ನಾರ್ಥ್ ಸೌಂಡ್(ವೆಸ್ಟ್ ಇಂಡೀಸ್): ಭಾರತೀಯ ಬೌಲರ್‌ಗಳ ಬಿಗು ದಾಳಿಗೆ ಕಂಗಾಲಾದ ವೆಸ್ಟ್ ಇಂಡೀಸ್ 4ನೇ ಏಕದಿನ ಪಂದ್ಯದಲ್ಲಿ 9 ವಿಕೆಟಿಗೆ 189 ರನ್ನುಗಳ ಸಾಧಾರಣ ಮೊತ್ತ ಗಳಿಸಿದೆ.
ರವಿವಾರ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ವಿಂಡೀಸ್ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಎವಿನ್ ಲೆವಿಸ್ ಮತ್ತು ಕೈಲ್ ಹೋಪ್ ಅವರು 57 ರನ್ನುಗಳ ಜತೆಯಾಟ ನೀಡಿ ಭದ್ರ ಅಡಿಪಾಯ ಹಾಕಿದರು. ಈ ಹಂತದಲ್ಲಿ 35 ರನ್ ಬಾರಿಸಿದ ಹೋಪ್ ಪಾಂಡ್ಯ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಹೋಪ್ ಆಟ ತುಂಬಾ ನಿಧಾನಗತಿಯಲ್ಲಿತ್ತು. 63 ಎಸೆತ ಎದುರಿಸಿದ ಅವರು 4 ಬೌಂಡರಿ ಹೊಡೆದಿದ್ದರು. ಅನಂತರ ಲೆವಿಸ್(35) ಕೂಡ ವಿಕೆಟ್ ಕಳೆದುಕೊಂಡರು. 60 ಎಸೆತ ಎದುರಿಸಿದ ಅವರು 2 ಬೌಂಡರಿ, 2 ಸಿಕ್ಸರ್ ಹೊಡೆದಿದ್ದರು.
ಆಬಳಿಕ ಬಂದ ಶೈ ಹೋಪ್ (25), ರೋಸ್ಟನ್ ಚೇಸ್(24) ಕೂಡ ಹೆಚ್ಚು ಸಮಯ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಜಾಸನ್ ಮೊಹಮ್ಮದ್ (20), ಜಾಸನ್ ಹೋಲ್ಡರ್ (11), ಪೊವೆಲ್(2) ಕೂಡ ಸರದಿ ಸಾಲಿನಲ್ಲಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಭಾರತದ ಪರ ಭರ್ಜರಿ ದಾಳಿ ನಡೆಸಿದ ಹಾರ್ದಿಕ್ ಪಾಂಡ್ಯ ಮತ್ತು ಉಮೇಶ್ ಯಾದವ್ ತಲಾ ಮೂರು ವಿಕೆಟ್ ಪಡೆದರೆ ಕುಲದೀಪ್ ಯಾದವ್ ತನ್ನ 10 ಓವರ್‌ಗಳ ದಾಳಿಯಲ್ಲಿ ಕೇವಲ 31 ರನ್ ನೀಡಿ ಎರಡು ವಿಕೆಟ್ ಕಿತ್ತರು.
ಭಾರತ ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯಲಿದೆ. ಒಂದು ವೇಳೆ ಈ ಪಂದ್ಯ ಗೆದ್ದರೆ ಸರಣಿ ತನ್ನದಾಗಿಸಿಕೊಳ್ಳಲಿದೆ. ಸೋತರೆ 5ನೇ ಏಕದಿನ ಪಂದ್ಯಕ್ಕೆ ಮಹತ್ವ ಬರಲಿದೆ.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್ 9 ವಿಕೆಟಿಗೆ 189(ಲೆವಿಸ್ 35, ಕೈಲ್ ಹೋಪ್ 35, ಶೈನ್ ಹೋಪ್ 25, ರೋಲ್ಟನ್ ಚೇಸ್ 24, ಜಾಸನ್ ಮೊಹಮ್ಮದ್ 20, ಹಾರ್ದಿಕ್ ಪಾಂಡ್ಯ 40ಕ್ಕೆ 3, ಉಮೇಶ್ ಯಾದವ್ 36ಕ್ಕೆ 3, ಕುಲದೀಪ್ ಯಾದವ್ 31ಕ್ಕೆ 2)