Advertisement

ಭಾರತದ ಮೀಸಲು ಪಡೆಗೆ ಹರಿಣಗಳ ಸವಾಲು; ಇಂದಿನಿಂದ ಏಕದಿನ ಸರಣಿ

08:34 AM Oct 06, 2022 | Team Udayavani |

ಲಕ್ನೊ: ಭಾರತ-ದಕ್ಷಿಣ ಆಫ್ರಿಕಾ ತಂಡಗಳ ಟಿ20 ಹೋರಾಟ ಕೊನೆಗೊಂಡಿದ್ದು, ಗುರುವಾರ ಏಕದಿನ ಸರಣಿಗೆ ಚಾಲನೆ ಲಭಿಸಲಿದೆ. ಇದು ಕೂಡ 3 ಪಂದ್ಯಗಳ ಮುಖಾಮುಖಿಯಾಗಿದ್ದು, ಮೊದಲ ಕದನದ ತಾಣ ಲಕ್ನೋದ “ಭಾರತ ರತ್ನ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಏಕಾನಾ ಸ್ಟೇಡಿಯಂ’.

Advertisement

ಟಿ20 ಸರಣಿ ವಿಜೇತ ಭಾರತ ತಂಡಕ್ಕಿಂತ ಇದು ಸಂಪೂರ್ಣ ಭಿನ್ನ ತಂಡವಾಗಿದ್ದು, ಮೀಸಲು ಆಟಗಾರರನ್ನೇ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. “ಬಿಗ್‌ ಗನ್‌’ಗಳಾದ ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ, ರವಿಚಂದ್ರನ್‌ ಅಶ್ವಿ‌ನ್‌, ಮೊಹಮ್ಮದ್‌ ಶಮಿ, ಆರ್‌. ಅಶ್ವಿ‌ನ್‌, ಹಾರ್ದಿಕ್‌ ಪಾಂಡ್ಯ, ರಿಷಭ್‌ ಪಂತ್‌, ದಿನೇಶ್‌ ಕಾರ್ತಿಕ್‌ ಮೊದಲಾದವರೆಲ್ಲ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಕ್ಕೆ ತೆರಳುವುದರಿಂದ ದ್ವಿತೀಯ ದರ್ಜೆಯ ತಂಡವನ್ನು ಇಲ್ಲಿ ಕಣಕ್ಕಿಳಿಲಾಗುತ್ತಿದೆ. ಭಾರತೀಯ ಕ್ರಿಕೆಟಿನ ಮೀಸಲು ಸಾಮರ್ಥ್ಯ ಪರೀಕ್ಷೆಗೆ ಇದೊಂದು ವೇದಿಕೆ.

ಎಡಗೈ ಆರಂಭಕಾರ ಶಿಖರ್‌ ಧವನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಸೀಮರ್‌ ಮುಕೇಶ್‌ ಕುಮಾರ್‌ ಮತ್ತು ಡ್ಯಾಶಿಂಗ್‌ ಬ್ಯಾಟರ್‌ ಈ ತಂಡದ ಹೊಸಬರು. ಟಿ20 ವಿಶ್ವಕಪ್‌ ಮೀಸಲು ಆಟಗಾರರಾಗಿರುವ ಲೆಗ್‌ಸ್ಪಿನ್ನರ್‌ ದೀಪಕ್‌ ಚಹರ್‌, ರವಿ ಬಿಷ್ಣೋಯಿ ಕೂಡ ತಂಡದಲ್ಲಿದ್ದಾರೆ. ಇವರು ಸರಣಿ ಮುಗಿಸಿ ಆಸ್ಟ್ರೇಲಿಯಕ್ಕೆ ವಿಮಾನ ಏರುವರು.

ಸೀನಿಯರ್‌ಗಳ ಅನುಪಸ್ಥಿತಿಯಲ್ಲಿ ಅವಕಾಶ ವನ್ನು ಬಳಸಿಕೊಳ್ಳಲು ಸಿದ್ಧರಾಗಿರುವವರೆಂದರೆ ಶುಭಮನ್‌ ಗಿಲ್‌, ಋತುರಾಜ್‌ ಗಾಯಕ್ವಾಡ್‌, ರಾಹುಲ್‌ ತ್ರಿಪಾಠಿ, ಶಾಬಾಜ್‌ ಅಹ್ಮದ್‌, ಶಾರ್ದೂಲ್ ಠಾಕೂರ್, ಆವೇಶ್‌ ಖಾನ್‌, ದೀಪಕ್‌ ಚಹರ್‌ ಮೊದಲಾದವರು. ಇವರ ಜತೆಯಲ್ಲೇ ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌, ಕುಲದೀಪ್‌ ಯಾದವ್‌, ದೀಪಕ್‌ ಚಹರ್‌, ಮೊಹಮ್ಮದ್‌ ಸಿರಾಜ್‌ ಕೂಡ ಇದ್ದಾರೆ. ಮುಂದಿನ ವರ್ಷದ ಏಕದಿನ ವಿಶ್ವಕಪ್‌ಗೆ ತಂಡವನ್ನು ಕಟ್ಟುವ ಸಲುವಾಗಿ ಇವರೆಲ್ಲರಿಗೂ ಇದೊಂದು ಉತ್ತಮ ವೇದಿಕೆ ಎಂಬುದರಲ್ಲಿ ಎರಡು ಮಾತಿಲ್ಲ.

ಇವರಲ್ಲಿ 6 ಮಂದಿ ಇನ್ನೂ ಏಕದಿನ ಅಂತಾ ರಾಷ್ಟ್ರೀಯ ಪಂದ್ಯ ಆಡಿಲ್ಲ ಎಂಬುದನ್ನು ಗಮನಿಸ ಬೇಕು. ಲಕ್ನೋದಲ್ಲಿ ತ್ರಿಪಾಠಿ ಅಥವಾ ಪಾಟೀದಾರ್‌ “ಒನ್‌ಡೇ ಕ್ಯಾಪ್‌’ ಧರಿಸ ಬಹುದು. ಧವನ್‌ ಜತೆಗೆ ಗಿಲ್‌ ಇನ್ನಿಂಗ್ಸ್‌ ಆರಂಭಿಸುವುದು ಬಹುತೇಕ ಖಾತ್ರಿ. ಕೀಪಿಂಗ್‌ ರೇಸ್‌ನಲ್ಲಿ ಇಬ್ಬರಿದ್ದಾರೆ-ಸಂಜು ಸ್ಯಾಮ್ಸನ್‌ ಮತ್ತು ಇಶಾನ್‌ ಕಿಶನ್‌.

Advertisement

ದ. ಆಫ್ರಿಕಾ ಅಪಾಯಕಾರಿ
ಆದರೆ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಆಕ್ರಮಣಕ್ಕೆ ಕಡಿವಾಣ ಹಾಕಲು, ಅವರ ಬೌಲಿಂಗ್‌ ದಾಳಿಯನ್ನು ತಡೆದು ನಿಲ್ಲಲು ಇವರಲ್ಲಿ ಎಷ್ಟು ಮಂದಿ ಯಶಸ್ವಿಯಾಗಬಲ್ಲರು ಎಂಬುದು ಇಲ್ಲಿನ ಪ್ರಶ್ನೆ. ಏಕೆಂದರೆ, ಟಿ20ಯಲ್ಲಿ ಅಬ್ಬರಿಸಿದ ಹರಿಣಗಳ ಪಡೆಯ ಬಹುತೇಕ ಸದಸ್ಯರು ಏಕದಿನದಲ್ಲೂ ಕಣಕ್ಕಿಳಿಯಲಿದ್ದಾರೆ. ಡಿ ಕಾಕ್‌, ಮಿಲ್ಲರ್‌, ರೋಸ್ಯೂ ಸೇರಿಕೊಂಡು ಯಾವ ರೀತಿಯಲ್ಲಿ ಭಾರತದ ಬೌಲರ್‌ಗಳನ್ನು ಬೆಂಡೆತ್ತಿದರೆಂಬುದು ಗೊತ್ತೇ ಇದೆ. ಭಾರತದ ಪೂರ್ಣ ಸಾಮರ್ಥ್ಯದ ಬೌಲಿಂಗ್‌ ದಾಳಿಗೆ ದಿಟ್ಟ ಉತ್ತರ ನೀಡಿದ ಇವರೆಲ್ಲ ದ್ವಿತೀಯ ದರ್ಜೆಯ ಬೌಲರ್‌ಗಳನ್ನು ಬಿಟ್ಟಾರೆಯೇ ಎಂಬುದು ಆತಂಕಕ್ಕೆ ಕಾರಣ. ಮೊದಲ ಟಿ20 ಪಂದ್ಯದ ಬ್ಯಾಟಿಂಗ್‌ ವೈಫ‌ಲ್ಯದ ಬಳಿಕ ದಕ್ಷಿಣ ಆಫ್ರಿಕಾ ಅಮೋಘ ಚೇತರಿಕೆ ಕಂಡಿದೆ.

ಇಂದೋರ್‌ ಶತಕವೀರ ರಿಲೀ ರೋಸ್ಯೂ ಏಕದಿನ ತಂಡದಲ್ಲಿಲ್ಲ. ಆದರೆ ರೀಝ ಹೆಂಡ್ರಿಕ್ಸ್‌, ಜಾನೆಮನ್‌ ಮಲಾನ್‌ ಅಪಾಯಕಾರಿ ಆಗಬಲ್ಲರು. ಎನ್‌ಗಿಡಿ, ನೋರ್ಜೆ, ಪಾರ್ನೆಲ್‌, ಪ್ರಿಟೋರಿಯಸ್‌ ಬೌಲಿಂಗ್‌ ದಾಳಿಗೆ ಅಣಿಯಾಗಿ ದ್ದಾರೆ. ಭಾರತ ಮೇಲುಗೈ ಸಾಧಿಸಬೇಕಾದರೆ ಇವರ ಎಸೆತಗಳನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ ರನ್‌ ಪೇರಿಸುವುದು ಅತ್ಯಗತ್ಯ.

-ಆರಂಭ: 1.30
-ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

 

Advertisement

Udayavani is now on Telegram. Click here to join our channel and stay updated with the latest news.

Next