Advertisement
ಮುಂದಿನ ಮಾರ್ಗ ಮುಚ್ಚಲೂಬಹುದು!ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಅನುಭವಿಸಿದ ಮೊದಲ ಸೋಲಿನಿಂದ ಭಾರತ ತಂಡದ ಮನೋಸ್ಥೈರ್ಯ ಕುಗ್ಗಿರುವುದು ಸುಳ್ಳಲ್ಲ. ಆದರೆ ಈ ಆಘಾತದಿಂದ ಚೇತರಿಸಿಕೊಳ್ಳಲು, ಮುಂದಿನ ಹಂತದ ಕಾರ್ಯ ಯೋಜನೆಯನ್ನು ರೂಪಿಸಲು, ಸೂಕ್ತ ರಣತಂತ್ರ ಹೆಣೆಯಲು ಒಂದು ವಾರದಷ್ಟು ಧಾರಾಳ ಅವಧಿ ಲಭಿಸಿದೆ. ಇಲ್ಲಿಂದ ಗೆಲುವಿನ ಅಭಿಯಾನ ಆರಂಭಿಸಿ, ಉಳಿದೆಲ್ಲ ಪಂದ್ಯಗಳನ್ನು ಗೆಲ್ಲುತ್ತ ಹೋದರೆ ಕೊಹ್ಲಿ ಪಡೆಯ ಹಾದಿ ನೇರವಾಗಿ ನಾಕೌಟ್‌ಗೆ ತಲುಪುತ್ತದೆಂಬುದು ಸರಳ ಲೆಕ್ಕಾಚಾರ. ಭಾರತ ತಂಡದ ಮುಂದಿರುವ ಆಯ್ಕೆಯೊಂದೇ-ಗೆಲುವು!
ವಿರಾಟ್ ಕೊಹ್ಲಿ ಹೇಳಿದಂತೆ, ಪಾಕಿಸ್ತಾನದ ವಿರುದ್ಧ ಸೋತೊಡನೆ ಭಾರತದ ವಿಶ್ವಕಪ್ ಅಭಿಯಾನವೇನೂ ಅಂತ್ಯಗೊಂಡಿಲ್ಲ. ಆದರೆ ಉಳಿದ ಯಾವುದೇ ಪಂದ್ಯಗಳನ್ನು ಸೋಲಬಾರದು, ಅಷ್ಟೇ. ಆಗ ಬೇರೆ ತಂಡಗಳ ಸೋಲನ್ನು ಹಾರೈಸುವ, ಫಲಿತಾಂಶವನ್ನು ಕಾಯುವ ದರ್ದು ಭಾರತಕ್ಕೆ ಎದುರಾಗದು. ಸದ್ಯ ಭಾರತ-ನ್ಯೂಜಿಲೆಂಡ್ ಒಂದೇ ದೋಣಿಯ ಪಯಣಿಗರು. ಆಡಿದ್ದು ಒಂದೇ ಪಂದ್ಯ. ಎರಡೂ ತಂಡಗಳು ಪಾಕಿಸ್ತಾನ ವಿರುದ್ಧವೇ ಮುಗ್ಗರಿಸಿವೆ. ಅಂಕಪಟ್ಟಿಯಲ್ಲಿ ಭಾರತ ಸ್ಕಾಟ್ಲೆಂಡ್‌ಗಿಂತ ಮೇಲಿದೆ. ಭಾರತಕ್ಕಿಂತ ನ್ಯೂಜಿಲೆಂಡ್ ಒಂದು ಹೆಜ್ಜೆ ಮುಂದಿದೆ.
Related Articles
Advertisement
ಪಾಕಿಸ್ತಾನ ವಿರುದ್ಧ ಭಾರತದ ಓಪನಿಂಗ್ ಘೋರ ವೈಫಲ್ಯ ಕಂಡಿತ್ತು. ಶಾಹೀನ್ ಶಾ ಅಫ್ರಿದಿ ಎಸೆತಗಳಿಗೆ ಉತ್ತರವಿರಲಿಲ್ಲ. ಇಲ್ಲಿ ಬೌಲ್ಟ್, ಸೌದಿ, ಜೇಮಿಸನ್ ಇದ್ದಾರೆ. ರೋಹಿತ್-ರಾಹುಲ್, ಕೊಹ್ಲಿ ಯಶಸ್ಸು ಕಂಡರೆ ಸವಾಲಿನ ಮೊತ್ತ ಸಾಧ್ಯ. ಭಾರತದ ಪರ ನಿಂತು ಆಡುವವರು ಈ ಮೂರು ಮಂದಿ ಮಾತ್ರ. ಅಂದಹಾಗೆ ಟಾಸ್ ಕೂಡ ನಿರ್ಣಾಯಕವಾಗಲಿದೆ.
ಪಟ್ಟುಬಿಡಬಾರದ ಪಂದ್ಯ: ಇದು ಭಾರತಕ್ಕೆ ಹಿಂದಿನ ಸೋಲುಗಳಿಗೆ ಉತ್ತರ ನೀಡುವ ಪಂದ್ಯವಾಗಬೇಕಿದೆ. ಕಳೆದ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಕೊಹ್ಲಿ ಪಡೆಯನ್ನು ಮಗುಚಿತ್ತು. ಅನಂತರದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಆಘಾತಕಾರಿ ಸೋಲುಣಿಸಿತ್ತು. ಇದೀಗ ಟಿ20 ವಿಶ್ವಕಪ್ ಸರದಿ. ಸಿಕ್ಕಿದ ಈ ಅವಕಾಶವನ್ನು ಭಾರತ ತಂಡ ಕೈಚೆಲ್ಲಬಾರದು.
ಭಾರತ-ನ್ಯೂಜಿಲೆಂಡ್ಸ್ಥಳ: ದುಬೈ
ಆರಂಭ: ರಾ.7.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಿಶ್ವಕಪ್ ಮುಖಾಮುಖಿ
ಒಟ್ಟು ಪಂದ್ಯ 02
ಭಾರತ ಜಯ 00
ನ್ಯೂಜಿಲೆಂಡ್ ಜಯ 02