ಮಿರ್ಪುರ್: ಶೋಚನೀಯ ಬ್ಯಾಟಿಂಗ್ ವೈಫಲ್ಯ ಕಂಡ ಭಾರತದ ವನಿತೆಯರು ಆತಿಥೇಯ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದ್ದಾರೆ. ಕೌರ್ ಬಳಗ ಡಕ್‌ವರ್ತ್-ಲೂಯಿಸ್ ನಿಯಮದಂತೆ 40 ರನ್ನುಗಳಿಂದ ಎಡವಿತು.
ಬಾಂಗ್ಲಾದೇಶ ಪಾಲಿಗೆ ಇದೊಂದು ಐತಿಹಾಸಿಕ ಸಾಧನೆ. ಇದು ಭಾರತದ ವಿರುದ್ಧ ಏಕದಿನದಲ್ಲಿ ಬಾಂಗ್ಲಾ ಸಾಧಿಸಿದ ಮೊದಲ ಜಯವಾಗಿದೆ.
ಪ್ರತಿಕೂಲ ಹವಾಮಾನದಿಂದಾಗಿ ಪಂದ್ಯವನ್ನು 44 ಓವರ್‌ಗಳಿಗೆ ಇಳಿಸ ಲಾಗಿತ್ತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ 43 ಓವರ್‌ಗಳಲ್ಲಿ 152ಕ್ಕೆ ಆಲೌಟ್ ಆಯಿತು. ಗಾಯಾಳದ ಕಾರಣ ಶೋರ್ನಾ ಅಖ್ತರ್ ಬ್ಯಾಟಿಂಗ್‌ಗೆ ಇಳಿಯಲಿಲ್ಲ. ಭಾರತಕ್ಕೆ ಲಭಿಸಿದ ಟಾರ್ಗೆಟ್ 154 ರನ್. ಆದರೆ ಈ ಸಾಮಾನ್ಯ ಮೊತ್ತವನ್ನು ಬೆನ್ನಟ್ಟಲಾಗದೆ 35.5 ಓವರ್‌ಗಳಲ್ಲಿ 113ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು.
ಚೊಚ್ಚಲ ಏಕದಿನ ಪಂದ್ಯ ಆಡಲಿಳಿದ ಯುವ ಪೇಸ್ ಬೌಲರ್ ಅಮನ್‌ಜೋತ್ ಕೌರ್ ಬಾಂಗ್ಲಾಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಇವರ ಸಾಧನೆ 31ಕ್ಕೆ 4 ವಿಕೆಟ್. ಇದು ಪದಾರ್ಪಣ ಪಂದ್ಯದಲ್ಲಿ ಭಾರತದ ಬೌಲರ್ ಒಬ್ಬರು ದಾಖಲಿಸಿದ 2ನೇ ಅತ್ಯುತ್ತಮ ಸಾಧನೆಯಾಗಿದೆ. ದಾಖಲೆ ಬಲಗೈ ಮಧ್ಯಮ ವೇಗಿ ಪೂರ್ಣಿಮಾ ಚೌಧರಿ ಹೆಸರಲ್ಲಿದೆ. ಅವರು 1997ರ ವೆಸ್ಟ್ ಇಂಡೀಸ್ ಎದುರಿನ ಫರೀದಾಬಾದ್ ಪಂದ್ಯದಲ್ಲಿ 21 ರನ್ನಿಗೆ 5 ವಿಕೆಟ್ ಉರುಳಿಸಿದ್ದರು.
ಬಾಂಗ್ಲಾ ಸರದಿಯಲ್ಲಿ ನಾಯಕಿ ನಿಗಾರ್ ಸುಲ್ತಾನಾ ದಿಟ್ಟ ಹೋರಾಟ ನಡೆಸಿ 39 ರನ್ ಹೊಡೆದರು (64 ಎಸೆತ, 3 ಬೌಂಡರಿ). ಫರ್ಗಾನಾ ಹಕ್ 27, ಸುಲ್ತಾನಾ ಖಾತುನ್ 16 ರನ್ ಮಾಡಿದರು. ಇವರ ಸಾಹಸದಿಂದ ಬಾಂಗ್ಲಾ ಮೊತ್ತ ನೂರೈವತ್ತರ ಗಡಿ ದಾಟಲು ಯಶಸ್ವಿಯಾಯಿತು.
ಬೌಲಿಂಗ್‌ನಲ್ಲಿ ಮಿಂಚು ಹರಿಸಿದ ಭಾರತ, ಬ್ಯಾಟಿಂಗ್‌ನಲ್ಲಿ ಅಷ್ಟೇ ಕಳಪೆ ಪ್ರದರ್ಶನ ನೀಡಿ ಹೋರಾಟ ನಡೆಸದೆಯೇ ಶರಣಾಯಿತು. ವಿಶ್ವ ದರ್ಜೆಯ ಆಟಗಾರ್ತಿಯರೆಲ್ಲ ಆತಿಥೇಯರ ಬೌಲಿಂಗ್ ಆಕ್ರಮಣವನ್ನು ಎದುರಿಸಲಾಗದೆ ಪರದಾಡಿದರು. 20 ರನ್ ಮಾಡಿದ ದೀಪ್ತಿ ಶರ್ಮ ಅವರೇ ಭಾರತದ ಸರದಿಯ ಟಾಪ್ ಸ್ಕೋರರ್. ಉಳಿದಂತೆ ಪ್ರಿಯಾ ಪೂನಿಯ 10, ಸ್ಮತಿ ಮಂಧನಾ 11, ಯಾಸ್ತಿಕಾ ಭಾಟಿಯಾ 15, ಹರ್ಮನ್‌ಪ್ರೀತ್ ಕೌರ್ 5, ಜೆಮಿಮಾ ರೋಡ್ರಿಗಸ್ 10 ರನ್ ಮಾಡಿ ಬೇಗನೆ ಪೆವಿಲಿಯನ್ ಸೇರಿಕೊಂಡರು. ಅಮನ್‌ಜೋತ್ ಬ್ಯಾಟಿಂಗ್‌ನಲ್ಲೂ ಮಿಂಚಿದರು (15 ರನ್).ಮಧ್ಯಮ ವೇಗಿ ಮರುಫಾ ಆಖ್ತರ್ 4 ವಿಕೆಟ್, ಲೆಗ್‌ಸ್ಪಿನ್ನರ್ ರಬೇಯಾ ಖಾನ್ 3 ವಿಕೆಟ್ ಉರುಳಿಸಿ ಪ್ರವಾಸಿಗರ ಪಾಲಿಗೆ ಘಾತಕವಾಗಿ ಪರಿಣಮಿಸಿದರು. ದ್ವಿತೀಯ ಏಕದಿನ ಪಂದ್ಯ ಬುಧವಾರ ನಡೆಯಲಿದೆ.