Advertisement

ಟಿ20 ಸರಣಿ : ತಮ್ಮದೇ ನೆಲದಲ್ಲಿ ಮತ್ತೆ ಮುಗ್ಗರಿಸಿದ ಲಂಕಾ ಸಿಂಹಗಳು : ಭಾರತಕ್ಕೆ 38 ರನ್‌ ಜಯ

11:53 PM Jul 25, 2021 | Team Udayavani |

ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸುಲಭ ಜಯ ಸಾಧಿಸಿದೆ. ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಆತಿಥೇಯರು ಮುಗ್ಗರಿಸಿದರೆ, ಭಾರತೀಯರು ಈ ಎರಡರಲ್ಲೂ ಯಶಸ್ವಿಯಾದರು.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, 20 ಓವರ್‌ಗಳಲ್ಲಿ 5 ವಿಕೆಟಿಗೆ 164 ರನ್‌ ಪೇರಿಸಿತು. ಇದನ್ನು ಬೆನ್ನತ್ತಿದ ಲಂಕನ್ನರು 18.3 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟಾದರು. ಅಲ್ಲಿಗೆ ಭಾರತ 38 ರನ್‌ಗಳಿಂದ ಜಯಿಸಿತು. ಲಂಕಾ ಪರ ಚರಿಥ ಅಸಲಂಕ 44 ರನ್‌ ಬಾರಿಸಿ ಹೋರಾಡಿದರು. ಆದರೆ ಉಳಿದ ಆಟಗಾರರು ನೆರವಿಗೆ ಬರಲಿಲ್ಲ. ಭಾರತದ ಪರ ವೇಗಿ ಭುವನೇಶ್ವರ್‌ ಕುಮಾರ್‌ ಅಮೋಘ ದಾಳಿ ಸಂಘಟಿಸಿ, 22 ರನ್‌ ನೀಡಿ 4 ವಿಕೆಟ್‌ ಪಡೆದರು.

ಸೂರ್ಯಕುಮಾರ್‌ ಉತ್ತಮ ಬ್ಯಾಟಿಂಗ್‌: ಸೂರ್ಯಕುಮಾರ್‌ ಭಾರತ ಸರದಿಯ ಏಕೈಕ ಅರ್ಧಶತಕ ಹೊಡೆದರೆ, ಧವನ್‌ 46 ರನ್‌ ಕೊಡುಗೆ ಸಲ್ಲಿಸಿದರು. ಪೃಥ್ವಿ ಶಾ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿ “ಗೋಲ್ಡನ್‌ ಡಕ್‌’ ಅವಮಾನಕ್ಕೆ ಸಿಲುಕಿದರು. ಮುಂದೆ ಶಿಖರ್‌ ಧವನ್‌-ಸಂಜು ಸ್ಯಾಮ್ಸನ್‌ ಯಾವುದೇ ಒತ್ತಡಕ್ಕೊಳಗಾಗಲಿಲ್ಲ. ಇದರಲ್ಲಿ ಸ್ಯಾಮ್ಸನ್‌ ಪಾಲು 27 ರನ್‌.

ಇದನ್ನೂ ಓದಿ :ಟೋಕಿಯೊ ಒಲಿಂಪಿಕ್ಸ್‌ : ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಶುಭಾರಂಭ

ಧವನ್‌-ಸೂರ್ಯಕುಮಾರ್‌ ಯಾದವ್‌ ಸೇರಿಕೊಂಡು 3ನೇ ವಿಕೆಟಿಗೆ ಮತ್ತೂಂದು ಉತ್ತಮ ಜತೆಯಾಟ ನಡೆಸಿದರು. 48 ಎಸೆತಗಳಿಂದ 62 ರನ್‌ ಒಟ್ಟುಗೂಡಿತು. ಒಂದೆಡೆ ನಿಂತು ಇನಿಂಗ್ಸ್‌ ಬೆಳೆಸುತ್ತಿದ್ದ ಧವನ್‌, ಅರ್ಧಶತಕದ ನಿರೀಕ್ಷೆಯಲ್ಲಿದ್ದರು. ಆದರೆ ಕೇವಲ 4 ರನ್ನಿನಿಂದ ಈ ಅವಕಾಶ ತಪ್ಪಿಸಿಕೊಂಡರು (36 ಎಸೆತ, 4 ಬೌಂಡರಿ, 1 ಸಿಕ್ಸರ್‌).

Advertisement

ಆಕರ್ಷಕ ಆಟವಾಡಿದ ಸೂರ್ಯಕುಮಾರ್‌ ಯಾದವ್‌ ಭರ್ತಿ 50 ರನ್‌ ಬಾರಿಸಿದರು (34 ಎಸೆತ, 5 ಬೌಂಡರಿ, 2 ಸಿಕ್ಸರ್‌). ಡೆತ್‌ ಓವರ್‌ ಆರಂಭವಾದೊಡನೆಯೇ ಇವರ ವಿಕೆಟ್‌ ಬಿತ್ತು. ಇಶಾನ್‌ ಕಿಶನ್‌ 14 ಎಸೆತಗಳಲ್ಲಿ 20 ರನ್‌ ಮಾಡಿ ಅಜೇಯರಾಗಿ ಉಳಿದರು. ಕೊನೆಯ 5 ಓವರ್‌ಗಳಲ್ಲಿ 43 ರನ್‌ ಬಂತು.

ಸಂಕ್ಷಿಪ್ತ ಸ್ಕೋರ್‌: ಭಾರತ 20 ಓವರ್‌, 164/5 (ಸೂರ್ಯಕುಮಾರ್‌ 50, ಶಿಖರ್‌ ಧವನ್‌ 46, ದುಷ್ಮಂಥ ಚಮೀರ 24ಕ್ಕೆ 2). ಶ್ರೀಲಂಕಾ 18.3 ಓವರ್‌, 126 (ಚರಿಥ ಅಸಲಂಕ 44, ಭುವನೇಶ್ವರ್‌ 22/4, ದೀಪಕ್‌ ಚಹರ್‌ 24/2).

Advertisement

Udayavani is now on Telegram. Click here to join our channel and stay updated with the latest news.

Next