Advertisement

ಇಂದು ಭಾರತ-ವೆಸ್ಟ್‌ ಇಂಡೀಸ್‌ 3ನೇ ಏಕದಿನ: ಸರಣಿ ಮುನ್ನಡೆಗೆ ಧಾವಂತ

03:45 AM Jun 30, 2017 | Team Udayavani |

ನಾರ್ತ್‌ ಸೌಂಡ್‌ (ಆಂಟಿಗಾ): ದುರ್ಬಲ ವೆಸ್ಟ್‌ ಇಂಡೀಸ್‌ ಮೇಲೆ ಮತ್ತೂಮ್ಮೆ ಸವಾರಿ ಮಾಡಲು ಹೊಂಚುಹಾಕುತ್ತಿರುವ ಭಾರತ ತಂಡ, ಶುಕ್ರವಾರ ನಾರ್ತ್‌ಸೌಂಡ್‌ನ‌ “ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂ’ನಲ್ಲಿ ಸರಣಿಯ 3ನೇ ಏಕದಿನ ಪಂದ್ಯವನ್ನು ಆಡಲಿದೆ. ಈಗಿನ ಮುನ್ನಡೆಯನ್ನು 2-0 ಅಂತರಕ್ಕೆ ವಿಸ್ತರಿಸುವುದು ಟೀಮ್‌ ಇಂಡಿಯಾ ಗುರಿ. ಈ ಯೋಜನೆ ಸಾಕಾರಗೊಂಡಿದ್ದೇ ಆದಲ್ಲಿ ಕೊಹ್ಲಿ ಪಡೆಯ ಸರಣಿ ಗೆಲುವು ಬಹುತೇಕ ಖಚಿತ.

Advertisement

ಪೋರ್ಟ್‌ ಆಫ್ ಸ್ಪೇನ್‌ನಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಭಾರತ ನಿಚ್ಚಳ ಮೇಲುಗೈ ಸಾಧಿಸಿತ್ತು. ಮೊದಲ ಮುಖಾಮುಖೀ ಮಳೆಯಿಂದ ರದ್ದಾದರೂ 39.2 ಓವರ್‌ಗಳ ಆಟದಲ್ಲಿ 3ಕ್ಕೆ 199 ರನ್‌ ಪೇರಿಸಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತ್ತು. ಆರಂಭಿಕರಾದ ಶಿಖರ್‌ ಧವನ್‌ (87) ಮತ್ತು ಅಜಿಂಕ್ಯ ರಹಾನೆ (62) 132 ರನ್‌ ಜತೆಯಾಟದ ಮೂಲಕ ಕೆರಿಬಿಯನ್ನರ ಬೌಲಿಂಗ್‌ ದಾಳಿಯನ್ನು ಪುಡಿಗುಟ್ಟಿದ್ದರು.

ರವಿವಾರ “ಕ್ವೀನ್ಸ್‌ ಪಾರ್ಕ್‌ ಓವಲ್‌’ನಲ್ಲೇ ನಡೆದ ದ್ವಿತೀಯ ಪಂದ್ಯಕ್ಕೆ ಮತ್ತೆ ಮಳೆ ಕಾಡಿತಾದರೂ 43 ಓವರ್‌ಗಳ ಆಟಕ್ಕೆ ಯಾವುದೇ ತೊಂದರೆ ಎದುರಾಗಲಿಲ್ಲ. ಭಾರತ ಈ ಪಂದ್ಯವನ್ನು 105 ರನ್ನುಗಳ ದೊಡ್ಡ ಅಂತರದಿಂದಲೇ ಜಯಿಸಿತು. ಶಿಖರ್‌ ಧವನ್‌-ಅಜಿಂಕ್ಯ ರಹಾನೆ ಮತ್ತೂಮ್ಮೆ ಶತಕದ ಜತೆಯಾಟ ನಡೆಸಿ ಮೆರೆದದ್ದು (114), ರಹಾನೆ ಶತಕ ಸಿಡಿಸಿದ್ದು (103), ಧವನ್‌ ಉಜ್ವಲ ಫಾರ್ಮ್ ಪುನರಾವರ್ತಿಸಿದ್ದು (63), ಕ್ಯಾಪ್ಟನ್‌ ಕೊಹ್ಲಿ ಸಿಡಿದು ನಿಂತದ್ದೆಲ್ಲ (87) ಈ ಪಂದ್ಯದ ವಿಶೇಷಗಳಾಗಿದ್ದವು. ಏಕದಿನ ಇತಿಹಾಸದಲ್ಲಿ ಸರ್ವಾಧಿಕ 96 ಸಲ “300 ಪ್ಲಸ್‌’ ರನ್‌ ಪೇರಿಸಿದ ದಾಖಲೆಯೂ ಭಾರತದ್ದಾಗಿತ್ತು.

ಘಾತಕ ಬೌಲಿಂಗ್‌ ದಾಳಿಯ ಮೂಲಕವೂ ಭಾರತ ವಿಂಡೀಸಿಗೆ ಭೀತಿ ಮೂಡಿಸಿತು. 43 ಓವರ್‌ಗಳಲ್ಲಿ 311 ರನ್‌ ತೆಗೆಯುವ ಕಠಿನ ಸವಾಲು ಪಡೆದ ಹೋಲ್ಡರ್‌ ಪಡೆ 6ಕ್ಕೆ 205 ರನ್‌ ಮಾತ್ರ ಗಳಿಸಿ ಶರಣಾಯಿತು. ಒಟ್ಟಾರೆ ಕ್ರಿಕೆಟಿನ ಎಲ್ಲ ವಿಭಾಗಗಳಲ್ಲೂ ಭಾರತ ಆತಿಥೇಯ ವಿಂಡೀಸನ್ನು ಮೀರಿಸಿದೆ. ಈ ಮೇಲುಗೈ ನಾರ್ತ್‌ಸೌಂಡ್‌ನ‌ಲ್ಲೂ ಉಳಿಯುವ ಬಗ್ಗೆ ಅನುಮಾನ ಉಳಿದಿಲ್ಲ.

ಮಧ್ಯಮ ಕ್ರಮಾಂಕದತ್ತ ಗಮನ
ಸದ್ಯ ಟೀಮ್‌ ಇಂಡಿಯಾ ಗಮನವನ್ನು ಕೇಂದ್ರೀಕರಿಸಬೇಕಾದದ್ದು ಮಧ್ಯಮ ಸರದಿಯ ಬ್ಯಾಟಿಂಗ್‌ ಮೇಲೆ. ಅಗ್ರ ಕ್ರಮಾಂಕದಲ್ಲಿ ಧಾರಾಳ ರನ್‌ ಹರಿದು ಬರುತ್ತಿರುವುದರಿಂದ ಹಾಗೂ ಇವರೇ ಬಹುತೇಕ ಅವಧಿಯನ್ನು ಕ್ರೀಸಿನಲ್ಲಿ ಕಳೆಯುವುದರಿಂದ ಭಾರತದ “ಮಿಡ್ಲ್ ಆರ್ಡರ್‌ ಬ್ಯಾಟಿಂಗ್‌’ ಆಳದ ಪರಿಚಯ ಇನ್ನೂ ಆಗಿಲ್ಲ. ಅಕಸ್ಮಾತ್‌ “ಟಾಪ್‌ ಆರ್ಡರ್‌’ನಲ್ಲಿ ಕುಸಿತ ಸಂಭವಿಸಿದರೆ ಆಗ ನಡು ಸರದಿಯ ಆಟಗಾರರು ಯಾವ ರೀತಿಯಲ್ಲಿ ತಂಡವನ್ನು ಆಧರಿಸಬಲ್ಲರು ಎಂಬುದನ್ನು ಅರಿಯಬೇಕಿದೆ. ಅಥವಾ ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಯುವರಾಜ್‌ ಸಿಂಗ್‌ ಅವರ ಬ್ಯಾಟ್‌ ಮಾತಾಡೀತೇ ಎಂಬ ಪ್ರಶ್ನೆಗೆ ಉತ್ತರ ಲಭಿಸಬೇಕಿದೆ. ಮೊದಲೆರಡು ಪಂದ್ಯಗಳಲ್ಲಿ ಯುವಿ ಗಳಿಕೆ 4 ಮತ್ತು 14 ರನ್‌ ಮಾತ್ರ.

Advertisement

ಭಾರತದ ಬೌಲರ್‌ಗಳು ಕೆರಿಬಿಯನ್ನರನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡದ್ದು ದ್ವಿತೀಯ ಪಂದ್ಯದ ವೇಳೆ ಸಾಬೀತಾಗಿತ್ತು. ಅದರಲ್ಲೂ ಮೊದಲ ಸಲ ಏಕದಿನದಲ್ಲಿ ಬೌಲಿಂಗ್‌ ನಡೆಸಿದ ಕುಲದೀಪ್‌ ಯಾದವ್‌ (50ಕ್ಕೆ 3), ಭುನವೇಶ್ವರ್‌ ಕುಮಾರ್‌ (9ಕ್ಕೆ 2) ಹೆಚ್ಚು ಘಾತಕವಾಗಿದ್ದರು. ಪಾಂಡ್ಯ ವಿಕೆಟ್‌ ಕೀಳದೇ ಹೋದರೂ 9 ಓವರ್‌ಗಳಲ್ಲಿ ಕೇವಲ 32 ರನ್‌ ನೀಡಿ ಮಿತವ್ಯಯ ಸಾಧಿಸಿದ್ದರು.

ಭರವಸೆ ಮೂಡಿಸೀತೇ ವಿಂಡೀಸ್‌?
ಸ್ಟಾರ್‌ ಆಟಗಾರರ ಸೇವೆಯಿಂದ ವಂಚಿತವಾಗಿರುವ ವೆಸ್ಟ್‌ ಇಂಡೀಸ್‌, ತನ್ನ ತಂಡದಲ್ಲಿ 2 ಬದಲಾವಣೆಯನ್ನೇನೋ ಮಾಡಿಕೊಂಡಿದೆ. ಆದರೆ ತಂಡವನ್ನು ಸೇರಿಕೊಂಡ ಕೈಲ್‌ ಹೋಪ್‌, ಸುನಿಲ್‌ ಆಂಬ್ರಿಸ್‌ ಈವರೆಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದವರಲ್ಲ. ಇವರಲ್ಲಿ ಕೈಲ್‌ ಹೋಪ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಅವಳಿ “ಹೋಪ್‌’ ವಿಂಡೀಸ್‌ ಪಾಲಿಗೆ ಹೊಸ ಭರವಸೆ ಮೂಡಿಸಬಲ್ಲರೇ ಎಂಬುದೊಂದು ಪ್ರಶ್ನೆ.

ಉಳಿದಂತೆ ವೆಸ್ಟ್‌ ಇಂಡೀಸ್‌ ತಂಡದ ಕುರಿತು ವಿಶೇಷವಾಗಿ ಹೇಳುವಂಥದ್ದೇನೂ ಇಲ್ಲ. ಈ ಪಂದ್ಯವನ್ನು ಗೆದ್ದು ಸಮಬಲ ಸಾಧಿಸಿದರಷ್ಟೇ ಕೆರಿಬಿಯನ್ನರ ಮೇಲೆ ನಿರೀಕ್ಷೆ ಇರಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next