ಕ್ಯಾಂಡಿ : ಆತಿಥೇಯ ಲಂಕಾ ವಿರುದ್ಧ ಇಲ್ಲಿನ ಪಲ್ಲೇಕಳೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಕೇವಲ 3ನೇ ದಿನದಾಟದಲ್ಲೇ ಪ್ರವಾಸೀ ಭಾರತ ತಂಡ ಇನ್ನಿಂಗ್ಸ್ ಹಾಗೂ 171ರನ್‌ಗಳಿಂದ ಭರ್ಜರಿಯಾಗಿ ಜಯಿಸುವ ಮೂಲಕ ಸಾಗರೋತ್ತರ ಕ್ರಿಕೆಟ್ ಸರಣಿಯೊಂದನ್ನು ಪೂರ್ತಿ ವೈಟ್ ವಾಶ್ ಮೂಲಕ ಗೆದ್ದ ಚೊಚ್ಚಲ ಐತಿಹಾಸಿಕ ಸಾಧನೆಯನ್ನು ದಾಖಲಿಸಿದೆ.
ಈ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ಭಾರತ ಅದಾಗಲೇ ಸರಣಿಯನ್ನು ಜಯಿಸಿತ್ತು. ಇಂದು ಮೂರನೇ ದಿನದಾಟದಂದು 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ಸರಣಿಯ ಐತಿಹಾಸಿಕ ಕ್ಲೀನ್ ಸ್ವೀಪ್ ಸಾಧಿಸಿತು.
ಈ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 487 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು.
ಇದಕ್ಕೆ ಉತ್ತರವಾಗಿ ಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 37.4 ಓವರ್‌ಗಳ ಆಟವಾಗಿ 135 ರನ್‌ಗಳಿಗೆ ಆಲೌಟಾಗಿ ಫಾಲೋ ಆನ್ ಪಡೆದುಕೊಂಡಿತ್ತು.
ಲಂಕೆಯ ಎರಡನೇ ಇನ್ನಿಂಗ್ಸ್ ಆಟ 74.3 ಓವರ್‌ಗಳಲ್ಲಿ 181 ರನ್‌ಗಳಿಗೆ ಆಲೌಟಾಗಿ ಇನ್ನಿಂಗ್ಸ್ ಹಾಗೂ 171 ರನ್‌ಗಳ ಭರ್ಜರಿ ವಿಜಯವನ್ನು ಸಾಧಿಸಿತು.
ಲಂಕೆಯ ಎರಡನೇ ಇನ್ನಿಂಗ್ಸ್ ಆಟದಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 68 ರನ್ ವೆಚ್ಚಕ್ಕೆ ನಾಲ್ಕು ವಿಕೆಟ್ ಕಿತ್ತು ಭಾರತದ ಕ್ಷಿಪ್ತ ವಿಜಯಕ್ಕೆ ಕಾರಣರಾದರು. ಮೊಹಮ್ಮದ್ ಶಮೀ 32 ರನ್‌ಗೆ 3 ವಿಕೆಟ್ ಕಿತ್ತು ಮಿಂಚಿದರು. ಉಮೇಶ್ ಯಾದವ್‌ಗೆ 2 ವಿಕೆಟ್ ಮತ್ತು ಕುಲ್‌ದೀಪ್ ಯಾದವ್‌ಗೆ 1 ವಿಕೆಟ್ ಪ್ರಾಪ್ತವಾಯಿತು.