ಸಿಡ್ನಿ: ವನಿತಾ ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಹರ್ಮನ್ ಕೌರ್ ಬಳಗ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಸೋಲಿನ ರುಚಿ ತೋರಿಸಿದೆ. ಇದರೊಂದಿಗೆ ಭಾರತ ಕೂಟದಲ್ಲಿ ಶುಭಾರಂಭ ಮಾಡಿದೆ.
ಸಿಡ್ನಿ ಅಂಗಳದಲ್ಲಿ ಟಾಸ್ ಗೆದ್ದ ಆಸೀಸ್ ವನಿತೆಯರು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಭಾರತ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದರೆ, ಭಾರತದ ಬಿಗು ದಾಳಿಗೆ ತತ್ತರಿಸಿದ ಆಸೀಸ್ ಇನ್ನೂ ಒಂದು ಎಸೆತ ಬಾಕಿ ಇರುವಾಗ 115 ರನ್ ಗೆ ಆಲ್ ಔಟ್ ಆಗಿದೆ.
ಭಾರತದ ಪರ ಯುವ ಆಟಗಾರ್ತಿ ಶಿಫಾಲಿ ವರ್ಮಾ ಉತ್ತಮ ಆರಂಭ ನೀಡಿದರು. ಶಿಫಾಲಿ 15 ಎಸೆತಗಳಲ್ಲಿ 29 ರನ್ ಬಾರಿಸಿದರು. ಉಳಿದಂತೆ ಜೆಮಿಮಾ 26 ರನ್ ಮತ್ತು ಅಂತ್ಯದಲ್ಲಿ ದೀಪ್ತಿ ಶರ್ಮಾ ಅಜೇಯ 49 ರನ್ ಗಳಿಸಿದರು.
ಗುರಿ ಬೆನ್ನತ್ತಿದ ಆಸೀಸ್ ಪವರ್ ಪ್ಲೇ ನಲ್ಲಿ ಉತ್ತಮವಾಗಿ ಆಡಿದರೂ ನಂತರ ಸತತ ವಿಕೆಟ್ ಕಳೆದುಕೊಂಡಿತು. ಅಲಿಸಾ ಹೀಲಿ 51 ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಗಾರ್ಡನರ್ 34 ರನ್ ಗಳಿಸಿದರು. ಉಳಿದಂತೆ ಆರು ರನ್ ಗಳಿಸಿದ ಬೆತ್ ಮೂನಿಯದ್ದೇ ಗರಿಷ್ಠ ಗಳಿಕೆ.
ಭಾರತದ ಪರ ಪೂನಂ ಯಾದವ್ ನಾಲ್ಕು ವಿಕೆಟ್ ಕಬಳಿಸಿದರೆ, ಶಿಖಾ ಪಾಂಡೆ ಮೂರು ವಿಕೆಟ್ ಪಡೆದರು. ಭಾರತ 17 ರನ್ ಅಂತರದಿಂದ ಜಯ ಸಾಧಿಸಿತು.