Advertisement

ಭಾರತ-ವೆಸ್ಟ್‌ ಇಂಡೀಸ್‌ ಟಿ20: ಅಮೆರಿಕದಲ್ಲಿ ವೀಕೆಂಡ್‌ ರಂಜನೆ

11:14 PM Aug 05, 2022 | Team Udayavani |

ಫ್ಲೋರಿಡಾ: ಕೆರಿಬಿಯನ್‌ ದ್ವೀಪದಲ್ಲಿ 3 ಟಿ20 ಪಂದ್ಯಗಳನ್ನು ಪೂರೈಸಿದ ಭಾರತ-ವೆಸ್ಟ್‌ ಇಂಡೀಸ್‌ ತಂಡಗಳೀಗ ಅಮೆರಿಕದ ಫ್ಲೋರಿಡಾಕ್ಕೆ ಆಗಮಿಸಿವೆ.

Advertisement

ಶನಿವಾರ ಮತ್ತು ರವಿವಾರ ಇಲ್ಲಿ ಕೊನೆಯ 2 ಪಂದ್ಯಗಳನ್ನು ಆಡಲಾಗುವುದು. ಇದು ಅಮೆರಿಕದ ಕ್ರಿಕೆಟ್‌ ಪ್ರೇಮಿಗಳಿಗೆ ವೀಕೆಂಡ್‌ ರಂಜನೆಯಾದರೆ, ಭಾರತಕ್ಕೆ ಏಷ್ಯಾ ಕಪ್‌ ತಂಡದ ಆಯ್ಕೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

ವೆಸ್ಟ್‌ ಇಂಡೀಸ್‌ನಲ್ಲಿ ಆಡಲಾದ 3 ಪಂದ್ಯಗಳಲ್ಲಿ ಭಾರತ 2-1 ಮುನ್ನಡೆ ಸಾಧಿಸಿದ್ದು, ಇನ್ನೊಂದನ್ನು ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ವಿಂಡೀಸ್‌ ಮುಂದೆ ಎರಡನ್ನೂ ಗೆಲ್ಲುವ ಒತ್ತಡವಿದೆ.

ಬ್ಯಾಟಿಂಗ್‌ ಪೈಪೋಟಿ
ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌ ಅವರ ಅನುಪಸ್ಥಿತಿಯ ಹೊರತಾಗಿಯೂ ಭಾರದ ಸದೃಢ ಬ್ಯಾಟಿಂಗ್‌ ಸರದಿಯನ್ನು ಹೊಂದಿದೆ. ಆದರೂ ಇಲ್ಲಿ ಆರೋಗ್ಯಕರ ಪೈಪೋಟಿ ಇರುವುದನ್ನು ಮರೆಯು ವಂತಿಲ್ಲ. ಶ್ರೇಯಸ್‌ ಆಯ್ಯರ್‌ ಮತ್ತು ದೀಪಕ್‌ ಹೂಡಾ ನಡುವೆ ಮಧ್ಯಮ ಕ್ರಮಾಂಕಕ್ಕೆ ಸ್ಪರ್ಧೆ ಏರ್ಪಟ್ಟಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಇವರಲ್ಲೊಬ್ಬರಿಗಷ್ಟೇ ಏಷ್ಯಾ ಕಪ್‌ ತಂಡದಲ್ಲಿ ಸ್ಥಾನ ಸಿಗಲು ಸಾಧ್ಯ.

ಶ್ರೇಯಸ್‌ ಅಯ್ಯರ್‌ ಚುಟುಕು ಕ್ರಿಕೆಟ್‌ನಲ್ಲಿ ನಿರೀಕ್ಷಿತ ಯಶಸ್ಸು ಸಂಪಾದಿಸುವಲ್ಲಿ ವಿಫ‌ಲರಾಗಿದ್ದಾರೆ. 3 ಪಂದ್ಯಗಳಲ್ಲಿ ಗಳಿಸಿದ್ದು 0, 10 ಮತ್ತು 24 ರನ್‌ ಮಾತ್ರ. ಕಳೆದ ಎರಡೂವರೆ ತಿಂಗಳಲ್ಲಿ ಅಯ್ಯರ್‌ಗೆ 9 ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿದೆ. ಕೆಲವೊಮ್ಮೆ 10 ಓವರ್‌ ಒಳಗೆ ಕ್ರೀಸ್‌ ಇಳಿದರೂ ಒಂದೂ ಅರ್ಧ ಶತಕ ಹೊಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಫ್ಲೋರಿಡಾ ಪಂದ್ಯಗಳಲ್ಲಿ ಅಯ್ಯರ್‌ ಒಮ್ಮೆಲೇ ರನ್‌ ಮಳೆ ಸುರಿಸಲಿದ್ದಾರೆಂದು ಭಾವಿಸುವುದರಲ್ಲಿ ಅರ್ಥವಿಲ್ಲ.

Advertisement

ಆದರೆ ದೀಪಕ್‌ ಹೂಡಾ ಸಿಕ್ಕಿದ ಆವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಳ್ಳುತ್ತಿದ್ದಾರೆ. ಬಿಗ್‌ ಹಿಟ್ಟಿಂಗ್‌ ಬ್ಯಾಟಿಂಗ್‌ ಮೂಲಕ ತಂಡದ ಮೊತ್ತವನ್ನು ಏರಿಸುವಲ್ಲಿ ಉಪಯುಕ್ತ ನೆರವು ನೀಡುತ್ತಿದ್ದಾರೆ. ಮ್ಯಾಚ್‌ ವಿನ್ನರ್‌ ಕೂಡ ಆಗಿದ್ದಾರೆ. ಆಫ್ಬ್ರೇಕ್‌ ಬೌಲಿಂಗ್‌ ಕೂಡ ಮಾಡಬಲ್ಲರು. 3ನೇ ಮುಖಾಮುಖೀಯಲ್ಲಿ ಬೌಲಿಂಗ್‌ ಆರಂಭಿಸಿದ್ದೇ ಹೂಡಾ. ನೀಡಿದ್ದು ಒಂದು ರನ್‌ ಮಾತ್ರ.

ರೋಹಿತ್‌ ಶರ್ಮ ಫಿಟ್‌
3ನೇ ಪಂದ್ಯದ ವೇಳೆ ಸೊಂಟದ ನೋವಿನಿಂದಾಗಿ ಕ್ರೀಸ್‌ ತ್ಯಜಿಸಿದ್ದ ನಾಯಕ ರೋಹಿತ್‌ ಶರ್ಮ ಈಗ ಫಿಟ್‌ ಆಗಿದ್ದು, ಆಡುವ ಎಲ್ಲ ಸಾಧ್ಯತೆ ಇದೆ. ಇವರೊಂದಿಗೆ ಕಳೆದ ಪಂದ್ಯದ ಹೀರೋ ಸೂರ್ಯಕುಮಾರ್‌ ಯಾದವ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಈ ಅವಕಾಶವನ್ನು ಸೂರ್ಯ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಒಮ್ಮೆ ಕ್ರೀಸ್‌ ಆಕ್ರಮಿಸಿಕೊಂಡರೆಂದರೆ ಇವರನ್ನು ತಡೆಯುವುದು ಬಹಳ ಕಷ್ಟ. ಉಳಿ ದಂತೆ ಪಂತ್‌, ಪಾಂಡ್ಯ, ದಿನೇಶ್‌ ಕಾರ್ತಿಕ್‌ ಮಧ್ಯಮ ಕ್ರಮಾಂಕದಲ್ಲಿ ಮುಂದುವರಿಯುವ ಎಲ್ಲ ಸಾಧ್ಯತೆ ಇದೆ. ಸಂಜು ಸ್ಯಾಮ್ಸನ್‌ ಕೂಡ ರೇಸ್‌ನಲ್ಲಿದ್ದಾರೆ.

ಆವೇಶ್‌ ಖಾನ್‌ ವೈಫ‌ಲ್ಯ
ಬೌಲಿಂಗ್‌ ವಿಭಾಗದಲ್ಲಿ ಆವೇಶ್‌ ಖಾನ್‌ ಸಿಕ್ಕಾಪಟ್ಟೆ ದುಬಾರಿ ಆಗುತ್ತಿದ್ದಾರೆ. ಬಸೆಟರ್‌ನಲ್ಲಿ ಇವರ 3 ಓವರ್‌ಗಳಲ್ಲಿ ಬರೋಬ್ಬರಿ 47 ರನ್‌ ಸೋರಿ ಹೋಗಿತ್ತು. ಗಾಯಾಳು ಹರ್ಷಲ್‌ ಪಟೇಲ್‌ ಇನ್ನೂ ಚೇತರಿಸದ ಕಾರಣ ಆಯ್ಕೆ ತುಸು ಜಟಿಲವಾಗಿದೆ. ಇಲ್ಲವೇ ಹೆಚ್ಚುವರಿ ಸ್ಪಿನ್ನರ್‌ಗೆ ಅವಕಾಶ ನೀಡಬೇಕಾಗುತ್ತದೆ.

ಸ್ಥಳ: ಫೋರ್ಟ್‌ ಲಾಡರ್‌ಹಿಲ್‌
ಆರಂಭ: ರಾತ್ರಿ 8.00
ಪ್ರಸಾರ: ಡಿಡಿ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next