ಹೊಸದಿಲ್ಲಿ : ನಾಗ್ಪುರದಲ್ಲಿ ನಾಳೆ ಭಾನುವಾರ ನಡೆಯಲಿರುವ ಪ್ರವಾಸಿ ಇಂಗ್ಲಂಡ್ ಎದುರಿನ ಎರಡನೇ ಟಿ-20 ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ, ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನು ಅಂತಿಮ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಹಾಗಾದಲ್ಲಿ ಪರ್ವೇಜ್ ರಸೂಲ್ ಅವರು ಅಂತಿಮ ತಂಡದಿಂದ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾನ್ಪುರದಲ್ಲಿ ನಡೆದಿದ್ದ ಮೊದಲ ಟಿ-20 ಪಂದ್ಯದಲ್ಲಿ ಕಳಪೆ ನಿರ್ವಹಣೆ ತೋರಿದ ಭಾರತ, ಅತ್ಯಂತ ನೀರಸವಾಗಿ ಇಂಗ್ಲಂಡ್ ಎದುರು ಸೋಲನುಭವಿಸಿತ್ತು.
ನಾಗ್ಪುರದ ನಿಧಾನ ಗತಿಯ ಅಂಗಣದಲ್ಲಿ ಮಿಶ್ರಾ ಪರಿಣಾಮಕಾರಿ ಬೌಲಿಂಗ್ ನಡೆಸಬಲ್ಲರು ಎಂಬ ವಿಶ್ವಾಸ ಕೊಹ್ಲಿಗೆ ಇದೆ.
ಮೊದಲ ಟಿ-20 ಪಂದ್ಯದಲ್ಲಿ ಯಜುವೇಂದ್ರ ಚಾಹಾಲ್ ತೋರಿರುವ ನಿರ್ವಹಣೆಯನ್ನು ಪರಿಗಣಿಸಿದಾಗ ಎರಡನೇ ಪಂದ್ಯಕ್ಕೆ ಅಮಿತ್ ಮಿಶ್ರಾ ಅವರನ್ನು ಸೇರಿಸಿಕೊಳ್ಳಲು ಕೊಹ್ಲಿ ಬಯಸಿರುವುದರಲ್ಲಿ ಅರ್ಥವಿದೆ. ಮಿಶ್ರಾ ಅವರನ್ನು ಅಂತಿಮ ತಂಡಕ್ಕೆ ಸೇರಿಸಿಕೊಂಡಲ್ಲಿ ಪರ್ವೇಜ್ ರಸೂಲ್ ಅವರನ್ನು ಹೊರಗೆ ಕೂರಿಸಬೇಕಾಗುವುದು ಎಂದು ಅಭಿಪ್ರಾಯಪಡಲಾಗಿದೆ.
ರಸೂಲ್ ಅವರು ಕಾನ್ಪುರ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿ ಇಂಗ್ಲಂಡ್ ಕಪ್ತಾನ ಇಯಾನ್ ಮಾರ್ಗನ್ (38 ಎಸೆತಗಳಲ್ಲಿ 51 ರನ್) ಅವರ ಅಮೂಲ್ಯ ವಿಕೆಟ್ ಕಿತ್ತಿದ್ದರು.