ಮುಂಬೈ: ಪ್ರವಾಸಿ ಇಂಗ್ಲೆಂಡ್ ವನಿತೆಯರ ವಿರುದ್ದದ ಏಕೈಕ ಟೆಸ್ಟ್ ಪಂದ್ಯವನ್ನು ಭಾರತದ ವನಿತೆಯರ ತಂಡವು ಭರ್ಜರಿಯಾಗಿ ಗೆದ್ದುಕೊಂಡಿದೆ. ಹರ್ಮನ್ ಕೌರ್ ಬಳಗವು 347 ರನ್ ಬೃಹತ್ ಅಂತರದ ಗೆಲುವು ಸಾಧಿಸಿದೆ. ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ಕೇವಲ ಮೂರೇ ದಿನದಲ್ಲಿ ಅಂತ್ಯವಾಗಿದೆ.
ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 428 ರನ್ ಗಳಿಸಿದರೆ ಇಂಗ್ಲೆಂಡ್ 136 ರನ್ ಪೇರಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಹರ್ಮನ್ ಬಳಗ ಆರು ವಿಕೆಟ್ ನಷ್ಟಕ್ಕೆ 186 ರನ್ ಮಾಡಿದರೆ, ಇಂಗ್ಲೆಂಡ್ 131 ರನ್ ಗೆ ಆಲೌಟಾಯಿತು.
ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಪಡೆದು ಇಂಗ್ಲೆಂಡ್ ತಂಡಕ್ಕೆ ಕಾಡಿದ್ದ ದೀಪ್ತಿ ಶರ್ಮಾ ಎರಡನೇ ಇನ್ನಿಂಗ್ಸ್ ನಲ್ಲಿಯೂ ಅದೇ ಪ್ರದರ್ಶನ ಮುಂದುವರಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಪಡೆದರು.
ಎರಡನೇ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದ್ದ ಭಾರತದ ಇಂದು ಅದೇ ಹಂತಕ್ಕೆ ಡಿಕ್ಲೇರ್ ಮಾಡಿತು. ಇಂಗ್ಲೆಂಡ್ ಗೆ ಗೆಲ್ಲಲು 479 ರನ್ ಗುರಿ ನೀಡಿತು.
ಆದರೆ ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಲು ಪರದಾಡಿದ್ದ ಆಂಗ್ಲರು ಎರಡನೇ ಇನ್ನಿಂಗ್ಸ್ ನಲ್ಲಿಯೂ ಬ್ಯಾಟಿಂಗ್ ಮರೆತಂತೆ ಆಡಿದರು. 27 ಓವರ್ ಆಡಿದ ಅವರು 131 ರನ್ ಗೆ ಆಲೌಟಾದರು. 21 ರನ್ ಗಳಿಸಿದ ನಾಯಕಿ ಹೀದರ್ ನೈಟ್ ಅವರದ್ದೇ ಹೆಚ್ಚಿನ ಗಳಿಕೆ.
ಮೂರನೇ ದಿನದಾಟದ ಮೊದಲ ಸೆಶನ್ ನಲ್ಲಿಯೇ ಎಲ್ಲಾ ಹತ್ತು ವಿಕೆಟ್ ಕಿತ್ತ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತು. ಭಾರತದ ಪರ ದೀಪ್ತಿ ಶರ್ಮಾ ನಾಲ್ಕು ವಿಕೆಟ್, ಪೂಜಾ ವಸ್ತ್ರಾಕರ್ ಮೂರು ವಿಕೆಟ್ ಮತ್ತು ರಾಜೇಶ್ವರಿ ಗಾಯಕ್ವಾಡ್ ಎರಡು ವಿಕೆಟ್ ಕಿತ್ತರು.