ಜೊಹಾನ್ಸ್‌ಬರ್ಗ್: ಗೆಲುವಿನ ಹ್ಯಾಟ್ರಿಕ್‌ನೊಂದಿಗೆ ಭಾನುವಾರವೇ ಟಿ20 ಸರಣಿ ವಶಪಡಿಸಿಕೊಳ್ಳಲು ಸ್ಕೆಚ್ ಹಾಕಿದ್ದ ಭಾರತದ ಮಹಿಳಾ ತಂಡಕ್ಕೆ ಸೋಲಿನ ಬಿಸಿ ತಟ್ಟಿದೆ.
ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ 3ನೇ ಮುಖಾಮುಖೀಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಜಯ ಸಾಧಿಸಿ ಸರಣಿಯನ್ನು ಜೀವಂತವಾಗಿರಿಸಿದೆ.
ಮೊದಲೆರಡು ಪಂದ್ಯಗಳನ್ನು ಚೇಸಿಂಗ್ ಮಾಡಿ ಅಧಿಕಾರಯುತವಾಗಿ ಗೆದ್ದ ಭಾರತಕ್ಕೆ, 3ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿಯೂ ದೊಡ್ಡ ಮೊತ್ತ ಪೇರಿಸಲಾಗಲಿಲ್ಲ. 17.5 ಓವರ್‌ಗಳಲ್ಲಿ 133ಕ್ಕೆ ಆಲೌಟ್ ಆಯಿತು. ಇದನ್ನು ಬೆನ್ನಟ್ಟಿಕೊಂಡು ಹೋದ ದಕ್ಷಿಣ ಆಫ್ರಿಕಾ 19 ಓವರ್‌ಗಳಲ್ಲಿ 5 ವಿಕೆಟಿಗೆ 134 ರನ್ ಮಾಡಿ ಗೆಲುವಿನ ಖಾತೆ ತೆರೆಯಿತು. ಸರಣಿಯ 4ನೇ ಪಂದ್ಯ ಫೆ. 21ರಂದು ಸೆಂಚುರಿಯನ್‌ನಲ್ಲಿ ನಡೆಯಲಿದೆ.
5 ವಿಕೆಟ್ ಕಿತ್ತ ಇಸ್ಮಾಯಿಲ್ : ಮಧ್ಯಮ ವೇಗಿ ಇಸ್ಮಾಯಿಲ್ ಭಾರತದ ಬೃಹತ್ ಮೊತ್ತದ ಯೋಜನೆಗೆ ಭಾರೀ ಬ್ರೇಕ್ ಹಾಕಿದರು.
ಇಸ್ಮಾಯಿಲ್ ಸಾಧನೆ 30 ರನ್ನಿಗೆ 5 ವಿಕೆಟ್. ಇದು ಅವರ ಜೀವನಶ್ರೇಷ್ಠ ಬೌಲಿಂಗ್. ಮಿಥಾಲಿ ರಾಜ್ (0) ಅವರನ್ನು ಮೊದಲ ಓವರಿನಲ್ಲೇ ಉರುಳಿಸಿದ ಮಸಬಟ ಕ್ಲಾಸ್ ಭಾರತದ ಕುಸಿತಕ್ಕೆ ಚಾಲನೆ ನೀಡಿದರು. ಕ್ಲಾಸ್ ಸಾಧನೆ 20ಕ್ಕೆ 2 ವಿಕೆಟ್.
ಹರ್ಮನ್ ಹೋರಾಟ ವ್ಯರ್ಥ: ಭಾರತದ ಸರದಿಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಸರ್ವಾಧಿಕ 48 ರನ್ ಹೊಡೆದರು. ಎರಡಂಕೆಯ ಮೊತ್ತ ದಾಖಲಿಸಿದ ಉಳಿದಿಬ್ಬರೆಂದರೆ ಸ್ಮತಿ ಮಂಧನಾ (37 ರನ್) ಮತ್ತು ವೇದಾ ಕೃಷ್ಣಮೂರ್ತಿ (23 ರನ್). ಭಾರತದ ಕೊನೆಯ 6 ವಿಕೆಟ್ 39 ರನ್ ಅಂತರದಲ್ಲಿ ಉರುಳಿ ಹೋಯಿತು. ಚೇಸಿಂಗ್ ವೇಳೆ ದಕ್ಷಿಣ ಆಫ್ರಿಕಾ ಕೂಡ ಆರಂಭಿಕ ಆಘಾತಕ್ಕೆ ಸಿಲುಕಿತು. ಆದರೆ ನಾಯಕಿ ಡೇನ್ ವಾನ್ ನೀಕರ್ಕ್ (26 ರನ್), ಸುನೆ ಲುಸ್ (41 ರನ್), ಕ್ಲೊ ಟ್ರಯಾನ್ (34 ರನ್), ಡು ಪ್ರೀಝ್ (20 ರನ್) ಸೇರಿಕೊಂಡು ತಂಡವನ್ನು ಸುರಕ್ಷಿತವಾಗಿ ದಡ ಮುಟ್ಟಿಸಿದರು.
ಭಾರತದ ಪರ ಪೂಜಾ ವಸ್ತ್ರಾಕರ್ 2 ವಿಕೆಟ್ ಕಿತ್ತರೆ, ರಾಜೇಶ್ವರಿ ಗಾಯಕ್ವಾಡ್, ಅನುಜಾ ಪಾಟೀಲ್ ಮತ್ತು ಪೂನಂ ಯಾದವ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಭಾರತ 17.5 ಓವರ್‌ಗಳಲ್ಲಿ 133 (ಹರ್ಮನ್‌ಪ್ರೀತ್ 48, ಮಂಧನಾ 37, ವೇದಾ 23, ಶಬಿ°ಂ 30ಕ್ಕೆ 5), ದಕ್ಷಿಣ ಆಫ್ರಿಕಾ 19 ಓವರ್‌ಗಳಲ್ಲಿ 134 /5(ಲುಸ್ 41, ಟ್ರಯಾನ್ 34, ವಸ್ತ್ರಾಕರ್ 21ಕ್ಕೆ 2).ಪಂದ್ಯಶ್ರೇಷ್ಠ: ಇಸ್ಮಾಯಿಲ್