ಮೆಲ್ಬೋರ್ನ್: ವಿಶ್ವಕಪ್ ಟಿ20 ಪಂದ್ಯಾವಳಿತಯ ಕಿವೀಸ್ ವನಿತೆಯರ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ವನಿತಯರು ರೋಚಕ ಗೆಲುವು ಸಾಧಿಸಿದ್ದಾರೆ. ಕೂಟದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ ಭಾರತದ ಸೆಮಿ ಸ್ಥಾನ ಬಹುತೇಕ ಖಚಿತವಾಗಿದೆ.
ಟಾಸ್ ಗೆದ್ದ ಕಿವೀಸ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಶಿಫಾಲಿ ವರ್ಮಾ ಮತ್ತೆ ಸ್ಪೋಟಕ ಆಟವಾಡಿದರು. ಮೂರು ಸಿಕ್ಸರ್ ಬಾರಿಸಿದ ಶಿಫಾಲಿ 46 ರನ್ ಬಾರಿಸಿದರು. ತಾನಿಯಾ ಭಾಟಿಯಾ 23 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ವಿಫಲರಾದರು. ನಾಯಕಿ ಹರ್ಮನ್ ಮತ್ತು ಉಪ ನಾಯಕಿ ಸ್ಮೃತಿ ಮಂದನಾ ಮತ್ತೆ ವಿಫಲರಾದರು. 20 ಓವರ್ ಗಳಲ್ಲಿ ಟೀಂ ಇಂಡಿಯಾ ವನಿತೆಯರು ಎಂಟು ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತು.
ಗುರಿ ಬೆನ್ನತ್ತಿದ ಕಿವೀಸ್ ತಂಡದಲ್ಲಿ ಯಾವುದೇ ಉತ್ತಮ ಜೊತೆಯಾಟ ಬರಲಿಲ್ಲ. ಅನುಭವಿ ಸೂಜಿ ಬೇಟ್ಸ್ ಮತ್ತು ನಾಯಕಿ ಸೌಫಿ ಡಿವೈನ್ ಅಗ್ಗಕ್ಕೆ ವಿಕೆಟ್ ಒಪ್ಪಿಸಿದರು. ಅಂತಿಮ ಎರಡು ಓವರ್ ನಲ್ಲಿ ಕಿವೀಸ್ ಗೆಲುವಿಗೆ 34 ರನ್ ಅಗತ್ಯವಿತ್ತು. ಕೂಟದ ಅತ್ಯಧಿಕ ವಿಕೆಟ್ ಪಡೆದ ಆಟಗಾರ್ತಿ ಪೂನಮ್ ಯಾದವ್ ಎಸೆತದಲ್ಲಿ ಅಮೆಲಾ ಕೇರ್ ನಾಲ್ಕು ಬೌಂಡರಿ ಸಹಿತ 18 ರನ್ ಬಾರಿಸಿದರು. ಇದರೊಂದಿಗೆ ಕಿವೀಸ್ ಗೆ ಗೆಲುವಿನ ನಿರೀಕ್ಷೆ ಮೂಡಿತ್ತು.
ಅಂತಿಮ ಓವರ್ ನಲ್ಲಿ ಶಿಖಾ ಪಾಂಡೆ ಓವರ್ ಎಸೆದರು. ಅಂತಿಮ ಎಸೆತದಲ್ಲಿ ಗೆಲುವಿಗೆ ಐದು ರನ್ ಬಾರಿಸುವ ಸವಾಲು ಪಡೆದ ಕಿವೀಸ್ ಯಶಸ್ವಿಯಾಗಲಿಲ್ಲ. ಅಮೆಲಾ ಕೆರ್ 34 ರನ್ ಗಳಿಸಿದರು. ಭಾರತದ ಪರ ಎಲ್ಲಾ ಐದು ಬೌಲರ್ ಗಳು ತಲಾ ವಿಕೆಟ್ ಪಡೆದರು. ಭಾರತ ನಾಲ್ಕು ರನ್ ಅಂತರದಿಂದ ಜಯ ಗಳಿಸಿತ್ತು.
ಶಿಪಾಲಿ ವರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.