Advertisement

ಬೆತ್‌ ಮೂನಿ ಅಜೇಯ ಸೆಂಚುರಿ; ಆಸ್ಟ್ರೇಲಿಯ ಸರಣಿ ಜಯಭೇರಿ

12:27 AM Sep 25, 2021 | Team Udayavani |

ಮಕಾಯ್: ಕೊನೆಯ ಕ್ಷಣದ ನಾಟಕೀಯ ಹಾಗೂ ನೋಬಾಲ್‌ ವಿದ್ಯಮಾನದ ಬಳಿಕ ಆಸ್ಟ್ರೇಲಿಯ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಭಾರತ ಅಂತಿಮ ಎಸೆತದಲ್ಲಿ ಕಳೆದುಕೊಂಡಿದೆ. ಸರಣಿ ಸಮಬಲದ ಅವಕಾಶ ಕೈಚೆಲ್ಲಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 7 ವಿಕೆಟಿಗೆ 274 ರನ್‌ ಪೇರಿಸಿತು. 2018ರಲ್ಲಿ ಆಸ್ಟ್ರೇಲಿಯದ ಗೆಲುವಿನ ಓಟ ಆರಂಭಗೊಂಡ ಬಳಿಕ ಅವರೆದುರು ದಾಖಲಾದ ಅತ್ಯಧಿಕ ಮೊತ್ತ ಇದಾಗಿದೆ. ಆದರೆ ಇದನ್ನು ಉಳಿಸಿಕೊಳ್ಳಲು ಮಿಥಾಲಿ ಪಡೆಯಿಂದ ಸಾಧ್ಯವಾಗಲಿಲ್ಲ. ಆರಂಭಿಕ ಆಟಗಾರ್ತಿ ಬೆತ್‌ ಮೂನಿ ಅವರ ಅಜೇಯ 125 ರನ್‌ (133 ಎಸೆತ, 12 ಬೌಂಡರಿ) ಸಾಹಸದಿಂದ ಆಸ್ಟ್ರೇಲಿಯ 5 ವಿಕೆಟಿಗೆ 275 ರನ್‌ ಪೇರಿಸಿ ಜಯ ಸಾಧಿಸಿತು.

ಮೊದಲ ಓವರ್‌ನಲ್ಲೇ ವಿಕೆಟ್‌ ಉದುರಿಸಿಕೊಂಡ ಆಸೀಸ್‌, ಒಂದು ಹಂತದಲ್ಲಿ 4 ವಿಕೆಟಿಗೆ 52 ರನ್‌ ಮಾಡಿ ತೀವ್ರ ಸಂಕಟದಲ್ಲಿತ್ತು. ಆದರೆ ಮೂನಿ-ಟಹ್ಲಿಯಾ ಮೆಕ್‌ಗ್ರಾತ್‌ (74) 5ನೇ ವಿಕೆಟಿಗೆ 126 ರನ್‌ ಸೂರೆಗೈದು ಹೋರಾಟವನ್ನು ಜಾರಿಯಲ್ಲಿರಿಸಿದರು. ಬಳಿಕ ಮೂನಿ-ನಿಕೋಲಾ ಕ್ಯಾರಿ (ಅಜೇಯ 39) ಸೇರಿಕೊಂಡು ಭಾರತದ ಕೈಯಿಂದ ಗೆಲುವು ಕಸಿದರು.

ಅಂತಿಮ ಓವರ್ ಗೊಂದಲ

ಜೂಲನ್‌ ಪಾಲಾದ ಅಂತಿಮ ಓವರ್‌ನಲ್ಲಿ ಆಸೀಸ್‌ ಜಯಕ್ಕೆ 13 ರನ್‌ ಬೇಕಿತ್ತು. ಆದರೆ 2 ನೋಬಾಲ್‌, ಒಂದು ಓವರ್‌ ತ್ರೋ ಭಾರತಕ್ಕೆ ಮುಳುವಾಯಿತು. ಅಂತಿಮ ಎಸೆತದಲ್ಲಿ ಕ್ಯಾರಿ ಕ್ಯಾಚ್‌ ಕೊಟ್ಟಾಗ ಭಾರತ ಗೆಲುವಿನ ಸಂಭ್ರಮ ಆಚರಿಸಿತಾದರೂ ತೃತೀಯ ಅಂಪಾಯರ್‌ ಇದನ್ನು ನೋಬಾಲ್‌ ಎಂದು ಘೋಷಿಸಿದರು. ಇದರ ಲಾಭವೆತ್ತಿದ ಆಸೀಸ್‌ ಮತ್ತೆರಡು ರನ್‌ ತೆಗೆದು ಸತತ 26ನೇ ಗೆಲುವಿನ ಸಂಭ್ರಮ ಆಚರಿಸಿತು.

Advertisement

ಭಾರತದ ಬೃಹತ್‌ ಮೊತ್ತಕ್ಕೆ ಕಾರಣವಾದದ್ದು ಸ್ಮತಿ ಮಂಧನಾ ಅವರ 19ನೇ ಅರ್ಧ ಶತಕ (86) ಹಾಗೂ ಅವರು ನಡೆಸಿದ ಎರಡು ಅಮೋಘ ಜತೆಯಾಟ. ಮೊದಲ ವಿಕೆಟಿಗೆ ಶಫಾಲಿ ವರ್ಮ (22) ಅವರೊಂದಿಗೆ 74 ರನ್‌, ರಿಚಾ ಘೋಷ್‌ (44) ಜತೆ 4ನೇ ವಿಕೆಟಿಗೆ 76 ರನ್‌ ಪೇರಿಸಿದರು.

ಸಂಕ್ಷಿಪ್ತ ಸ್ಕೋರ್: ಭಾರತ-7 ವಿಕೆಟಿಗೆ 274 (ಮಂಧನಾ 86, ರಿಚಾ 44, ಪೂಜಾ 29, ಜೂಲನ್‌ ಔಟಾಗದೆ 28, ಮೆಕ್‌ಗ್ರಾತ್‌ 45ಕ್ಕೆ 3, ಮೊಲಿನಾಕ್ಸ್‌ 28ಕ್ಕೆ 2). ಆಸ್ಟ್ರೇಲಿಯ-50 ಓವರ್‌ಗಳಲ್ಲಿ 5 ವಿಕೆಟಿಗೆ 275 (ಮೂನಿ ಔಟಾಗದೆ 125, ಮೆಕ್‌ಗ್ರಾತ್‌ 74, ಕ್ಯಾರಿ ಔಟಾಗದೆ 39, ಮೇಘನಾ 38ಕ್ಕೆ 1, ಜೂಲನ್‌ 40ಕ್ಕೆ 1). ಪಂದ್ಯಶ್ರೇಷ್ಠ: ಬೆತ್‌ ಮೂನಿ.

Advertisement

Udayavani is now on Telegram. Click here to join our channel and stay updated with the latest news.

Next