ಪುಣೆ : ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಭಾರತ ಎರಡನೇ ಪಂದ್ಯದಲ್ಲಿಯೂ ಸಂಕಷ್ಟದ ಸುಳಿಗೆ ಸಿಲುಕಿದೆ. ಪಂದ್ಯದ 2 ನೇ ದಿನದಾಟದ ಅಂತ್ಯಕ್ಕೆ (ಶುಕ್ರವಾರ, ಅ25) ನ್ಯೂಜಿಲ್ಯಾಂಡ್ 301 ರನ್ ಗಳ ಮುನ್ನಡೆ ಸಾಧಿಸಿದೆ.
ಮೊದಲ ದಿನ ಮೊದಲ ಇನ್ನಿಂಗ್ಸ್ ನಲ್ಲಿ ತಮಿಳುನಾಡಿನ ಸ್ಪಿನ್ನರ್ ಗಳಾದ ಆರ್.ಅಶ್ವಿನ್, ವಾಷಿಂಗ್ಟನ್ ಸುಂದರ್ ದಾಳಿಗೆ ಸಿಲುಕಿದ ಪ್ರವಾಸಿ ನ್ಯೂಜಿಲ್ಯಾಂಡ್ ತಂಡ ನಲ್ಲಿ 259 ರನ್ನಿಗೆ ಕುಸಿದಿತ್ತು. ಅಶ್ವಿನ್ 64ಕ್ಕೆ 3, ಸುಂದರ್ 59ಕ್ಕೆ 7 ವಿಕೆಟ್ ಉರುಳಿಸಿದ್ದರು.
ಎರಡನೇ ದಿನದಾಟದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್ ನಲ್ಲಿ ಕೇವಲ 156 ರನ್ ಗಳಿಗೆ ಆಲೌಟಾಯಿತು. ಜೈಸ್ವಾಲ್ 30 ರನ್ ಗಳಿಸಿದರೆ, . ಶುಭಮನ್ ಗಿಲ್ 30 ರನ್ ಗಳಿಸರು. ನಾಯಕ ರೋಹಿತ್ ಶರ್ಮ ಶೂನ್ಯಕ್ಕೆ ಔಟಾದರೆ ,ಕೊಹ್ಲಿ 1 ರನ್ ಗೆ ಔಟಾದರು.
ಪಂತ್ 18, ಕಳೆದ ಪಂದ್ಯದಲ್ಲಿ ಅಮೋಘ ಆಟವಾಡಿದ್ದ ಸರ್ಫರಾಜ್ ಖಾನ್ 11 ರನ್ಗಳಿಸಿ ಪೆವಿಲಿಯನ್ ಗೆ ಮರಳಿದರು. ಸ್ವಲ್ಪ ಹೊತ್ತು ನಿಂತ ಜಡೇಜ 38 ರನ್ ಕೊಡುಗೆ ನೀಡಿದರು. ವಾಷಿಂಗ್ಟನ್ ಸುಂದರ್ ಔಟಾಗದೆ 18 ರನ್ ಗಳಿಸಿದರು.
ಬಿಗಿ ದಾಳಿ ನಡೆಸಿದ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 7 ವಿಕೆಟ್ ಕಬಳಿಸಿದರು. ಸರಣಿಯ ಮೊದಲ ಪಂದ್ಯದಲ್ಲಿ ಆಲ್ರೌಂಡರ್ ಸ್ಯಾಂಟ್ನರ್ ಆಡಿರಲಿಲ್ಲ. ಫಿಲಿಪ್ಸ್ 2 ವಿಕೆಟ್ ಕಿತ್ತರೆ, ಸೌಥೀ 1 ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ ನಲ್ಲಿ ಆಡಿದ ನಾಯಕ ಟಾಮ್ ಲ್ಯಾಥಮ್ 86 ರನ್ ಗಳಿಸಿ ಔಟಾದರು. ಕಾನ್ವೇ 17, ವಿಲ್ ಯಂಗ್ 23 , ರಚಿನ್ ರವೀಂದ್ರ 9 , ಡೆರಿಲ್ ಮಿಚೆಲ್ 18 ರನ್ ಗಳಿಸಿ ಔಟಾಗಿದ್ದಾರೆ. 30 ರನ್ ಗಳಿಸಿರುವ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಬ್ಲ್ಯಾಂಡೆಲ್ ಮತ್ತು 9 ರನ್ ಗಳಿಸಿರುವ ಫಿಲಿಪ್ಸ್ ನಾಳೆ ಆಟ ಮುಂದುವರಿಸಲಿದ್ದಾರೆ. 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದೆ.
10 ವಿಕೆಟ್ ಕಬಳಿಸಿದ ವಾಷಿಂಗ್ಟನ್ ಸುಂದರ್
ಎರಡನೇ ಇನ್ನಿಂಗ್ಸ್ ನಲ್ಲೂ ಬಿಗಿ ದಾಳಿ ನಡೆಸಿದ ವಾಷಿಂಗ್ಟನ್ ಸುಂದರ್ 4 ವಿಕೆಟ್ ಕಬಳಿಸಿದ್ದಾರೆ. ಒಟ್ಟು ಹತ್ತು ವಿಕೆಟ್ ಕಿತ್ತು ತನ್ನ ಆಯ್ಕೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ಆರ್ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ. ಶನಿವಾರ ಪಂದ್ಯ ಯಾವ ರೀತಿಯಲ್ಲಿ ಸಾಗಲಿದೆ ಎನ್ನುವ ಕುತೂಹಲ ಮೂಡಿದೆ.