡಿ ಶಮಿಗೆ ವಿಕೆಟ್‌ ಒಪ್ಪಿಸಿದರು. ಹೀಗೆ 26 ರನ್ನಿಗೆ 2 ವಿಕೆಟ್‌ ಬಿತ್ತು.
ಈ ಹಂತದಲ್ಲಿ ಜತೆಗೂಡಿದ ಖ್ವಾಜಾ-ಮಾರ್ಷ್‌ 3ನೇ ವಿಕೆಟಿಗೆ 56 ರನ್‌ ಪೇರಿಸಿ ತಂಡವನ್ನು ಆಧರಿಸಿದರು. ಜಡೇಜ ಎಸೆದ ಅಮೋಘ “ಡೈರೆಕ್ಟ್ ತ್ರೋ’ ಒಂದಕ್ಕೆ ಖ್ವಾಜಾ ವಿಕೆಟ್‌ ಉರುಳಿತು. ಮುಂದಿನದು ಶಾನ್‌ ಮಾರ್ಷ್‌ ಅವರ ಶಾನ್‌ದಾರ್‌ ಬ್ಯಾಟಿಂಗ್‌ ಪ್ರದರ್ಶನ. ಟೆಸ್ಟ್‌ ಸರಣಿಯಲ್ಲಿ ವೈಫ‌ಲ್ಯ ಅನುಭವಿಸಿದ್ದ ಮಾರ್ಷ್‌, ಮತ್ತೂಂದು ರಂಜನೀಯ ಬ್ಯಾಟಿಂಗ್‌ ಪ್ರದರ್ಶಿಸಿ 7ನೇ ಏಕದಿನ ಶತಕದೊಂದಿಗೆ ಸಂಭ್ರಮಿಸಿದರು. 26 ರನ್ನಿಗೆ 2 ವಿಕೆಟ್‌ ಬಿದ್ದಾಗ ಕ್ರೀಸಿಗೆ ಬಂದ ಮಾರ್ಷ್‌, ಸ್ಕೋರ್‌ 283ಕ್ಕೆ ಏರುವ ತನಕ ಬ್ಯಾಟಿಂಗ್‌ ವಿಸ್ತರಿಸಿದರು. ಸಿಡಿಸಿದ್ದು 131 ರನ್‌. 123 ಎಸೆತಗಳ ಈ ಸೊಗಸಾದ ಆಟದಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್‌ ಒಳಗೊಂಡಿತ್ತು. 

Advertisement

ಈ ನಡುವೆ ಹ್ಯಾಂಡ್ಸ್‌ಕಾಂಬ್‌ (20) ಮತ್ತು ಸ್ಟೋಯಿನಿಸ್‌ (29) ವಿಕೆಟ್‌ ಉರುಳಿತು. ಆದರೆ ಮಾರ್ಷ್‌ ಮಾತ್ರ ಬಂಡೆಯಂತೆ ನಿಂತರು. ಮ್ಯಾಕ್ಸ್‌ವೆಲ್‌ ಅವರಿಂದ ಉತ್ತಮ ಬೆಂಬಲ ಲಭಿಸಿತು. 6ನೇ ವಿಕೆಟಿಗೆ 65 ಎಸೆತಗಳಿಂದ 94 ರನ್‌ ಹರಿದು ಬಂತು. ಮ್ಯಾಕ್ಸ್‌ವೆಲ್‌ 37 ಎಸೆತಗಳಿಂದ 48 ರನ್‌ ಬಾರಿಸಿದರು (5 ಬೌಂಡರಿ, 1 ಸಿಕ್ಸರ್‌). ಆಸೀಸ್‌ ರನ್‌ ಗತಿ ಏರುವಲ್ಲಿ ಈ ಜೋಡಿಯ ಪಾತ್ರ ಮಹತ್ವದ್ದೆನಿಸಿತು. ಭುವನೇಶ್ವರ್‌ 4, ಶಮಿ 3 ವಿಕೆಟ್‌ ಹಾರಿಸಿದರೆ, ಮೊದಲ ಪಂದ್ಯವಾಡಿದ ಸಿರಾಜ್‌ “ದುಬಾರಿ ಬೌಲರ್‌’ ದಾಖಲೆ ಬರೆದರು. ಕುಲದೀಪ್‌ ಕೂಡ ಯಶಸ್ಸು ಕಾಣಲಿಲ್ಲ.

ಅಡಿಲೇಡ್‌ ಪಂದ್ಯದ ಸಾಮ್ಯತೆ
ಹೆಚ್ಚು-ಕಡಿಮೆ ಇದು ಮೊದಲ ಪಂದ್ಯದ ಪುನರಾವರ್ತನೆಯಂತಿತ್ತು. ಆಸ್ಟ್ರೇಲಿಯ ಮತ್ತೆ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿತು, ಆರಂಭಿಕ ಕುಸಿತಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಶಾನ್‌ ಮಾರ್ಷ್‌ ಆಧರಿಸಿ ನಿಂತರು. ಭಾರತ ಅಂತಿಮ 10 ಓವರ್‌ಗಳಲ್ಲಿ 90 ಚಿಲ್ಲರೆ ರನ್‌ ಬಿಟ್ಟುಕೊಟ್ಟಿತು, ಆಸೀಸ್‌ ಮತ್ತೆ ಮುನ್ನೂರರ ಗಡಿ ಸಮೀಪಿಸಿತು. ಬದಲಾದುದೆಂದರೆ ಅಂತಿಮ ಫ‌ಲಿತಾಂಶ. ಇದು ಭಾರತದ ಪರವಾಗಿ ಬಂತು. ಸಿಡ್ನಿಯಲ್ಲಿ ರೋಹಿತ್‌ ಶರ್ಮ ಸಿಡಿದರೆ, ಅಡಿಲೇಡ್‌ನ‌ಲ್ಲಿ ವಿರಾಟ್‌ ಕೊಹ್ಲಿ ಅಬ್ಬರಿಸಿದರು. ಇದಕ್ಕಿಂತ ಮಿಗಿಲಾದ ಸ್ವಾರಸ್ಯವೆಂದರೆ, ಆರನ್‌ ಫಿಂಚ್‌ ಮತ್ತೆ ಆರೇ ರನ್‌ ಮಾಡಿ ಪುನಃ ಭುವನೇಶ್ವರ್‌ಗೆ ಬೌಲ್ಡ್‌ ಆದದ್ದು!

ಎಕ್ಸ್‌ಟ್ರಾ ಇನ್ನಿಂಗ್ಸ್‌
* ವಿರಾಟ್‌ ಕೊಹ್ಲಿ ಏಕದಿನದಲ್ಲಿ 39ನೇ ಶತಕ ಬಾರಿಸಿದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 64ನೇ ಶತಕ. ಈ ಸಾಧನೆಯಲ್ಲಿ ಸಂಗಕ್ಕರ ಅವರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರಿದರು. ತೆಂಡುಲ್ಕರ್‌ (100), ಪಾಂಟಿಂಗ್‌ (71) ಮೊದಲೆರಡು ಸ್ಥಾನದಲ್ಲಿದ್ದಾರೆ.
* ಕೊಹ್ಲಿ ಕೇವಲ 360 ಪಂದ್ಯಗಳಲ್ಲಿ 64 ಶತಕ ಹೊಡೆದರು. ತೆಂಡುಲ್ಕರ್‌ 100 ಶತಕಕ್ಕೆ 664 ಪಂದ್ಯ, ಪಾಂಟಿಂಗ್‌ 71 ಶತಕಕ್ಕೆ 560 ಪಂದ್ಯವಾಡಿದ್ದರು.
*ಕೊಹ್ಲಿ ಚೇಸಿಂಗ್‌ ವೇಳೆ ಬಾರಿಸಿದ ಶತಕಗಳ ದಾಖಲೆಯನ್ನು 24ಕ್ಕೆ ವಿಸ್ತರಿಸಿದರು. ತೆಂಡುಲ್ಕರ್‌ (17), ಗೇಲ್‌ ಮತ್ತು ದಿಲ್ಶನ್‌ (11) ಅನಂತರದ ಸ್ಥಾನದಲ್ಲಿದ್ದಾರೆ.
*ಕೊಹ್ಲಿ ಅಡಿಲೇಡ್‌ ಏಕದಿನ ಪಂದ್ಯಗಳಲ್ಲಿ ಸತತ 2 ಶತಕ ಹೊಡೆದರು. ಕಳೆದ ಸರಣಿಯ ವೇಳೆ 107 ರನ್‌ ಬಾರಿಸಿದ್ದರು.
*ಕೊಹ್ಲಿ ಆಸ್ಟ್ರೇಲಿಯದಲ್ಲಿ ಆಡಲಾದ ಏಕದಿನ ಪಂದ್ಯಗಳಲ್ಲಿ ಸರ್ವಾಧಿಕ 5 ಶತಕ ಬಾರಿಸಿದ 3ನೇ ವಿದೇಶಿ ಆಟಗಾರ. ಉಳಿದಿಬ್ಬರೆಂದರೆ ಕುಮಾರ ಸಂಗಕ್ಕರ ಮತ್ತು ರೋಹಿತ್‌ ಶರ್ಮ.
* ಭಾರತ ಅಡಿಲೇಡ್‌ನ‌ಲ್ಲಿ 2ನೇ ಅತ್ಯಧಿಕ ಮೊತ್ತವನ್ನು ಚೇಸಿಂಗ್‌ ನಡೆಸಿದ ಪ್ರವಾಸಿ ತಂಡವೆನಿಸಿತು. 1999ರಲ್ಲಿ ಇಂಗ್ಲೆಂಡ್‌ ತಂಡ ಶ್ರೀಲಂಕಾ ವಿರುದ್ಧ 303 ರನ್‌ ಬೆನ್ನಟ್ಟಿ ಗೆದ್ದದ್ದು ದಾಖಲೆ.
* ಅಡಿಲೇಡ್‌ನ‌ಲ್ಲಿ ಆಸ್ಟ್ರೇಲಿಯ ವಿರುದ್ಧ ಅತ್ಯಧಿಕ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ ದಾಖಲೆ ಭಾರತದ್ದಾಯಿತು. 2012ರಲ್ಲಿ ಶ್ರೀಲಂಕಾ 271 ರನ್‌ ಚೇಸ್‌ ಮಾಡಿದ ದಾಖಲೆ ಪತನಗೊಂಡಿತು.
* ಮೊಹಮ್ಮದ್‌ ಸಿರಾಜ್‌ ಪದಾರ್ಪಣ ಏಕದಿನ ಪಂದ್ಯದಲ್ಲೇ ಅತ್ಯಧಿಕ ರನ್‌ ನೀಡಿದ ಭಾರತದ 2ನೇ ಬೌಲರ್‌ ಎನಿಸಿದರು (10 ಓವರ್‌, 76 ರನ್‌). 1975ರ ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ ಕರ್ಸನ್‌ ಘಾವ್ರಿ 83 ರನ್‌ ನೀಡಿದ್ದು ಭಾರತದ “ದಾಖಲೆ’. ಆದರೆ ಅದು 11 ಓವರ್‌ಗಳ ಸ್ಪೆಲ್‌ ಆಗಿತ್ತು.
* ಸಿರಾಜ್‌ ಮೊದಲ ಪಂದ್ಯದಲ್ಲೇ ದುಬಾರಿ ಇಕಾನಮಿ ರೇಟ್‌ ದಾಖಲಿಸಿದ ಭಾರತದ ಬೌಲರ್‌ ಎನಿಸಿದರು (7.60). ಮೇಲಿನ ಪಂದ್ಯದಲ್ಲಿ ಘಾವ್ರಿ 7.54 ಇಕಾನಮಿ ರೇಟ್‌ ದಾಖಲಿಸಿದ್ದರು.
*ಶಿಖರ್‌ ಧವನ್‌-ರೋಹಿತ್‌ ಶರ್ಮ ಆರಂಭಿಕ ವಿಕೆಟಿಗೆ 4 ಸಾವಿರ ರನ್‌ ಒಟ್ಟುಗೂಡಿಸಿದ ವಿಶ್ವದ 4ನೇ, ಭಾರತದ 2ನೇ ಜೋಡಿ ಎನಿಸಿತು (4,040 ರನ್‌). ಸೌರವ್‌ ಗಂಗೂಲಿ-ಸಚಿನ್‌ ತೆಂಡುಲ್ಕರ್‌ 6,609 ರನ್‌ ಪೇರಿಸಿದ್ದು ದಾಖಲೆ. ಉಳಿದಂತೆ ಆ್ಯಡಂ ಗಿಲ್‌ಕ್ರಿಸ್ಟ್‌-ಮ್ಯಾಥ್ಯೂ ಹೇಡನ್‌ 5,372 ರನ್‌; ಗಾರ್ಡನ್‌ ಗ್ರೀನಿಜ್‌-ಡೆಸ್ಮಂಡ್‌ ಹೇನ್ಸ್‌ 5,150 ರನ್‌ ಪೇರಿಸಿದ್ದಾರೆ. ಹಾಶಿಮ್‌ ಆಮ್ಲ-ಕ್ವಿಂಟನ್‌ ಡಿ ಕಾಕ್‌ 4 ಸಾವಿರ ರನ್‌ ಗಡಿಯಲ್ಲಿದ್ದಾರೆ (3,919 ರನ್‌).

Advertisement

Udayavani is now on Telegram. Click here to join our channel and stay updated with the latest news.

Next