ಇನ್ನು ಒಂದೂ ಒಲಿಂಪಿಕ್ಸ್ ಪದಕ ಗೆಲ್ಲದ, ಒಂದೂ ವಿಶ್ವಕಪ್ ಗೆಲ್ಲದ ಭಾರತ ಮಹಿಳಾ ಹಾಕಿ ತಂಡದವರು ಇದೀಗ ಪುರುಷರಂತೆ ನಾವೂ ಗೆದ್ದೇ ಗೆಲ್ಲುತ್ತೇವೆ ನೋಡ್ತಾ ಇರಿ ಅನ್ನುವ ಸೂಚನೆ ನೀಡುತ್ತಿದ್ದಾರೆ. ಇತ್ತೀಚೆಗೆ ನಡೆದ ಏಷ್ಯಾ ಕಪ್ ಮಹಿಳಾ ಹಾಕಿ ಟೂರ್ನಿಯಲ್ಲಿ ಭಾರತ ತಂಡ ತೋರಿದ ಪ್ರದರ್ಶನ ಸಾಮಾನ್ಯದ್ದಲ್ಲ. ಉತ್ತಮ ಕೋಚ್, ಕಠಿಣ ತರಬೇತಿ, ಅಗತ್ಯ ಸೌಲಭ್ಯ…ಇವುಗಳು ಸಿಕ್ಕರೆ ಒಲಿಂಪಿಕ್ಸ್, ವಿಶ್ವಕಪ್ ಕೈಗೆಟುಕದ ಪ್ರಶಸ್ತಿಯಲ್ಲ ಎಂಬುದನ್ನು ತಂಡ ಸಾಬೀತು ಮಾಡಿತು.
ರಾಣಿ ರಾಂಪಾಲ್ ನೇತೃತ್ವದ ಭಾರತ ತಂಡದಲ್ಲಿ ಯುವ ಆಟಗಾರ್ತಿಯರದ್ದೇ ಪಾರುಪತ್ಯ. ಇದುವೇ ತಂಡದ ಶಕ್ತಿಯೂ ಹೌದು. ಕಳೆದ ವರ್ಷ ರಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಸ್ಥಾನ ಪಡೆದಿದ್ದು, ಮೂರು ದಶಕಗಳ ನಂತರ ಅನ್ನುವುದೇ ವಿಶೇಷ. ಒಂದು ಕಾಲದಲ್ಲಿ ಏನೂ ಇಲ್ಲದ ತಂಡ ಒಲಿಂಪಿಕ್ಸ್ ಹಂತಕ್ಕೆ ಹೋಗಿದ್ದೇ ದೊಡ್ಡ ವಿಷಯವಾಗಿತ್ತು. ಕೂಟದಲ್ಲಿ ಭಾರತ ಯಶಸ್ವಿ ಪ್ರದರ್ಶನ ನೀಡಲಿಲ್ಲ. ಆದರೆ ಕೆಲವು ಯುವ ಆಟಗಾರ್ತಿಯರು ಗಮನಾರ್ಹ ಪ್ರದರ್ಶನ ನೀಡಿದ್ದರು. ಈ ಮೂಲಕ ಭವಿಷ್ಯದಲ್ಲಿ ಭಾರತ ಕಠಿಣ ಎದುರಾಳಿ ಅನ್ನುವುದನ್ನು ಸಾರಿತ್ತು.
ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತ ನೀಡಿರುವ ಪ್ರದರ್ಶನವನ್ನು ಕೇವಲವಾಗಿ ನೋಡಲಾಗದು. ಆಡಿರುವ ಆರಕ್ಕೆ ಆರೂ ಪಂದ್ಯದಲ್ಲಿ ಗೆದ್ದು ಚಾಂಪಿಯನ್‌ಶಿಪ್ ಪಡೆದಿದೆ. ಈ ಮೂಲಕ ಕೂಟದಲ್ಲಿ ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದೆ. ರಾಣಿ ರಾಂಪಾಲ್, ನವನೀತ್ ಕೌರ್, ದೀಪ್ ಗ್ರಾಸ್ ಏಕ್ಕಾ, ನವಜೋತ್ ಕೌರ್, ಗುರ್ತಿತ್ ಕೌರ್, ಸೋನಿಕಾ, ನೇಹಾ ಗೋಯಲ್…ಇವರ ಅದ್ಭುತ ಪ್ರದರ್ಶನವೇ ಭಾರತಕ್ಕೆ 2ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್‌ಪಟ್ಟ ತಂದುಕೊಟ್ಟಿದೆ. ಈ ಕೂಟದಲ್ಲಿ ಸಿಂಗಾಪುರ, ಚೀನಾ, ಮಲೇಷ್ಯಾ, ಕಜಕೀಸ್ತಾನ, ಜಪಾನ್ ತಂಡಗಳನ್ನು ಬಗ್ಗು ಬಡಿದಿದೆ. ಅದರಲ್ಲಿಯೂ ಫೈನಲ್‌ನಲ್ಲಿ 2009ರಲ್ಲಿ ತನ್ನನ್ನು ಸೋಲಿಸಿದ್ದ ಚೀನಾ ತಂಡದ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡಿದೆ. ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಆಟ ಎರಡರಲ್ಲಿಯೂ ಈಗ ಭಾರತೀಯ ಹಾಕಿ ತಂಡದ ವನಿತೆಯರು ಎತ್ತಿದ ಕೈ. ಸಮಯ ಸಂದರ್ಭಕ್ಕೆ ಅನುಸಾರವಾಗಿ ಹೇಗೆ ಬೇಕೋ ಹಾಗೆ ಆಡುವ ಸಾಮರ್ಥ್ಯವನ್ನು ಭಾರತೀಯರು ರೂಢಿಸಿಕೊಂಡಿದ್ದಾರೆ.
7ನೇ ಬಾರಿಗೆ ವಿಶ್ವಕಪ್‌ಗೆ ಲಗ್ಗೆ: ಇಲ್ಲಿಯವರೆಗೆ ಭಾರತ 6 ವಿಶ್ವಕಪ್‌ನಲ್ಲಿ ಆಡಿದ ಇತಿಹಾಸವನ್ನು ಹೊಂದಿದೆ. ಅದರಲ್ಲಿ 1974ರಲ್ಲಿ 4ನೇ ಸ್ಥಾನ ಪಡೆದಿದ್ದೇ ಈವರೆಗಿನ ಶ್ರೇಷ್ಠ ಪ್ರದರ್ಶನವಾಗಿದೆ. ಉಳಿದಂತೆ ಎಲ್ಲಾ ವಿಶ್ವಕಪ್‌ನಲ್ಲಿಯೂ ಕಳಪೆ ಪ್ರದರ್ಶನ ನೀಡಿದೆ. ಇದೀಗ ಏಷ್ಯಾಕಪ್ ಗೆಲ್ಲುವ ಮೂಲಕ 7ನೇ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. 2018ರಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಭಾರತವೂ ಪ್ರಬಲ ಎದುರಾಳಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಏಷ್ಯಾ ಕಪ್‌ನಲ್ಲಿ ನಡೆದು ಬಂದ ಹಾದಿಯನ್ನು ಗಮನಿಸಿದರೆ ಇಂತಹ ಸೂಳಿವು ಸಿಗುತ್ತದೆ.
ಶ್ರೇಯಾಂಕದಲ್ಲಿ ಏರಿಕೆ: ಭಾರತದ ಶ್ರೇಷ್ಠ ಪ್ರದರ್ಶನದ ಫಲವಾಗಿ ಅದರ ಶ್ರೇಯಾಂಕದಲ್ಲಿಯೂ ಏರಿಕೆಯಾಗಿದೆ. ಈ ಹಿಂದೆ ವಿಶ್ವ ನಂ.12ರಲ್ಲಿದ್ದ ಭಾರತ ಇದೀಗ ವಿಶ್ವ ನಂ.10ಕ್ಕೇರಿದೆ. ಇದು ಭಾರತೀಯ ತಂಡ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅನ್ನುವುದನ್ನು ತಿಳಿಸುತ್ತಿದೆ. ಮುಂದಿನ ಕೂಟಗಳಲ್ಲಿ ಏಷ್ಯಾಕಪ್‌ನಲ್ಲಿ ನೀಡಿದ ಪ್ರದರ್ಶನವನ್ನೇ ಮುಂದುವರಿಸಿದರೆ ಅಗ್ರ ಸ್ಥಾನಕ್ಕೆ ಲಗ್ಗೆ ಹಾಕುವ ಬಗ್ಗೆ ಯಾವುದೇ ಅನುಮಾನ ಬೇಡ.
ಮೊದಲ ಯತ್ನದಲ್ಲಿ ಕೋಚ್ ಯಶಸ್ವಿ: ಕೋಚ್ ಆಗಿ ನೇಮಕವಾದ ಮೊದಲ ಕೂಟದಲ್ಲಿಯೇ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ತೆಗೆದುಕೊಂಡ ಹೋದ ಖ್ಯಾತಿ ಹರೇಂದರ್ ಸಿಂಗ್‌ಗೆ ಸೇರುತ್ತದೆ. ಇದು ನಮ್ಮ ಆರಂಭ ಅಷ್ಟೇ, ಮುಂದೆ ನೋಡ್ತಾ ಇರಿ ಎಂದು ಅವರು ತಿಳಿಸಿದ್ದಾರೆ. 2018ರಲ್ಲಿ ವಿಶ್ವಕಪ್, ಏಷ್ಯನ್ ಗೇಮ್, ಕಾಮನ್‌ವೆಲ್ತ್ ಗೇಮ್ಸ್ ನಡೆಯಲಿದೆ. ಇವುಗಳನ್ನು ಗುರಿಯಾಗಿ ಇಟ್ಟುಕೊಂಡು ಹರೇಂದರ್ ಈ ಮಾತನ್ನು ಹೇಳಿರುವ ಸಾಧ್ಯತೆ ಇದೆ. ಏನೇ ಆಗಲಿ, ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ನಮ್ಮ ಮಹಿಳಾ ತಂಡದ ಪ್ರದರ್ಶನ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.