ಸೇಂಟ್ ಜಾನ್ಸ್ (ಆಂಟಿಗಾ): ವೆಸ್ಟ್ ಇಂಡೀಸಿನ ಸ್ಫೋಟಕ ಆರಂಭಕಾರ ಕ್ರಿಸ್ ಗೇಲ್ ವೈಯಕ್ತಿಕ ಕಾರಣಗಳಿಂದ ಭಾರತ ವಿರುದ್ಧದ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದರೊಂದಿಗೆ ಭಾರತ-ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿ ಅಷ್ಟರ ಮಟ್ಟಿಗೆ ಕಳೆಗುಂದಲಿದೆ.
ಕ್ರಿಸ್ ಗೇಲ್ ಗೈರಲ್ಲಿ ಮುಂದಿನ ವರ್ಷದ ಏಕದಿನ ವಿಶ್ವಕಪ್ ಹಾಗೂ 2020ರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಗಮನದಲ್ಲಿರಿಸಿಕೊಂಡು ವೆಸ್ಟ್ ಇಂಡೀಸ್ ಆಯ್ಕೆ ಮಂಡಳಿ ಮೂರು ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿದೆ.
ಇವರೆಂದರೆ ಆರಂಭಕಾರ ಚಂದರ್‌ಪಾಲ್ ಹೇಮರಾಜ್, ಆಲ್‌ರೌಂಡರ್ ಫ್ಯಾಬಿಯನ್ ಅಲೆನ್ ಮತ್ತು ವೇಗಿ ಒಶಾನೆ ಥಾಮಸ್. ಇವರು ಕಳೆದೆರಡು ವರ್ಷಗಳಿಂದ ವಿಂಡೀಸ್ “ಎ’ ಹಾಗೂ “ಬಿ’ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, 2018ರ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಮಿಂಚಿದ್ದಾರೆ.
ಬಿಗ್ ಹಿಟ್ಟಿಂಗ್ ಆಲ್‌ರೌಂಡರ್ ಕೈರನ್ ಪೊಲಾರ್ಡ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಡ್ಯಾರನ್ ಬ್ರಾವೊ ಮತ್ತು ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಟಿ20 ತಂಡಕ್ಕೆ ಮರಳಿದ್ದಾರೆ. ಆದರೆ ರಸೆಲ್ ಗಾಯದಿಂದ ಸಂಪೂರ್ಣ ಚೇತರಿಸದ ಕಾರಣ ಏಕದಿನ ತಂಡಕ್ಕೆ ಆಯ್ಕೆಯಾಗಿಲ್ಲ. ವೇಗಿ ಅಲ್ಜಾರಿ ಜೋಸೆಫ್ ಭಾರತಕ್ಕೆ ಹೊರಡುವ ಮುನ್ನ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ.
ಡ್ವೇನ್ ಬ್ರಾವೊ ಮತ್ತು ಸುನೀಲ್ ನಾರಾಯಣ್ ಭಾರತ ಪ್ರವಾಸದಿಂದ ಹೊರಗುಳಿಯಲಿರುವ ಮತ್ತಿಬ್ಬರು ಪ್ರಮುಖ ಕ್ರಿಕೆಟಿಗರು.ಸರಣಿಯ ಮೊದಲ ಏಕದಿನ ಪಂದ್ಯ ಅ. 21ರಂದು ಗುವಾಹಟಿ ಯಲ್ಲಿ ನಡೆಯಲಿದೆ.
ಏಕದಿನ ತಂಡ: ಜಾಸನ್ ಹೋಲ್ಡರ್ (ನಾಯಕ), ಫ್ಯಾಬಿಯಾನ್ ಅಲೆನ್, ಸುನೀಲ್ ಆ್ಯಂಬ್ರಿಸ್, ದೇವೇಂದ್ರ ಬಿಶೂ, ಚಂದರ್‌ಪಾಲ್ ಹೇಮರಾಜ್, ಶಿಮ್ರನ್ ಹೆಟ್‌ಮೈರ್, ಶೈ ಹೋಪ್, ಅಲ್ಜಾರಿ ಜೋಸೆಫ್, ಎವಿನ್ ಲೆವಿಸ್, ಆಶ್ಲೇ ನರ್ಸ್, ಕೀಮೊ ಪೌಲ್, ರೋವನ್ ಪೊವೆಲ್, ಕೆಮರ್ ರೋಚ್, ಮಾರ್ಲಾನ್ ಸಾಮ್ಯುಯೆಲ್ಸ್, ಒಶಾನೆ ಥಾಮಸ್.
ಟಿ20 ತಂಡ: ಕಾರ್ಲೋಸ್ ಬ್ರಾತ್‌ವೇಟ್ (ನಾಯಕ), ಫ್ಯಾಬಿಯಾನ್ ಅಲೆನ್, ಡ್ಯಾರನ್ ಬ್ರಾವೊ, ಶಿಮ್ರನ್ ಹೈಟ್‌ಮೈರ್, ಎವಿನ್ ಲೆವಿಸ್, ಒಬೆಡ್ ಮೆಕಾಯ್, ಆಶ್ಲೇ ನರ್ಸ್, ಕೀಮೊ ಪೌಲ್, ಖಾರಿ ಪಯರ್, ಕೈರನ್ ಪೊಲಾರ್ಡ್, ರೋವನ್ ಪೊವೆಲ್, ದಿನೇಶ್ ರಾಮದಿನ್, ಆ್ಯಂಡ್ರೆ ರಸೆಲ್, ಶೆರ್ಫಾನ್ ರುದರ್‌ಫೋರ್ಡ್, ಒಶಾನೆ ಥಾಮಸ್.