Advertisement
ಅಂದಹಾಗೆ ಭಾರತಕ್ಕಿದು ಈ ವರ್ಷದ ಕೊನೆಯ ಅಂತಾರಾಷ್ಟ್ರೀಯ ಪಂದ್ಯ. ಗೆಲುವಿನ ಸರಮಾಲೆಯನ್ನೇ ಪೋಣಿಸುತ್ತ ಬಂದ ಟೀಮ್ ಇಂಡಿಯಾ, ಮತ್ತೂಂದು ಜಯದೊಂದಿಗೆ 2017ಕ್ಕೆ ಶುಭವಿದಾಯ ಹೇಳುವುದರಲ್ಲಿ ಹೆಚ್ಚಿನ ಸಂತಸ ಅಡಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊಹ್ಲಿ ಪಡೆಯ ಹೊಸ ವರ್ಷಾಚರಣೆಗೆ ಇದು ಸ್ಫೂರ್ತಿಯಾಗಲಿದೆ.
ವಾಂಖೇಡೆ ಟಿ20 ದಾಖಲೆಗಳನ್ನು ಗಮನಿಸುವುದಾದರೆ ಭಾರತಕ್ಕೆ ಇಲ್ಲಿ ನಿರಾಸೆಯೇ ಗತಿಯಾಗಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಸೋತಿದೆ. 2012ರಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗಳಿಂದ ಸೋತ ಭಾರತ, ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಅಂತರದಿಂದ ಎಡವಿತ್ತು. ದಕ್ಷಿಣ ಆಫ್ರಿಕಾ, ಅಫ್ಘಾನಿಸ್ಥಾನ ಕೂಡ ಇಲ್ಲಿ ಪಂದ್ಯಗಳನ್ನಾಡಿವೆ. ಶ್ರೀಲಂಕಾ ವಾಂಖೇಡೆಯಲ್ಲಿ ಆಡುತ್ತಿರುವುದು ಇದೇ ಮೊದಲು.
Related Articles
ಭಾರತದ ಎರಡೂ ಗೆಲುವುಗಳಿಗೆ ಮುಖ್ಯ ಕಾರಣ ಬ್ಯಾಟಿಂಗ್ ವೈಭವ. ಮೊದಲು ಬ್ಯಾಟಿಂಗ್ ನಡೆಸಿ 3ಕ್ಕೆ 180 ಹಾಗೂ 5ಕ್ಕೆ 260 ರನ್ ಸೂರೆಗೈದ ರೋಹಿತ್ ಪಡೆ ಲಂಕೆಗೆ ಭಾರೀ ಸವಾಲನ್ನೇ ನೀಡಿತು. ಬಹುಶಃ ಲಂಕಾ ಕೂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರೆ ದೊಡ್ಡ ಮೊತ್ತ ಪೇರಿಸುತ್ತಿತ್ತೋ ಏನೋ. ಶುಕ್ರವಾರ ಇಂದೋರ್‌ನಲ್ಲಿ ಶ್ರೀಲಂಕಾ 10-12ರ ಸರಾಸರಿಯಲ್ಲಿ ರನ್ ಪೇರಿಸಿದ್ದನ್ನು ಕಡೆಗಣಿಸುವಂತಿಲ್ಲ. 13 ಓವರ್ ವೇಳೆ ಲಂಕಾ ಒಂದಕ್ಕೆ 145 ರನ್ ಪೇರಿಸಿ ಮುನ್ನುಗ್ಗುತ್ತಿತ್ತು. ಹೀಗಾಗಿ ಮುಂಬಯಿಯಲ್ಲಿ ಶ್ರೀಲಂಕಾ ಮೊದಲು ಬ್ಯಾಟಿಂಗ್ ನಡೆಸಿ, ಭಾರತ ಚೇಸಿಂಗ್ ಮಾಡಿದರೆ ಹೇಗಿದ್ದೀತು ಎಂಬ ಕುತೂಹಲ ಸಹಜ.
Advertisement
ಕೇವಲ 35 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಡೇವಿಡ್ ಮಿಲ್ಲರ್ ಅವರ ವಿಶ್ವದಾಖಲೆಯನ್ನು ಸರಿದೂಗಿಸಿದ ರೋಹಿತ್ ಶರ್ಮ, ಊರಿನಂಗಳದಲ್ಲಿ ಇದೇ ಜೋಶ್ ತೋರ್ಪಡಿಸುವುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜತೆಗಾರ ಕೆ.ಎಲ್. ರಾಹುಲ್ ಎರಡೂ ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿ ಫಾರ್ಮ್ ತೆರೆದಿರಿಸಿದ್ದಾರೆ. ರೋಹಿತ್ ಅವರಂತೆ ಶ್ರೇಯಸ್ ಅಯ್ಯರ್ ಪಾಲಿಗೂ ಇದು ಹೋಮ್ ಗ್ರೌಂಡ್. ಇಂದೋರಿನ ಶೂನ್ಯವನ್ನು ಮರೆಸುವಂಥ ಸಾಧನೆಯನ್ನು ಅವರು ದಾಖಲಿಸಬೇಕಿದೆ. ಧೋನಿ, ಪಾಂಡೆ, ಪಾಂಡ್ಯ ಕೂಡ ಲಂಕಾ ಬೌಲಿಂಗಿಗೆ ಸಿಂಹಸ್ವಪ್ನವೇ ಸರಿ.
ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳಿಗೆ ರಿಸ್ಟ್ ಸ್ಪಿನ್ನರ್‌ಗಳಾದ ಚಾಹಲ್-ಕುಲದೀಪ್ ಜೋಡಿಯನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ. ಅದರಲ್ಲೂ ಚಾಹಲ್ ಅವರಂತೂ ಸತತ 2 ಟಿ20 ಪಂದ್ಯಗಳಲ್ಲಿ 4 ವಿಕೆಟ್ ಕಿತ್ತ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಯೊಂದಿಗೆ ಪ್ರವಾಸಿಗರನ್ನು ಪರದಾಡುವಂತೆ ಮಾಡಿದ್ದಾರೆ.
ಆದರೆ ಇಲ್ಲೊಂದು ಸಂಗತಿ ಇದೆ. ಈಗಾಗಲೇ ಸರಣಿ ಗೆದ್ದಿರುವುದರಿಂದ ಅಂತಿಮ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳು ಗೋಚರಿಸಬಹುದು. ಬಾಸಿಲ್ ಥಂಪಿ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ಅವರಲ್ಲಿ ಕೆಲವರಿಗಾದರೂ ಅವಕಾಶ ಸಿಗುವ ಸಾಧ್ಯತೆ ಇದೆ.
ಏಂಜೆಲೊ ಮ್ಯಾಥ್ಯೂಸ್ ಗೈರುಇತ್ತ ಲಂಕೆಗೆ ಎದುರಾಗಿರುವ ದೊಡ್ಡ ಹೊಡೆತವೆಂದರೆ ಅನುಭವಿ ಏಂಜೆಲೊ ಮ್ಯಾಥ್ಯೂಸ್ ಗಾಯಾಳಾಗಿ ಹೊರಬಿದ್ದಿರುವುದು. ಇಂದೋರ್ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಸಿಲುಕಿದ ಮ್ಯಾಥ್ಯೂಸ್ ಬ್ಯಾಟಿಂಗಿಗೆ ಇಳಿದಿರಲಿಲ್ಲ. ಅವರಿಗೆ 15 ದಿನಗಳ ವಿಶ್ರಾಂತಿ ಸೂಚಿಸಲಾಗಿದೆ. ಲಂಕೆಯ ಬೌಲಿಂಗ್ ಬಗ್ಗೆ ಏನೂ ಹೇಳದಿರುವುದೇ ಲೇಸು. ಭಾರತದ ಸ್ಫೋಟಕ ಆಟಕ್ಕೆ ಅದು ಚಿಂದಿಯಾಗಿದೆ. ಯಾರ ಬೌಲಿಂಗ್ ಕೂಡ ಪರಿಣಾಮ ಬೀರುತ್ತಿಲ್ಲ. ವಾಂಖೇಡೆ ಟ್ರ್ಯಾಕ್ ಕೂಡ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುವ ಲಕ್ಷಣವಿದೆ. ಇಲ್ಲಿ 190 ರನ್ ಹರಿದು ಬಂದ ನಿದರ್ಶನವಿದೆ. ಹೀಗಾಗಿ ಮತ್ತೂಮ್ಮೆ ಬೌಂಡರಿ-ಸಿಕ್ಸರ್‌ಗಳ ಸುರಿಮಳೆಯನ್ನು ನಿರೀಕ್ಷಿಸಲಡ್ಡಿಯಿಲ್ಲ. ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮಹೇಂದ್ರ ಸಿಂಗ್ ಧೋನಿ, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್/ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಜೈದೇವ್ ಉನಾದ್ಕತ್/ಬಾಸಿಲ್ ಥಂಪಿ, ಜಸ್‌ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್. ಶ್ರೀಲಂಕಾ: ನಿರೋಷನ್ ಡಿಕ್ವೆಲ್ಲ, ಉಪುಲ್ ತರಂಗ, ಕುಸಲ್ ಪೆರೆರ, ದನುಷ್ಕ ಗುಣತಿಲಕ/ಏಂಜೆಲೊ ಮ್ಯಾಥ್ಯೂಸ್, ತಿಸರ ಪೆರೆರ, ಅಸೇಲ ಗುಣರತ್ನೆ, ಸದೀರ ಸಮರವಿಕ್ರಮ, ಚತುರಂಗ ಡಿ’ಸಿಲ್ವ, ಅಖೀಲ ಧನಂಜಯ, ದುಷ್ಮಂತ ಚಮೀರ, ನುವಾನ್ ಪ್ರದೀಪ್.
ಆರಂಭ: ಸಂಜೆ 7.00
ಪ್ರಸಾರ: ಸ್ಟಾರ್ ನ್ಪೋರ್ಟ್ಸ್